ನವದೆಹಲಿ: 20: ಭಾರತ ಸ್ವತಂತ್ರಗೊಂಡಿದ್ದು 1947 ರಲ್ಲಿ ಅಲ್ಲ ಅದು ಬ್ರಿಟಿಷರು ನೀಡಿದ ಭಿಕ್ಷೆ ನಿಜವಾಗಲೂ ಸ್ವತಂತ್ರ ಸಿಕ್ಕಿದ್ದು 2014 ರಲ್ಲಿ ಅನ್ನೋ ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ ಅವರ ಹೇಳಿಕೆಯನ್ನು 91ರ ಪ್ರಾಯದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾ ಬಾಯಿ ಚಿಟ್ಟಾಲೆ ತೀವ್ರವಾಗಿ ಖಂಡಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ಅವರ ಈ ಹೇಳಿಕೆ ಸಕತ್ ಸುದ್ದಿಯಾದ ಬೆನ್ನಲ್ಲೇ ಲೀಲಾಬಾಯಿ ಅವರು ಮಾತನಾಡಿದ್ದು ಕಂಗನಾ ಹೇಳಿಕೆ ದೇಶದ್ರೋಹವಾಗಿದ್ದು, ಸ್ವತಂತ್ರಕ್ಕಾಗಿ ಹೋರಾಡಿ ಮಡಿದ ತ್ಯಾಗಮಯಿ ದೇಶಪ್ರೇಮಿಗಳ ಭಾವನೆಗೆ ಧಕ್ಕೆ ತಂದಿದೆ ಎಂದಿದ್ದಾರೆ.
ಕಂಗನಾ ಅವರ ಈ ಹೇಳಿಕೆ ದೇಶವಿರೋಧಿ ಹೇಳಿಕೆಯಾಗಿದ್ದು ಅವರಿಗೆ ಜೈಲು ಶಿಕ್ಷೆ ಆಗಬೇಕು ಅಂತ ಆಗ್ರಹಿಸಿದ್ದಾರೆ. ಅವರ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ ಅವರು ಕಂಗನಾರಿಗೆ ತಕ್ಕ ಬುದ್ಧಿವಾದ ಹೇಳಬೇಕೆಂದು ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಲೀಲಾಬಾಯಿ ಹೇಳಿದ್ದಾರೆ.
ಇಂತಹ ಯಕಶ್ಕಂಚಿತ್ ಅರಿವಿಲ್ಲದ ನಟಿಗೆ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪುರಸ್ಕಾರ ದೊರೆತಿರುವುದು ಶೋಚನೀಯ ಇದು ನನ್ನ ನಿರಾಶೆಗೆ ಕಾರಣವಾಗಿದೆ ಎಂದರು. ಇದೇ ಸ್ವತಂತ್ರ ಸಂಗ್ರಾಮದ ಆ ದಿನಗಳಲ್ಲಿ ನಾನು ನನ್ನ ಹನ್ನೆರಡನೇ ವಯಸ್ಸಲ್ಲಿ ಗಾಂಧೀಜಿಯ ಸೂಚನೆ ಮೇರೆಗೆ ಇಂಗ್ಲಿಷ್ ವಿದ್ಯಾಭ್ಯಾಸ ತ್ಯಜಿಸಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿ ಬಂದವಳು.ಆ ಕಾಲದಲ್ಲಿ ನನ್ನ ಮೂವರು ಗೆಳತಿಯರ ಜೊತೆ ಸೀತಾಯ್ಯ ಆರ್ಟ್ಸ್ ಕಾಲೇಜಿನ ಗೇಟಿನ ಬದಿಯಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಕೂಗಿದ್ದಕ್ಕಾಗಿ ಬ್ರಿಟಿಷರು ನಮ್ಮನ್ನು ಬಂಧಿಸಿದ್ದರು. ಹದಿನೈದು ವರ್ಷದ ಕೆಳಗಿನ ವಯಸ್ಸಿನವರನ್ನು ಜೈಲಿಗೆ ಹಾಕಬಾರದೆಂದು ಬ್ರಿಟಿಷ್ ಕಾನೂನಿನ ಅನ್ವಯ ಸಂಜೆಯವರೆಗೆ ನಮ್ಮನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿಟ್ಟು ಬಳಿಕ ಬಿಡುಗಡೆ ಮಾಡಿದ್ದರು. ಹೀಗೆ ನನ್ನಂತ ಲಕ್ಷಾಂತರ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದಾರೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನಪಿಸಿದ ಲೀಲಾಭಾಯಿ , ಕಂಗನಾ ಇಂತಹ ಹೇಳಿಕೆ ನೀಡುವ ಮೂಲಕ ಅವರೆಲ್ಲರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ಎಲ್ಲವನ್ನು ತ್ಯಜಿಸಲು ಸಿದ್ಧರಾಗಿ ಜಾತಿ ಮತ ಭೇದವಿಲ್ಲದೆ ಜನರು ಮುಂದೆ ಬರುತ್ತಿರುವುದನ್ನು ನೇರವಾಗಿ ನೋಡಿದವಳು ನಾನು ಜೊತೆಗೆ ಆ ದಿನಗಳನ್ನು ಸ್ವತಃ ಅನುಭವಿಸಿದವಳು ನಾನು. ಮನೆಯ ಏಕಮಾತ್ರ ಸಹೋದರನನ್ನು ಮೂರುವರೆ ವರ್ಷಗಳ ಕಾಲ ಜೈಲಿಗೆ ಹಾಕಿದಾಗ ಒಂದು ಮುಸ್ಲಿಂ ಕುಟುಂಬ ನಮ್ಮನ್ನು ಸಂರಕ್ಷಿಸಿತ್ತು. ನಟಿ ಕಂಗನಾ ಅವರ ಈ ಬಾಲಿಶವಾದ ಹೇಳಿಕೆಯನ್ನು ಖಂಡಿಸುತ್ತೇನೆ. ನಿಜಕ್ಕೂ ಇದು ದೇಶದ್ರೋಹದ ಹೇಳಿಕೆಯಾಗಿದ್ದು ಇಂತಹ ಹೇಳಿಕೆ ಕೇಳಿಸಿಕೊಂಡ ಮುಂದಿನ ತಲೆಮಾರು ನಮ್ಮ ಕುರಿತು ಹೇಗೆ ಚಿಂತಿಸಬಹುದು. ದೇಶದ ಭವಿಷ್ಯ ಹೇಗಿರಬಹುದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೋಟ್ಯಂತರ ಜನರು ಭಿಕ್ಷುಕರೇ ಅಂತ ಪ್ರಶ್ನಿಸಿದ್ದಾರೆ.
ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆದಿದ್ದು ಭಿಕ್ಷೆಯಲ್ಲ ಬದಲಾಗಿ ಅದೊಂದು ಕಠಿಣ ಪರೀಕ್ಷೆಯಾಗಿತ್ತು ಎಂದು ಲೀಲಾ ಬಾಯಿ ಹೇಳಿದರು.
ಸ್ವಾತಂತ್ರ್ಯ 75ನೇ ವರ್ಷದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಸಂದರ್ಭದಲ್ಲಿ ಕಂಗನಾ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.