ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಮಲ್ಲಮ್ಮಳ ತ್ಯಾಗ ಪರಾಕ್ರಮಗಳ ನೆನಪಿಗಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಳವಡಿ ಗ್ರಾಮದಲ್ಲಿ ಪ್ರತಿ ವರ್ಷ ಆಚರಿಸಲಾಗುವ ಬೆಳವಡಿ ಮಲ್ಲಮ್ಮ ಉತ್ಸವವನ್ನು ಈ ವರ್ಷ ಮಾ.28 ರಂದು ಕೇವಲ ಒಂದು ದಿನ ಮಾತ್ರ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿರುವ ಕ್ರಮವನ್ನು ವಿರೋಧಿಸಿ ಗ್ರಾಮದ ಯುವಕರು,ಹಿರಿಯರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮದ ರಾಣಿ ಮಲ್ಲಮ್ಮ ವರ್ತುಲದಲ್ಲಿ ಸೋಮವಾರ ಬೆಳಗ್ಗೆಯಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ರಾಣಿ ಮಲ್ಲಮ್ಮಳ ಉತ್ಸವವನ್ನು ಎರಡು ದಿನ ಅದ್ದೂರಿಯಾಗಿ ಆಚರಣೆ ಮಾಡಬೇಕು. ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ಈ ಕುರಿತು ಸ್ಪಷ್ಟನೆ ನೀಡಬೇಕು. ಅಲ್ಲಿವರೆಗೂ ಯಾವುದೆ ಕಾರಣಕ್ಕೂ ಹೋರಾಟ ಕೈ ಬಿಡುವುದಿಲ್ಲ ಎಂದು ರಸ್ತೆಯಲ್ಲೇ ಭಜನೆ ಮಾಡುತ್ತ ಹೋರಾಟ ನಿರತರಿಗೆ ಅಡುಗೆ ಮಾಡಿ ಹೋರಾಟ ನಡೆಸಿದ್ದಾರೆ.
ಪ್ರತಿಭಟನಾ ನಿರತ ಗ್ರಾಮಸ್ಥರಿಗೆ ಬೆಂಬಲ ವ್ಯಕ್ತಪಡಿಸಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೈತ ಹೋರಾಟಗಾರ್ತಿ ಮಂಜುಳಾ ಪೂಜೇರ, ಪ್ರಕಾಶ ಹುಂಬಿ ಮಾತನಾಡಿದರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ಎರಡು ದಿನ ಉತ್ಸವ ಆಚರಣೆಗೆ ಸರ್ಕಾರದಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಸಂಜೆ ತಿಳಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ಕೇವಲ ಒಂದು ದಿನದ ಉತ್ಸವ ಮಾಡುವುದಾದರೆ ಉತ್ಸವವೇ ಬೇಡ ಎರಡು ದಿನ ಉತ್ಸವ ಆಚರಣೆ ಘೋಷಣೆ ಮಾಡುವವರೆಗೂ ಅಹೋರಾತ್ರಿ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಇದೇ ವೇಳೆ ಎಚ್ಚರಿಸಿದ್ದಾರೆ.