ಬೆಳಗಾವಿ: ಬಸ್‌ನಿಂದ ವಿದ್ಯಾರ್ಥಿನಿಯರಿಬ್ಬರು ಕೆಳಗೆ ಬಿದ್ದರೂ ಚಾಲಕ ಬಸ್ ನಿಲ್ಲಿಸದಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಬಸ್ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡು, ರಸ್ತೆ ತಡೆದು ಪ್ರತಿಭಟಿಸಿದ ಘಟನೆ ಶುಕ್ರವಾರ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ ಜರುಗಿದೆ.
ಬೆಳಗಾವಿ-ತಿಗಡಿ ಮಾರ್ಗದ ಬಸ್ ಮೊದಲೇ ಪ್ರಯಾಣಿಕರಿಂದ ತುಂಬಿತ್ತು. ಬೆಣಚಿನಮರಡಿ, ಗಿರಿಯಾಲ, ತಿಗಡಿ ಗ್ರಾಮಗಳಿಗೆ ಹೋಗುವ ವಿದ್ಯಾರ್ಥಿಗಳೆಲ್ಲ ಈ ಬಸ್ ಹತ್ತಿದ್ದಾರೆ. ಬಸ್ ಹೊರಡಲೆತ್ನಿಸಿದಾಗ ವಿದ್ಯಾರ್ಥಿನಿಯರಿಬ್ಬರು ಚಕ್ರದ ಬಳಿ ಬಿದ್ದಿದ್ದಾರೆ. ಅದೃಷ್ಟಾವಶತ್ ಯಾರಿಗೂ ಏನೂ ಆಗಿಲ್ಲ. ಕೂಡಲೇ ನಿರ್ವಾಹಕ ಸೀಟಿ ಹೊಡೆದು ಚಾಲಕನ ಗಮನಕ್ಕೆ ತಂದರೂ ಬಸ್ ನಿಲ್ಲದೇ ಮುಂದೆ ಹೋಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಸ್ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿ ವಾಹನಗಳನ್ನು ತೆರವುಗೊಳಿಸಿದರು.
ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ‘ತರಗತಿಗಳು ಮುಗಿದ ಬಳಿಕ ಸಾಯಂಕಾಲ ಹಿರೇಬಾಗೇವಾಡಿಯಿಂದ ಬೆಣಚಿನಮರ್ಡಿ, ಗಿರಿಯಾಲ ಹಾಗೂ ತಿಗಡಿ ಗ್ರಾಮಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯ ಇಲ್ಲ. ಒಂದೆರಡು ತಾಸು ಬಸ್ ಸ್ಟಾಪ್ ಸ್ಥಳದಲ್ಲೇ ಕಾಯ್ದು ಬಸ್ ಬಂದ ಮೇಲೆ ಎಷ್ಟೇ ಕಿಕ್ಕಿರಿದು ತುಂಬಿದ್ದರೂ ಅನಿವಾರ್ಯವಾಗಿ ಇದ್ದ ಒಂದು ಬಸ್ ಹತ್ತಿ ಹೋಗಲೇ ಬೇಕು. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಪರಿಸ್ಥಿತಿ ಅರಿತು ಸಮರ್ಪಕ ಬಸ್ ಸೇವೆ ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು.