ಬೆಂಗಳೂರು, ಫೆ 20: ಹರಿಹರ ಕ್ಷೇತ್ರದ ತುಂಗಭದ್ರಾ ನದಿ ತಟದಲ್ಲಿ 108 ಯೋಗ ಮಂಟಪಗಳನ್ನು ನಿರ್ಮಿಸಿ ಉತ್ತರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿಯನ್ನು ಹಮ್ಮಿಕೊಳ್ಳಲಾಗಿದೆ.ಮುಂಬರುವ ದಿನಗಳಲ್ಲಿ ಇದು ಉತ್ತಮ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹರಿಹರದ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ವಚನಾನಂದ ಜಗದ್ಗುರುಗಳು ತುಂಗಾರತಿ ಕಾರ್ಯಕ್ರಮ ಏರ್ಪಡಿಸಲು ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡು ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಪ್ರತಿನಿತ್ಯ ತುಂಗ ಭದ್ರೆಯ ಪೂಜೆ ನಡೆಯಲು ಅನುಕೂಲ ಕಲ್ಪಿಸಲಾಗುತ್ತಿದೆ. ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಸೇತುವೆಯ ಎರಡೂ ಬದಿಗಳಲ್ಲಿ ನಡಿಗೆ ಪಥ ನಿರ್ಮಿಸುವ ಚಿಂತನೆ ಇದೆ. ಇದನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ಸಮರ್ಪಣೆ ಮಾಡಲಾಗುವುದು ಎಂದರು.
ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿ:ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ರಸ್ತೆ, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ, ಹರಿಹರ ನಗರಕ್ಕೆ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.