ಲೇಖನ: ಉಮೇಶ ಗೌರಿ.(ಯರಡಾಲ)
“ಕಪ್ಪ ಕೊಡಬೇಕೆ ಕಪ್ಪ… ನಿಮಗೇಕೆ ಕೊಡಬೇಕು ಕಪ್ಪ”… ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಕರುನಾಡಿನ ಹೆಮ್ಮೆಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮಾಜಿ. ಬ್ರಿಟಿಷರ ದಬ್ಬಾಳಿಕೆಯ ಮುಂದೆ ಮಂಡಿಯೂರದೇ ರಾಜ್ಯದ ರಕ್ಷಣೆಗಾಗಿ ಆಂಗ್ಲರ ವಿರುದ್ಧ ಹೋರಾಡಿ ಇಡೀ ನಾಡಿನ ಕೀರ್ತಿ ಪತಾಕೆ ಹಾರಿಸಿದ ವೀರ ವನಿತೆ. ಚನ್ನಮ್ಮಾಜೀಯ ಧೈರ್ಯ,ಸಾಹಸ, ಕಿಚ್ಚು ಇಂದಿಗೂ ಅಜರಾಮರ. ಆದರೆ ಆ ದಿಟ್ಟ ಹೋರಾಟಗಾರ್ತಿಯ ಜನ್ಮಸ್ಥಳ ಕಾಕತಿ ಈಗಲೂ ಪಾಳುಬಿದ್ದ ಸ್ಥಿತಿಯಲ್ಲಿದೆ. ರಾಣಿ ಚನ್ನಮ್ಮಾಜಿ ಹುಟ್ಟಿದ್ದು ಕಿತ್ತೂರಿನಲ್ಲಿ ಅಲ್ಲ.! ಈ ಇತಿಹಾಸವೇ ಅದೆಷ್ಟೋ ಮಂದಿಗೆ ತಿಳಿದೇ ಇಲ್ಲ. ಹೀಗಾಗಿ ಕಿತ್ತೂರು ರಾಣಿ ಚನ್ನಮ್ಮಾಜಿ ಹುಟ್ಟೂರು ಕಾಕತಿ. ಇದು ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುತ್ತಿರುವುದು ಖೇದಕರ.
ಪ್ರಸ್ತುತ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಲಿಂಗಾಯತ ಸಮುದಾಯದ ದೇಸಾಯಿ ಧೂಳಪ್ಪಗೌಡ–ಪದ್ಮಾವತಿ ದಂಪತಿಯ ಪುತ್ರಿಯಾಗಿ ಚನ್ನಮ್ಮಾಜಿ 1778 ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದಳು. ತನ್ನ 15ನೇ ವಯಸ್ಸಿನಲ್ಲಿಯೇ ಕಿತ್ತೂರಿನ ರಾಜಾ ಮಲ್ಲಸರ್ಜ ದೇಸಾಯಿ ಅವರನ್ನು ಮದುವೆಯಾಗಿ ಕಿತ್ತೂರಿನ ರಾಣಿ ಚನ್ನಮ್ಮಾಜಿಯಾದರು.
ಸದ್ಯ ಕಾಕತಿ ಗ್ರಾಮದಲ್ಲಿ ಚನ್ನಮ್ಮಾಜಿಯ ಕುರಿತು ಪ್ರಸ್ತುತವಾಗಿ ಉಳಿದಿರುವ ಕುರುಹು ಎಂದರೇ ಅದು ಕೇವಲ ಪಾಳು ಬಿದ್ದ ದೇಸಾಯಿ ಮನೆತನಕ್ಕೆ ಸೇರಿದ ಬೃಹತ್ ಮನೆ. ಈ ಮನೆಯಲ್ಲಿಯೇ ಚನ್ನಮ್ಮ ಆಟವಾಡಿ ಬೆಳೆದವರು. ಅಲ್ಲಿ ಈಗ ಕೇವಲ ಬಾವಿಯೊಂದು ಮಾತ್ರ ಕಾಣ ಸಿಗುತ್ತಿದ್ದು, ಮನೆಯ ಪಾಳು ಬಿದ್ದ ಗೋಡೆಗಳು ಚನ್ನಮ್ಮ ಅವರ ಅಸ್ತಿತ್ವವನ್ನು ಸಾರಿ ಹೇಳುವಂತಿವೆ. ಪ್ರತಿ ವರ್ಷವೂ ಅಕ್ಟೋಬರ್ 23 ರಂದು ಸರಕಾರವೇ ಚನ್ನಮ್ಮ ಉತ್ಸವವನ್ನು ಕಾಕತಿಯಲ್ಲಿ ನಡೆಸುತ್ತಿದೆ. ಆದರೆ ಕಿತ್ತೂರಿಗೆ ನೀಡಿದ ಪ್ರಾಮುಖ್ಯತೆಯನ್ನು ಕಾಕತಿಗೆ ನೀಡಿಲ್ಲ ಅನ್ನೋದು ಗ್ರಾಮಸ್ಥರ ಬೇಸರವಾಗಿದೆ.
ಬ್ರಿಟಿಷರ ಆಳ್ವಿಕೆ ವಿರುದ್ದ ಹೋರಾಡಿದ ಹಾಗೂ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ವೀರರಾಣಿ ಕಿತ್ತೂರು ಚನ್ನಮ್ಮಾಜಿ ಸಾಹಸ ಆಡಳಿತ, ಶೌರ್ಯ, ದೇಶಭಕ್ತಿ, ತ್ಯಾಗ ಮತ್ತು ಬಲಿದಾನ ಒಟ್ಟಾರೆ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಹಾಗೂ ಚನ್ನಮ್ಮಾಜಿಯವರು ಹುಟ್ಟಿ ಬೆಳೆದ ಕಾರ್ಯ ಕ್ಷೇತ್ರಗಳನ್ನು ಹಾಗೂ ಸ್ಮಾರಕಗಳನ್ನು ಮತ್ತು ಸಮಕಾಲೀನ ಕಿತ್ತೂರು ಪರಂಪರೆಯ ತಾಣಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುವ ಉದ್ದೇಶದಿಂದ ಸರ್ಕಾರವು ಕಿತ್ತೂರು ಅಭಿವೃದ್ದಿ ಪ್ರಾಧಿಕಾರವನ್ನು 2009 ರಲ್ಲಿ ರಚಿಸಲಾಗಿದೆ.
ಆದರೆ, ಸರಕಾರ ಕಿತ್ತೂರು ಅಭಿವೃದ್ಧಿಗೆ ನೂರಾರು ಕೋಟಿ ಖರ್ಜು ಮಾಡಿದ್ರೆ, ಕಾಕತಿಯಲ್ಲಿ ಕೇವಲ ರಾಣಿ ಚೆನ್ನಮ್ಮಾಜಿ ಪ್ರತಿಮೆಯೊಂದಷ್ಟೇ ಕಾಣುವಂತಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಚನ್ನಮ್ಮನ ವಂಶಜರು ಆಳಿದ ಕಾಕತಿಯ ಗುಡ್ಡದ ಮೇಲಿರುವ ಬೃಹತ್ ವಾಡೆಯು ಮಳೆಗಾಳಿಗೆ ಸಿಲುಕಿ ಬಹುತೇಕ ಅವನತಿ ಅಂಚಿನಲ್ಲಿದೆ. ಅಲ್ಲದೇ ಇಲ್ಲಿಗೆ ಅದೆಷ್ಟೋ ಪ್ರವಾಸಿಗರು ಭೇಟಿ ಮಾಡುತ್ತಾರೆ. ಅಲ್ಲಿ ಅದರ ಬಗ್ಗೆ ಮಾಹಿತಿ ನೀಡುವ ಮಾಹಿತಿ ಫಲಕವು ಇಲ್ಲದಾಗಿದೆ.
ಕಿತ್ತೂರು ರಾಣಿ ಚನ್ನಮ್ಮಾಜಿಯ ವಿಜಯೋತ್ಸವನ್ನು ಈ ಬಾರಿ ರಾಜ್ಯಮಟ್ಟದ ಕಿತ್ತೂರು ಉತ್ಸವವಾಗಿ ಆಚರಣೆ ಮಾಡುತ್ತಿರುವ ಹಿನ್ನಲೆ ಕಿತ್ತೂರು ಅಭಿವೃದ್ದಿ ಪ್ರಾಧಿಕಾರವು ವೀರ ವನಿತೆ, ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ರಾಣಿಯ ಬಾಲ್ಯದ ಇತಿಹಾಸ ಇನ್ನಷ್ಟೂ ಜನರಿಗೆ ತಿಳಿಸುವ ನಿಟ್ಟಿನಲ್ಲಿ ವಾಡೆ ಹಾಗೂ ಇತರೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕೆಂದು ಇಡೀ ಗ್ರಾಮಸ್ಥರ ಆಗ್ರಹವಾಗಿದೆ.