“ಇಂದು ಈದ್ ಮಿಲಾದ್”

ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಈದ್-ಮಿಲಾದ್ ಹಬ್ಬವೂ ಒಂದಾಗಿದೆ. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನವನ್ನು ಪ್ರತಿವರ್ಷ ಈದ್-ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ. ಈದ್-ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.

ಪ್ರವಾದಿ ಮುಹಮ್ಮದ್ ಪೈಗಂಬರ್ ಹುಟ್ಟಿದ ರಬೀವು ಅವ್ವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು ತಿಂಗಳ ಕಾಲ ವಿಶ್ವದಾದ್ಯಂತ ಈದ್-ಮಿಲಾದ್ ಅಂಗವಾಗಿ ಆಚರಣೆಗಳು ನಡೆಯುತ್ತವೆ. ಇಸ್ಲಾಂ ಧರ್ಮದಲ್ಲಿ ಈದ್-ಮಿಲಾದ್ ಆಚರಣೆಗೆ ಅತ್ಯಂತ ದೊಡ್ಡ ಪ್ರಾಮುಖ್ಯತೆಯಿದೆ.

ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಾಗಿ ಈದ್-ಮಿಲಾದ್ ಆಚರಿಸುವರು. ಈದ್-ಮಿಲಾದ್ ನ್ನು ಎಲ್ಲ ಪಂಗಡಗಳ ಮುಸ್ಲಿಮರು ಆಚರಿಸುತ್ತಾರೆ.

ಈದ್-ಮಿಲಾದ್ ಆಚರಣೆಯ ರಬೀವುಲ್ ಅವ್ವಲ್ ತಿಂಗಳಲ್ಲಿ ಮಸೀದಿಗಳು, ದರ್ಗಾಗಳು, ಶಿಕ್ಷಣ ಸಂಸ್ಥೆಗಳು, ಮನೆಗಳನ್ನು ವಿದ್ಯುತ್ ದೀಪಗಳು ಮತ್ತು ಕಾಗದಗಳಿಂದ ಅಲಂಕರಿಸಲಾಗುತ್ತದೆ. ಅನ್ನಸಂತರ್ಪಣೆ ಮಾಡುವುದು, ಮೆರವಣಿಗೆ ಮಾಡುವುದು ಈದ್ ಮಿಲಾದ್ ಆಚರಣೆಯ ಒಂದು ಭಾಗವಾಗಿದೆ.ಈ ದಿನದಂದು ಮೌಲಾನಾಗಳು ಪಾರಾಯಣ ಮಾಡುವುದರ ಜೊತೆಗೆ ವಿವಿಧ ಸಾಂಸ್ಕೃತಿಕ, ಪ್ರತಿಭಾ ಕಾರ್ಯಕ್ರಮಗಳು ನಡೆಯುತ್ತವೆ.

ಇತಿಹಾಸ: ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ
ಕ್ರಿಸ್ತಶಕ 575ರಲ್ಲಿ (ಇಸ್ಲಾಮಿಕ್ ಹಿಜರಿ ಕ್ಯಾಲೆಂಡರಿನ ರಬೀವುಲ್ ಅವ್ವಲ್ ತಿಂಗಳ 12ನೇ ತಾರೀಖು) ಪ್ರವಾದಿ ಮುಹಮ್ಮದ್ ಪೈಗಂಬರ್ ಜನಿಸಿದರು.

ಪ್ರವಾದಿ ಮುಹಮ್ಮದ್ ಪೈಗಂಬರ್ ತಂದೆ. ಅಬ್ದುಲ್ ರಲಿಯಲ್ಲಾಹು ಅನ್ಹು ಮತ್ತು ತಾಯಿ ಆಮೀನ್ ಬೀವಿ ರಲಿಯಲ್ಲಾಹು ಅನ್ಹಾ.

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ
ತಾಯಿ  ಗರ್ಭವತಿಯಾಗಿದ್ದಾಗಲೇ ತಂದೆ ಅಬ್ಬುಲ್ ರಲಿಯಲ್ಲಾಹು ಅನ್ಹು ಮರಣ ಹೊಂದಿದರು. ಮೆಕ್ಕಾದ ಹಾಶಿಂ ವಂಶ ಮತ್ತು ಕುರೈಸಿ ಗೋತ್ರದಲ್ಲಿ ಪ್ರವಾದಿ ಮುಹಮ್ಮದರ ಜನನವಾಯಿತು. ಪ್ರವಾದಿ ಮುಹಮ್ಮದ್ ಪೈಗಂಬರ್ ಇಸ್ಲಾಮಿನ ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ.

ಮೌಲೀದ್ ಪಾರಾಯಣ: ಮೌಲೀದ್ ಎಂದರೆ ಪ್ರವಾದಿ ಮುಹಮ್ಮದ್ ಪೈಗಂಬರರ ಪ್ರಕೀರ್ತನೆಯಾಗಿದೆ. ಮೌಲೀದ್ ಪಾರಾಯಣ ಇಸ್ಲಾಮಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು.

ಮೌಲೀದನ್ನು ಸಂಪೂರ್ಣವಾಗಿ ಪಠಿಸಲು ಸುಮಾರು ಒಂದು ಗಂಟೆಗಳಷ್ಟು ಸಮಯ ಬೇಕಾಗುತ್ತದೆ.
ಮೌಲೀದ್ ಸಂಪೂರ್ಣವಾಗಿ ಅರೇಬಿಕ್ ಭಾಷೆಯಲ್ಲಿದೆ.
ಮೌಲೀದ್ ಪಾರಾಯಣ ಕೇವಲ ಪಠಣವಲ್ಲ. ಮೌಲೀದನ್ನು ಪಾರಾಯಣ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇಸ್ಲಾಮಿನಲ್ಲಿದೆ.

ಬುರ್ದಾ ಮಜ್ಲಿಸ್: ಬುರ್ದಾ ಎಂದರೆ ಪ್ರವಾದಿ ಪ್ರೇಮ ಕಾವ್ಯ. ಇಸ್ಲಾಮಿನ ಪಂಡಿತ ಮತ್ತು ಪ್ರವಾದಿ ಪ್ರೇಮಿ ಇಮಾಮ್ ಬೂಸೂರಿ ಬುರ್ದಾವನ್ನು ರಚಿಸಿದರು.
ಬುರ್ದಾ ಮಜ್ಲಿಸ್ ಸುಮಾರು ಎರಡು ಮೂರು ಗಂಟೆಗಳ ಕಾಲ ಸತತವಾಗಿ ಪ್ರವಾದಿ ಪ್ರಕೀರ್ತನೆ ಹಾಡುವ ಕಾರ್ಯಕ್ರಮವಾಗಿದೆ. ಈದ್ ಮಿಲಾದ್ ಆಚರಣೆಯ ರಬೀವುಲ್ ಅವ್ವಲ್ ತಿಂಗಳಲ್ಲಿ ಬುರ್ದಾ ಮಜ್ಲಿಸ್‍ಗಳನ್ನು ಆಯೋಜನೆ ಮಾಡಲಾಗುತ್ತದೆ.
ಬುರ್ದಾ ರಬೀವುಲ್ ಅವ್ವಲ್ ತಿಂಗಳು ಮಾತ್ರವಲ್ಲದೆ ಇತರ ಸಂದರ್ಭಗಳಲ್ಲೂ ಹಾಡಬಹುದು. ಬುರ್ದಾ ಹಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇಸ್ಲಾಮಿನಲ್ಲಿದೆ.

ಈದ್ ಮೀಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಮೆರವಣಿಗೆಯೂ ಒಂದು.
ಪ್ರವಾದಿಯ ಮುಹಮ್ಮದರ ಜನ್ಮ ದಿನದ ಖುಷಿಗಾಗಿ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ.
ಮೆರವಣಿಗೆಯ ದಾರಿಯುದ್ದಕ್ಕೂ ಸಿಹಿ ತಿಂಡಿಗಳನ್ನು ವಿತರಿಸಿವುದು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈದ್ ಮಿಲಾದ್ ಮೆರವಣಿಗೆಯಲ್ಲಿ ಕೇವಲ ಮುಸಲ್ಮಾನರಲ್ಲದೆ ಇತರ ಧರ್ಮೀಯರು ಪಾಲ್ಗೊಳ್ಳುತ್ತಾರೆ. ಇಸ್ಲಾಂ ಧರ್ಮದಲ್ಲಿ ಮೆರವಣಿಗೆ ಮಾಡಿ ಆಚರಿಸುವ ಪ್ರಮುಖ ಹಬ್ಬವಾಗಿದೆ ಈದ್ ಮಿಲಾದ್.

ಕರೊನಾ‌ ಹಿನ್ನೆಲೆಯಲ್ಲಿ ಈ ಸಲ ಮೆರವಣಿಗೆಯೂ ಇಲ್ಲ. ವಿವಿಧ ಬಡಾವಣೆಗಳಲ್ಲಿ ಮುಸ್ಲಿಮರು ಮೆಕ್ಕಾ ಹಾಗೂ ಮದೀನಾ ರೂಪಕ ರಚಿಸಿಲ್ಲ. ಸರಳವಾಗಿ ಮನೆಗೇ ಸೀಮಿತವಾಗಿ ಧಾರ್ಮಿಕ ಆಚರಣೆ ನೆರವೇರುತ್ತಿವೆ. ಮಸೀದಿಗಳಲ್ಲಿ ನಮಾಜ್ ನೆರವೇರಲಿದೆ. ನನ್ನೆಲ್ಲ ಸಹೋದರ, ಸಹೋದರಿಯರಿಗೆ ಈದ್- ಮುಬಾರಕ್.

ಲೇಖಕರು:ಸಂತೋಷ ಸಂಬಣ್ಣವರ
ಎಂ.ಕೆ.ಹುಬ್ಬಳ್ಳಿ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";