ಸಾಗರದ ಅಲೆಗಳ ಆಲಾಪದಲಿ! ಮನ ಬಸಿರಾದಾಗ;ವಾಸ್ತವದ ಒಡಲು

ಉಮೇಶ ಗೌರಿ (ಯರಡಾಲ)
ಸಾಗರದಲ್ಲಿ….!ಗಾಳಿ, ಅಲೆ ಜೋರಾಯಿತು. ಬೋಟ್ ಏರಿಳಿದಂತೆ ಜನರ ಕೂಗಾಟವೂ ಏರಿಳಿಯುತ್ತಿತ್ತು. ಮಗನ ಕಡೆ ನೋಡಿದೆ. ‘ನನಗಂತೂ ಈಜು ಬರುವುದಿಲ್ಲ. ನನ್ನ ಪರ್ಸ್ ಮತ್ತು ಮೊಬೈಲ್ ತೊಗೊಂಡು ನೀ ದಡ ಸೇರು’ ನಗುತ್ತ ಹೇಳಿದೆ.’ಏ ಮಾ ಚುಪ್! ನಾನೇ ನಿನ್ನ ಜಾಕೆಟ್!’ ಎಂದ. ಮನಸು ನಿರಾಳವಾಯಿತು. ಮುಖದಲ್ಲಿ ಮುಗುಳ್ನಗೆ ಮೂಡಿತು. ಮನಸು ಸಂತೃಪ್ತವಾಯಿತು. ಆಗ ಸಾಗರದ ಆಲಾಪ ಇಂಪೆನಿಸಿತು.

 

‘ನಡಿ ಅಮ್ಮ ಟ್ರಿಪ್ ಹೋಗಣ, ಬೀಚ್ ತೋರಿಸೋದಿದೆ, ನಿನ್ ಜೊತೆ ಬೋಟಿಂಗ್ ಹೋಗ್ಬೇಕು.’ಮಗ ಹಾಗೆ ಹೇಳಿದಾಗ ‘ಹೌದಾ!’ ಎನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿದೆ.

ಮಗ ಈಗಿನ ಕಾಲದ ಹುಡುಗರ ಹಾಗೆ ಜೀನ್ಸ್ ಪ್ಯಾಂಟ್, ಟೀಶರ್ಟ್ ತೊಟ್ಟಿದ್ದ. ಹೇರ್ ಸ್ಟೈಲ್, ಕಪ್ಪು ದಾಡಿ, ಮೀಸೆ ಎದ್ದು ಕಾಣುತ್ತಿತ್ತು. ಮನಸಿನ ಉತ್ಸಾಹ ವಯಸ್ಸಿನ ಜೋಶ್‌ನಿಂದ ಕೂಡಿದ ಅವನ ವ್ಯಕ್ತಿತ್ವ ನನಗೆ ಸ್ಫೂರ್ತಿದಾಯಕ. ದೂರದ ಪಯಣ ಪ್ರೀತಿಸುವ ನನಗೆ ಈ ತರಹದ ಸರ್‌ಪ್ರೈಜ್ ಆಗಾಗ ಕೊಡುತ್ತಿದ್ದ. ಮನಸು ಅರಳಿ ಕಣ್ಣುಗಳ ಅಗಲಿಸಿ ನಸು ನಗುತ ಒಪ್ಪಿಗೆ ಸೂಚಿಸಿದೆ.

ಮಕ್ಕಳು ಬೆಳೆದು ದೊಡ್ಡವರಾಗುವುದು ಗಮನಕ್ಕೆ ಬರುವುದಿಲ್ಲ ನಿಜ. ಏಕಾಏಕಿ ನಮ್ಮೆತ್ತರಕ್ಕೆ ಬೆಳೆದು ಬಿಟ್ಟರೆನ್ನುವುದೇ ಆಶ್ಚರ್ಯ. ನಾವು ಅವರ ಹೊರ ಎತ್ತರವನ್ನಷ್ಟೇ ನೋಡುತ್ತಿರುತ್ತೇವೆ. ಆದರೆ ಅವರೊಳಗಿನ ಆಂತರಿಕ ಬೆಳವಣಿಗೆ ಗೋಚರಿಸುವುದಿಲ್ಲ. ಹೆತ್ತವರಿಗೆ ಯಾವತ್ತೂ ತಾವೇ ದೊಡ್ಡವರು, ತಮಗೇ ಅನುಭವ ಜಾಸ್ತಿ ಎನ್ನುವ ಅಮೂರ್ತ ಅಹಮಿಕೆ ಇರುತ್ತದೆ. ಆಗ ಮಕ್ಕಳ ಬೌದ್ಧಿಕ, ಶಾರೀರಿಕ ಸಾಮರ್ಥ್ಯ ಗಣನೆಗೆ ಬರುವುದಿಲ್ಲ. ನಮ್ಮ ಮುಂದೆ ಹುಟ್ಟಿ ಬೆಳೆದವರೆಂದು ಲಘುವಾಗಿ ಪರಿಗಣಿಸುತ್ತೇವೆ. ಕೆಲವು ಸಂದರ್ಭಗಳು ಅದನ್ನು ಸಾಬೀತು ಪಡಿಸುತ್ತವೆ.

ಮಗ ತಿಳಿಸಿದಂತೆ ಸರಿಯಾಗಿ ಮುರುಡೇಶ್ವರಕ್ಕೆ ಹೋಗುವ ವ್ಯವಸ್ಥೆ ಮಾಡಿದ. ಅವಲಕ್ಕಿ ಚೂಡಾ, ಚಿಪ್ಸ್ ತಿನ್ನುತ್ತ, ನಗು ತಮಾಷೆಯಲ್ಲಿ ದಾರಿ ಸವೆದದ್ದೇ ಅರಿವಿಗೆ ಬರಲಿಲ್ಲ. ಮುರುಡೇಶ್ವರ ತಲುಪುವವರೆಗೆ ಸಮುದ್ರ ನೀರಿನ ಜಿಗುಟು ಗಾಳಿ, ಮೀನಿನ ವಾಸನೆ ಆಗಾಗ ಅಸಮಾಧಾನ ಹುಟ್ಟಿಸುತ್ತಿತ್ತು.

ಮುರುಡೇಶ್ವರದ ಸ್ಟಾರ್ ಹೋಟೆಲ್ ತಲುಪಿ ನಿಟ್ಟುಸಿರು ಬಿಟ್ಟೆವು. ಆಧುನಿಕ ಸೌಲಭ್ಯಗಳಿಂದ ಕೂಡಿದ ರೂಮು ಆಕರ್ಷಿಸಿತು. ಲಗೇಜ್ ಒಂದು ಕಡೆ ಇಟ್ಟು ಹುಡುಗ ಹೊರ ಹೋದ.

‘ಬಾಲ್ಕನಿ ತೆರೆದು ಹೊರಗೆ ಹೋಗಮ್ಮ. ಈ ರೂಮಿಗೆ ಸುಂದರ ವೀವ್ ಪಾಯಿಂಟ್ ಇದೆ’ ಮಗ ಹೇಳಿದ ಕೂಡಲೆ ಬಾಲ್ಕನಿ ತೆರೆದೆ.

‘ಅಬ್ಬಾ!’

ಅದೇನು ಆಶ್ಚರ್ಯ? ಕಣ್ಣು ಹಾಯಿಸಿದಷ್ಟು ದೂರ ನೀರೇ ನೀರು! ಸಮುದ್ರದ ತುದಿಗೇ ರೂಮಿತ್ತು. ಪ್ರಕೃತಿಯನ್ನು ಪ್ರೀತಿಸುವ ನನ್ನ ಮನದ ಬಯಕೆಯನ್ನು ನನ್ನ ಕರುಳ ಕುಡಿ ಅರಿತಿದ್ದು ನೋಡಿ ಹೃದಯ ತುಂಬಿ ಬಂದಿತು. ಸುಮಾರು ಹೊತ್ತು ಅಲ್ಲೇ ನಿಂತಿದ್ದೆ… ಮಗನೊಂದಿಗೆ…

ದೊಡ್ಡ ಮಗ್ಗ್ ಆಕಾರದ ಕಪ್‌ನಲ್ಲಿ ಫಿಲ್ಟರ್ ಕಾಫಿ ನೋಡಿ ಮಕ್ಕಳಂತೆ ಹಿಗ್ಗಿದೆ. ಮಗನ ಮುಗುಳ್ನಗೆಯಲ್ಲಿ ರಾಜ ಗಾಂಭಿರ್ಯವಿತ್ತು. ಹೌದು ಮಕ್ಕಳು ದೊಡ್ಡವರಾಗುತ್ತಾರೆ. ನಾವು ಇನ್ನೂ ದೊಡ್ಡವರಾಗಿ ಮತ್ತೆ ಮಕ್ಕಳಂತೆ ಆಡುತ್ತೇವೆ. ಮನಸಿನ ಒಳ ಒಳಗೇ ನಗು ಹಾದಿ ಹೋಯಿತು.

ಸಮುದ್ರದ ತೀರದಲಿ, ಕೈಯಲ್ಲೊಂದು ಭರ್ತಿ ಕಾಫಿ ಕಪ್, ಜೋಕ್ಸ್ ಹೇಳಿ ನಗಿಸುವ ಮಗ, ಇನ್ನೇನು ನೆನಪಿಗೆ ಬಾರದು. ಎಲ್ಲಾ ಮರೆತು ಸಮಯ ಕಳೆದೆ.

ಬೋಟಿಂಗ್ ಹೋಗಲು ಸರಿಯಾದ ಬಟ್ಟೆ ತೊಡುವಂತೆ ಹೇಳಿದ. ಸಿದ್ದರಾಗಿ ಉಪಹಾರ ಮುಗಿಸಿಕೊಂಡು ಸಾಗರದೆಡೆಗೆ ಸಾಗಿದೆವು. ಮರಳ ರಾಶಿಯಲಿ ಹೆಜ್ಜೆ ಹಾಕುತ್ತ, ಅಲೆಗಳ ನೋಡುತ್ತಿದ್ದೆ. ಅಷ್ಟರಲ್ಲಿ ಮಗ ಟಿಕೇಟ್ ತೆಗೆದುಕೊಂಡು ಬಂದ. ಬೋಟ್ ಸಿದ್ದವಾಗಿತ್ತು. ಮಗನ ಕೈ ಹಿಡಿದೇರಿದೆ.

ಹದಿನಾರು ಜನರ ಬೋಟಿತ್ತು. ಎಲ್ಲಾ ಸೀಟುಗಳು ತುಂಬಿದವು. ಇಬ್ಬರು ಹುಡುಗರು ದೋಣಿ ನಡೆಸುವವರು ಎರಡೂ ತುದಿಗೆ ಒಬ್ಬೊಬ್ಬರು ಕುಳಿತರು. ‘ಡರ್ರ್…ರ್ರ್…’ ಶಬ್ದದೊಂದಿಗೆ ವೇಗವಾಗಿ ಸಮುದ್ರದೊಳಗೆ ಎಳೆದುಕೊಂಡು ಹೋಯಿತು. ಒಂದಿಷ್ಟು ಮಕ್ಕಳು ‘ಹುಯ್ಯ್’ ಎಂದು ಹರುಷದ ಕೂಗು ಹಾಕಿದವು.

ಸಮುದ್ರ ಸಮುದ್ರವೇ! ನೋಡಲು ಅತ್ಯಂತ ಸುಂದರ. ಮನ ಮೋಹಕ. ಅದರ ಆಳ ಅಗಲ ನೆನೆದರೆ ಮೈ ಜುಂ ಎನ್ನುತ್ತದೆ. ನಮ್ಮ ಬೋಟ್ ನಟ್ಟ ನಡುವೆ ಸಾಗರದಲ್ಲಿತ್ತು. ಸುತ್ತಲೂ ನೀರೇ ನೀರು! ಆ ಥ್ರಿಲ್ ಅನುಭವ ಅನುಭವಿಸಿಯೇ ಪಡೆಯಬೇಕು.

ನಿಧಾನಕೆ ಅಲೆಗಳ ವೇಗ ಹೆಚ್ಚಾಯಿತು. ಕೆಲವು ಹೆಣ್ಣುಮಕ್ಕಳು, ಮಕ್ಕಳು ಭಯದಿಂದ ಕೂಗಲಾರಂಭಿಸಿದರು. ನಾವಿಬ್ಬರು ತಾಯಿ ಮಗ ಅವರನ್ನು ನೋಡಿ ನಕ್ಕು ಅವರಿಗೇ ಧೈರ್ಯ ಹೇಳಿದೆವು.

ಅಷ್ಟರಲ್ಲಿ ಬೋಟಿನ ಹುಡುಗರು ಕೂಗಿದರು.‘ಸಬ್ ಕೊ ಜಾಕೆಟ್ ದೇ ಭಯ್ಯಾ’.
ಅವನು ಹಾಗೆ ಕೂಗುವಾಗ ಬೋಟ್ ಅರ್ಧ ಚಕ್ರಕಾರದಲ್ಲಿ ಡೋಲಾಯಮಾನವಾಯಿತು. ಒಂದು ಕ್ಷಣ ಏನೋ ಅನಾಹುತ ಕಾದಿರಬಹುದು ಎನಿಸಿತು. ಆದರೂ ತೋರಗೊಡದೆ ಸುಮ್ಮನಿದ್ದೆ.

ಜಾಕೆಟ್ ಪಾಸ್ ಮಾಡಿದರು. ಒಬ್ಬರಿಂದೊಬ್ಬರಿಗೆ ಕೊಟ್ಟೆವು. ಜಾಕೆಟ್ ಮುಗಿಯಲು ಬಂತು. ಕೊನೆಯ ಎರಡು ಜಾಕೆಟ್ ಕೈಯಲ್ಲಿತ್ತು. ಅದನ್ನೂ ಕೊಟ್ಟು ಬಿಡು ಎನ್ನುವಂತೆ ಮಗ ಸನ್ನೆ ಮಾಡಿದ. ನಮಗಿಲ್ಲವೆಂದು ಮುಖ ಮಾಡಿದೆ. ಇರಲಿ ಬಿಡು ಎನ್ನುವಂತೆ ಕಣ್ಮುಚ್ಚಿ ಸೂಚಿಸಿದ. ಪಕ್ಕದ ಸೀಟಿನಲ್ಲಿ ಚಿಕ್ಕ ವಯಸ್ಸಿನ ತಾಯಿ ಮಗ ಇದ್ದರು. ಭಯದಿಂದ ನಡುಗುತ್ತಿದ್ದರು. ಮಗನ ಆಣತಿಯಂತೆ ಅವರಿಗೆ ಜಾಕೆಟ್ ಪಾಸ್ ಮಾಡಿ ನಿಟ್ಟುಸಿರು ಬಿಟ್ಟೆ.

ಗಾಳಿ, ಅಲೆ ಜೋರಾಯಿತು. ಬೋಟ್ ಏರಿಳಿದಂತೆ ಜನರ ಕೂಗಾಟವೂ ಏರಿಳಿಯುತ್ತಿತ್ತು. ಮಗನ ಕಡೆ ನೋಡಿದೆ. ‘ನನಗಂತೂ ಈಜು ಬರುವುದಿಲ್ಲ. ನನ್ನ ಪರ್ಸ್ ಮತ್ತು ಮೊಬೈಲ್ ತೊಗೊಂಡು ನೀ ದಡ ಸೇರು’ ನಗುತ್ತ ಹೇಳಿದೆ.

‘ಯಾಕ್ ಮಾ ಜಾಕೆಟ್ ಸಿಗಲಿಲ್ಲ ಅಂತ ಹೆದ್ರಿದ್ಯಾ?’

‘ಹೂಂ ಮತ್ತೆ ಬೋಟ್ ಎಷ್ಟು ತೇಲಾಡ್ತಿದೆ ನೋಡು. ಯಾವ ಘಳಿಗೆ ಏನು ಆಗುತ್ತೊ? ಬೋಟ್ ಮಗುಚಿ ಬೀಳಲು ಎಷ್ಟು ಹೊತ್ತು?’ ಅಷ್ಟರಲ್ಲಿ ಮತ್ತೆ ಎಲ್ಲರೂ ಕೂಗಿದರು. ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ.

‘ಏ ಮಾ ಚುಪ್! ನಾನೇ ನಿನ್ನ ಜಾಕೆಟ್!!!’ ಎಂದ. ಮನಸು ನಿರಾಳವಾಯಿತು. ಮುಖದಲ್ಲಿ ಮುಗುಳ್ನಗೆ ಮೂಡಿತು. ಮನಸು ಸಂತೃಪ್ತವಾಯಿತು. ಆಗ ಸಾಗರದ ಆಲಾಪ ಇಂಪೆನಿಸಿತು.

ಬೋಟ್ ನಡೆಸುವವ ಡಾಲ್ಫಿನ್ ತೋರಿಸುವಾಗ ಆತಂಕವಿಲ್ಲದೆ ವೀಕ್ಷಿಸಿದೆ. ಜಾಕೆಟ್ ಹಾಕಿಕೊಂಡವರಿಗಿಂತಲೂ ನಿರಾಳವಾಗಿ, ಬೋಟಿಂಗ್ ಥ್ರಿಲ್ ಅನುಭವಿಸಿದೆ.

ಕೊನೆಗೆ ಸುರಕ್ಷಿತವಾಗಿ ದಡ ಸೇರಿದೆವು. ಕೆಲವೊಮ್ಮೆ ನಾವು ಹಿರಿಯರು ಮಕ್ಕಳ ಕ್ಷಮತೆಯನ್ನು ಗುರುತಿಸುವುದರಲ್ಲಿ ಸೋಲುತ್ತೇವೆ. ಆದರೆ ಅವರೇ ನಮ್ಮನ್ನು ಗೆಲ್ಲಿಸುತ್ತಾರೆ.

 

ಲೇಖಕರು:ಸಿಕಾ ಕಲಬುರ್ಗಿ

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";