ಇಂದು ಲಾಲ್‌ ಬಹದ್ದೂರ್‌ ಶಾಸ್ತ್ರಿಜೀ ಪುಣ್ಯ ಸ್ಮರಣೆ

ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಪುಣ್ಯ ಸ್ಮರಣೆಯನ್ನು ಪ್ರತಿವರ್ಷ ಜನವರಿ 11ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ಶಾಸ್ತ್ರಿಯವರು ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಮೊಘಲ್‌ಸರಾಯ್‌ನಲ್ಲಿ 1904 ಅಕ್ಟೋಬರ್‌ 2ರಂದು ಜನಿಸಿದರು. ಗಾಂಧಿ ಜಯಂತಿ ದಿನದಂದೆ ಶಾಸ್ತ್ರಿಯವರ ಜನ್ಮ ದಿನಾಚರಣೆ ಆಚರಿಸಲಾಗುತ್ತದೆ. ಅವರ ತಂದೆ ಶಾರದಾ ಪ್ರಸಾದ್‌ ಮತ್ತು ತಾಯಿ ರಾಮದುಲಾರಿ ದೇವಿ. ಶಾಸ್ತ್ರಿಯವರು ಶಾಲೆಯನ್ನು ತೊರೆದು 1920ರಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಅಹಿಂಸಾತ್ಮಕ ಸ್ವಾತಂತ್ಯ ಚಳವಳಿಯಲ್ಲಿ ಭಾಗವಹಿಸಿ. ನಮ್ಮ ದೇಶದ ಸ್ವಾತಂತ್ಯಕ್ಕಾಗಿ ಶ್ರಮಿಸಿದರು.

ಲಾಲ್‌ ಬಹಾದ್ದೂರ ಶಾಸ್ತ್ರಿ ಗಾಂಧಿ ತತ್ವಗಳಲ್ಲಿ ನಂಬಿಕೆ ಇಟ್ಟ ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಈ ದೇಶ ಕಂಡ ಸರಳ ಹಾಗೂ ಸಜ್ಜನ ಅತ್ಯುತ್ತಮ ಪ್ರಧಾನಿ. ಮೌಲ್ಯ ಬದ್ಧ ರಾಜಕಾರಣಕ್ಕೆ, ಪ್ರಾಮಾಣಿಕತೆಗೆ ಅವರು ಹೆಸರುವಾಸಿಯಾಗಿದ್ದರು. ತನ್ನ ಅಚಲ ನಿರ್ಧಾರ, ಅದಮ್ಯ ಸಮಯ ಪ್ರಜ್ಞೆ, ಆಗಾಧ ಅರಿವು ಇವುಗಳಿಂದ ಅಧಿಕಾರದುದ್ದಕ್ಕೂ ಎದುರಾದ ಎಲ್ಲ ರಾಷ್ಟ್ರೀಯ, ರಾಜಕೀಯ ವಿಪ್ಲವಗಳನ್ನು ಸಮರ್ಥವಾಗಿ ನಿಭಾಯಿಸಿದರು. ದೇಶದ ಆರ್ಥಿಕ ಹಾಗೂ ಸಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದರು.

 ‘ಭಾರತದ ಸಮಗ್ರತೆ ಹಾಗೂ ರಾಷ್ಟ್ರ ಧ್ವಜದ ಗೌರವ ಕಾಪಾಡಲು ನಮ್ಮ ಬದುಕಿನ ಕೊನೆ ಕ್ಷ ಣದ ವರೆಗೂ ಹೋರಾಡುತ್ತೇವೆ. ಈ ವಿಷಯದಲ್ಲಿ ನಾವೂ ಸಾವಿಗೂ ಅಂಜುವುದಿಲ್ಲ’ ಹಾಗೂ ‘ಜೈವಾನ್‌ ಜೈ ಕಿಸಾನ್‌’ ಎಂಬುದು ಅವರ ಪ್ರಮುಖ ಪ್ರಸಿದ್ಧ ಘೋಷವಾಕ್ಯವಾಗಿದೆ. ಅವರು ಕೊನೆವರೆಗೂ ಸರಳ ಖಾದಿಧಾರಿಯಾಗಿದ್ದು ಸ್ವತಃ ನೂಲುತ್ತಿದ್ದರು.

ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಜನವರಿ 11, 1966ರಲ್ಲಿ ಶಾಸ್ತ್ರೀಜಿ ಅಕಾಲಿಕವಾಗಿ ಸಾವನ್ನಪ್ಪಿದರು. ಚಿಕ್ಕ ದೇಹ ದೊಡ್ಡ ಆದರ್ಶ, ಮೆದು ದನಿ, ಉಗ್ರ ರಾಷ್ಟ್ರ ಭಕ್ತಿ, ದೇಶದ ಪ್ರಧಾನಿಯಾದರೂ ಸರಳತೆ ಬಿಡದ ವ್ಯಕಿತ್ವ, ಪ್ರಾಮಾಣಿಕತೆಯನ್ನೇ ಜೀವಾಳವಾಗಿಸಿಕೊಂಡು ಬದುಕಿದ ಶಾಸ್ತ್ರೀಜಿಯವರ ಆದರ್ಶ ಸರ್ವರಿಗೂ ಅನುಕರಣೀಯ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";