ಕೈಬೀಸಿ ಕರೆಯುತಿದೆ ಉಡಿಕೇರಿ “ಡಿಜಿಟಲ್ ಗ್ರಂಥಾಲಯ”

ಬೈಲಹೊಂಗಲ: ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ವಿನೂತನವಾಗಿ ನಿರ್ಮಾಣವಾಗಿರುವ ಡಿಜಿಟಲ್ ಗ್ರಂಥಾಲಯ ‌ನಿಜಕ್ಕೂ ಬಹಳ ಅದ್ಭುತ ಹಾಗೂ ಆಕರ್ಷಕವಾಗಿದೆ.

ಬಣ್ಣ ಬಣ್ಣದಿಂದ ಕಂಗೊಳಿಸುವ ಕೊಠಡಿ, ಮನಸಿಗೆ ಮುದ ನೀಡುವ ಭಿತ್ತಿಚಿತ್ರಗಳು, ಆರಾಮದಾಯಕ ಆಸನ‌ ವ್ಯವಸ್ಥೆ, ವಿಭಿನ್ನವಾದ ಪುಸ್ತಕಗಳು, ಮನಸಿಗೆ ನಾಟುವ‌ ಗೋಡೆ ಬರೆಹ ಎಲ್ಲವೂ ತುಂಬಾ ಉಪಯುಕ್ತ. ಓದುಗರನ್ನು ಕೈಬೀಸಿ ಕರೆಯುತಿದೆ. ಒಳಗೆ ಕಾಲಿಟ್ಟರೆ ಓದದೇ ಇರಲಾಗದು ಅಂತಹ ಪರಿಸರ ನಿರ್ಮಾಣ ‌ಅಲ್ಲಿದೆ.

“ನಹೀ ಜ್ಞಾನೇನ‌ ಸದೃಶಂ” ಎಂಬ ಮಾತಿನಂತೆ ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ. ಜ್ಞಾನಿಯು ಎಲ್ಲೆಡೆ ಗೌರವಿಸಲ್ಪಡುತ್ತಾನೆ. ಅಂತಹ ಅಮೂಲ್ಯ ‌ಶ್ರೇಷ್ಠವಾದ ಜ್ಞಾನವನ್ನು ಪಡೆಯಲು ನಮಗೆ ಪುಸ್ತಕಗಳೇ ಆಸರೆ. ಪುಸ್ತಕಗಳು ಜ್ಞಾನಾರ್ಜನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಒಂದು ಉತ್ತಮ ಪುಸ್ತಕ ನೂರು ಜನ ಸ್ನೇಹಿತರಿಗೆ ಸಮಾನ‌. ಅಂತಹ ಪುಸ್ತಕಗಳ ಆಗರವೇ ಗ್ರಂಥಾಲಯ. ಗ್ರಂಥಾಲಯ ಜ್ಞಾನ‌ ಸಂಪಾದನೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಅಂಥಹ ಗ್ರಂಥಾಲಯವು ಪ್ರತಿಯೊಬ್ಬರಿಗೂ ನಿಲುಕಬೇಕು. ಎಲ್ಲೆಡೆ ಲಭ್ಯವಾಗಬೇಕು ಆಗ ಮಾತ್ರ ಎಲ್ಲರೂ ಜ್ಞಾನ ಪಡೆಯಬಹುದು.

ಇಂದಿನ ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ ಚೆಂದವಾಗಿರಬೇಕಾದರೆ ನಮಗೊಂದು ಉದ್ಯೋಗ ಬೇಕು. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವುದು ಸುಲಭವಲ್ಲ. ಎಷ್ಟು ಓದಿದರೂ‌ ಕಡಿಮೆಯೆ. ಹೆಚ್ಚೆಚ್ಚು ಓದಿನ ಅಗತ್ಯವಿದೆ. ಆದ್ದರಿಂದ ಹಳ್ಳಿಗಳಲ್ಲಿ ಎಲ್ಲರಿಗೂ ಓದಲು ಬೇಕಾದ ಪುಸ್ತಕಗಳು, ಪ್ರಶಾಂತ ಸ್ಥಳ ಸಿಗುವುದು ಕಷ್ಟ. ಅದರಲ್ಲೂ ಕೂಡ ಬಡ ವಿದ್ಯಾರ್ಥಿಗಳಿಗೆ ಇಂತಹ ಗ್ರಂಥಾಲಯಗಳು ಬಹಳಷ್ಟು ಆಸರೆಯಾಗುತ್ತವೆ.
ಪಾಲಕರು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು. ಮಕ್ಕಳಿಗೆ ಪುಸ್ತಕ ಪ್ರೀತಿಯನ್ನು ಬೆಳೆಸಬೇಕು.ಅಂತಹ ಕಾರ್ಯಕ್ಕೆ ಗ್ರಂಥಾಲಯ ತುಂಬಾ ‌ಸಹಾಯಕಾರಿ.

ನಗರದಲ್ಲಿರುವ ಜನರಿಗೆ ಸಿಗುವ ಸೇವೆಯನ್ನು ಗ್ರಾಮಾಂತರ ಜನರಿಗೂ ತಲುಪುವಂತೆ ಒಂದು ಉತ್ತಮ ದರ್ಜೆಯ ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡ ಒಳ್ಳೆಯ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಿದ ಗ್ರಾಮ‌ ಪಂಚಾಯತಿಯ ಅಧಿಕಾರಿಗಳ ಹಾಗೂ ಎಲ್ಲ ಜನಪ್ರತಿನಿಧಿಗಳ ಕಾರ್ಯ ಶ್ಲಾಘನೀಯ.

ಉಡಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಂಡು,ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟವನ್ನು ವೃದ್ಧಿಸಿಕೊಳ್ಳುವಂತಾಗಲಿ.

 

 

 

ವರದಿ:ಶಿವಾನಂದ ಉಳ್ಳಿಗೇರಿ.(ಉಡಿಕೇರಿ)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";