ಬೆಳಗಾವಿ : ವಿಧಾನಮಂಡಲ ಅಧಿವೇಶನ ಕೊನೆಗೂ ಇಂದು ತೆರೆಬಿದ್ದಿದೆ. ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಬೆಳಗಾವಿ ಅಧಿವೇಶನದ ಪ್ರಮುಖ ಘಟ್ಟವಾಗಿದೆ. ಒಟ್ಟಾರೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಎಂದಿನಂತೆ ಬಿರುಸಿನ ಮಾತಿನ ಸಮರಕ್ಕೆ ಬೆಳಗಾವಿ ಅಧಿವೇಶನ ಈ ಬಾರಿಯೂ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಸಾಕಷ್ಟು ಚರ್ಚೆ ಆಗದೆ ಇರುವುದು ಈ ಭಾಗದ ಜನರಿಗೆ ಬೇಸರ ತಂದಿದೆ.
ಡಿಸೆಂಬರ್ 15 ರಿಂದ ಡಿಸೆಂಬರ್ 24 ರವರೆಗೆ ಹತ್ತು ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಸಲಾಗಿದ್ದು, ಒಟ್ಟಾರೆ 52 ಗಂಟೆಗಳ ಕಾಲ ಕಲಾಪ ನಡೆಸಲಾಗಿದೆ.ಶೂನ್ಯವೇಳೆಯಲ್ಲಿ 24 ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.ಆರಂಭದಲ್ಲಿ 149 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶಾಸಕರ 1,921 ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ 5 ಗಂಟೆ ಚರ್ಚೆ ನಡೆದಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಬಗ್ಗೆ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ಒಟ್ಟು 10 ವಿಧೇಯಕಗಳು ಅಂಗೀಕಾರ ಮಾಡಲಾಗಿದೆ.
15 ನೇ ವಿಧಾನಸಭೆಯ 11 ನೇ ಕಾರ್ಯಕಲಾಪ ಇದಾಗಿದೆ. ಪ್ರಶ್ನೋತ್ತರ ಕಲಾಪ ಶೇಕಡ 99 ರಷ್ಟು ಯಶಸ್ವಿಯಾಗಿದೆ ಎಂದು ವಿಧಾನಸಭೆ ಕಾರ್ಯಕಲಾಪದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಹಿತಿ ನೀಡಿದ್ದಾರೆ.