‘ಟಿಪ್ಪುವಿನ’ ಕಟ್ಟುಕಥೆಗಳು : ಒಂದು ವಿವೇಚನೆ

ಉಮೇಶ ಗೌರಿ (ಯರಡಾಲ)

ಟಿಪ್ಪುವಿನ ವಿಚಾರವಾಗಿ ಕಳೆದ ಎರಡು ದಶಕಗಳಲ್ಲಿ ವಿಪರೀತವಾದ ಕಟ್ಟುಕಥೆಗಳು ಚಾಲ್ತಿಗೆ ಬಂದುವು. ಅದರಲ್ಲಿ ‘ಮೇಲುಕೋಟೆಯ ದೀಪಾವಳಿ Genocide(ನರಮೇಧ)’ ಕಥೆಯಾದರೇ ಈಚೆಗೆ ಹರಡುತ್ತಿರುವ ‘ಉರಿಗೌಡ/ ದೊಡ್ಡ ನಂಜೇಗೌಡ’ ಎಂಬ ಹೆಸರಿನ ವೀರರ ಕಥೆ. ಎರಡೂ ಅಪ್ಪಟ ಸುಳ್ಳು.

ಮಂಡ್ಯದ ಒಕ್ಕಲಿಗರಲ್ಲಿ ‘ಟಿಪ್ಪು ಸುಲ್ತಾನ್’ ವಿರುದ್ದವಾಗಿ ಅಭಿಪ್ರಾಯಗಳನ್ನು ಹುಟ್ಟಿಸುವ ಸಲುವಾಗಿ ಕಟ್ಟಿದ ಕಥೆ ಇದು. ಯಾಕಂದರೆ ಈ ಕಥೆ ಈ ಹಿಂದೆ ಎಂದೂ ಇರಲಿಲ್ಲ. ಬದಲಿಗೆ ಟಿಪ್ಪುವನ್ನು ಹೊಗಳುವ ಲಾವಣಿಗಳು, ಅವನ ಹೋರಾಟದ/ಯುದ್ದದ ಕಥೆಗಳು, ಬ್ರಿಟಿಷರನ್ನು ಸೋಲಿಸಿದ ಕಥೆಗಳು ಪ್ರಚಲಿತದಲ್ಲಿದ್ದವು. ಅದರಲ್ಲೂ ಟಿಪ್ಪುವಿಗೆ ಮೋಸ ಮಾಡಿದ ‘ಮೀರ್ ಸಾಧಿಕ್’ ನ ಕಥೆಯನ್ನು ಅಪ್ರಮಾಣಿಕತೆಯ ನಿದರ್ಶನವಾಗಿ ಬಳಸಲಾಗುತ್ತಿತ್ತು.‌ ಅದನ್ನೆಲ್ಲಾ ನಾವು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ.

ಅದಿರಲಿ ಇವಾಗ ವಿಷಯಕ್ಕೆ ಬರೋಣ:
ಹೈದಾರಾಲಿ ಮರಣಾ ನಂತರ ಮೈಸೂರು ರಾಜ್ಯವನ್ನು ವಾಪಾಸು ಪಡೆದುಕೊಳ್ಳಲು ಲಕ್ಷ್ಮಿ ಅಮ್ಮಣ್ಣಿ ಅವರು    (ಇಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಮೂವರು ಪತ್ನಿಯರು : ದೇವರಾಜಮ್ಮಣ್ಣಿ, ಪುಟ್ಟರಾಜಮ್ಮಣ್ಣಿ, ಲಕ್ಷ್ಮಮ್ಮಣ್ಣಿ ) ಬ್ರಿಟಿಷರೊಂದಿಗೆ ಸೇರಿ ಯೋಜಿಸಿದ್ದರೆಂದು, ಅದಕ್ಕಾಗಿ ಮಂಡ್ಯದ ಒಕ್ಕಲಿಗರಾದ ( ಈ ಒಕ್ಕಲಿಗ ಪದವನ್ನು ಬೇಕೂಂತಲೇ ಹೆಚ್ಚು ವಿಜೃಂಭಿಸಿ, ವೈಭವೀಕರಿಸಿ ಕಥೆ ಹೆಣೆಯಲಾಗಿದೆ) ದೊಡ್ಡ ನಂಜೇಗೌಡ, ಉರಿಗೌಡರ ಸಹಾಯ ಪಡೆದರೆಂದು ಹೇಳಾಗಿದೆ, ಮಾತ್ರವಲ್ಲ ಟಿಪ್ಪು ಸತ್ತಿದ್ದೇ ‘ಈ ಒಕ್ಕಲಿಗರ ವೀರರ ಕತ್ತಿಯಿಂದ’ ಎಂದು ಬಣ್ಣಿಸಲಾಗಿದೆ‌.

ಮೊದಲನೆಯದಾಗಿ ಮಹಾರಾಣೀ ಲಕ್ಷ್ಮೀ ವಿಲಾಸ ಸನ್ನಿಧಾನದವರು ಬ್ರಿಟೀಷರ ಸಹಾಯ ಕೋರಿದ್ದರು ಎಂಬುವುದೇ ಸುಳ್ಳಾಗುತ್ತದೆ. ಭಾರತ ಉಪಖಂಡದ ಅರಸೊತ್ತಿಗೆಗಳು ಕ್ರಿ.ಶ.1750 ಹೊತ್ತಿಗಾಗಲೇ ಬ್ರಿಟೀಷರ/ಕಂಪನಿ ಸರ್ಕಾರದ ಒಳಮರ್ಮಗಳನ್ನು ಅರಿತಿದ್ದರು. ಕೆಲವರು ಸೈನ್ಯ ಮತ್ತು ಶಕ್ತಿಯ ಕೊರತೆಯಿಂದ ಅವರೊಟ್ಟಿಗೆ ರಾಜಿ ಮಾಡಿಕೊಂಡಿದ್ದರೆ ಪರಂತು ಉಳಿದೆಲ್ಲಾ ಅರಸರು ಕಡೇಗಾಲದವರೆಗೂ ಅವರೊಂದಿಗೆ ಯುದ್ದ ಮಾಡುತ್ತಲೇ ಇದ್ದರು. ಬ್ರಿಟಿಷರಲ್ಲಿ ಸಹಾಯಕ್ಕೆ ಯಾಚಿಸಿದ್ದರು ಎನ್ನುವುದು ರಾಣಿಯವರಿಗೆ ಮಾಡುವ ಅವಮಾನ ಕೂಡ. ನೆನಪಿರಲಿ; ಮೈಸೂರು ರಾಜ್ಯಕ್ಕೆ ಬ್ರಿಟೀಷ್ ಸರ್ಕಾರ ಬಂದಿದ್ದು ಟಿಪ್ಪುವಿನ ಮರಣದ ನಂತರವೇ! ಅಲ್ಲಿಯವರೆಗೂ ಅವರು ಬರಲು ಅವಕಾಶವೇ ಕೊಟ್ಟಿರಲಿಲ್ಲ.

ಇನ್ನು ಮಂಡ್ಯದಲ್ಲಿ ಹೆಚ್ಚು ಭೂ ಒಡೆತನ, ಜನಸಂಖ್ಯೆ, ರಾಜಕೀಯ ಅಧಿಕಾರಗಳು ಇರುವುದು ಒಕ್ಕಲಿಗ ಸಮುದಾಯದಲ್ಲಿ ಎನ್ನುವುದು ತಿಳಿದ ವಿಚಾರವೇ ಆಗಿದೆ. ಹಾಗಾಗಿ ಟಿಪ್ಪುವಿನ ವಿರುದ್ದ ಅಭಿಪ್ರಾಯಗಳನ್ನು ಇಲ್ಲಿ ಹುಟ್ಟಿಸಿ ವಿಜೃಂಭಿಸದೇ ಹೋದರೆ ಬಿಜೆಪಿ, ಭಜರಂಗದಳ ಇತ್ಯಾದಿಗಳಿಗೆ ರಾಜಕೀಯ ಮಾಡಲು ಇಲ್ಲಿ ವಿಚಾರ ಸಿಕ್ಕುವುದಿಲ್ಲ. ಅಲ್ಲದೇ ಇದುವರೆಗೂ ಒಕ್ಕಲಿಗರು ಇಂತಹ ಕೋಮುವಾದಿ ವಿಚಾರಗಳನ್ನು ಅವರಲ್ಲಿ ಇಟ್ಟುಕೊಂಡಿರಲಿಲ್ಲ. ಆದ್ರೆ ಜಾತಿವಾದಿಗಳು ಎಂಬುದನ್ನ ಉಲ್ಲೇಖಿಸಲು ಮರೆಯುವುದಿಲ್ಲ.ಕರಾವಳಿಯ ರೀತಿ ಇಲ್ಲಿಯೂ ಕೋಮು ಸಾಮರಸ್ಯ ಕೆಡಿಸಿದರೆ ಸುಲಭವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಬಹುದು ಎಂಬುದು ಬಿಜೆಪಿಯ ಮತ್ತು ಬಲಪಂಥೀಯ ಸಂಘಟನೆಗಳ ಲೆಕ್ಕಚಾರ.

ಅದಕ್ಕಾಗಿ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಟಿಪ್ಪುವಿನ ವಿರುದ್ದ ಹಲವು ಕಥೆಗಳನ್ನು ಕಟ್ಟುತ್ತಾ ಇಲ್ಲಿ ಧರ್ಮಗಳ ನಡುವೆ ಒಡಕು, ಜಗಳ ಸೃಷ್ಟಿಸಲು ಸತತ ಪ್ರಯತ್ನ ನಡೆಸುತ್ತಲೇ ಬಂದಿವೆ. ಅವಕ್ಕೆ ಸಿಕ್ಕ ಒಳ್ಳೆಯ ಅವಕಾಶವೆಂದರೆ ಟಿಪ್ಪು ಜಯಂತಿ ಘೋಷಣೆ ಮತ್ತು ವಾಟ್ಸಪ್/ ಫೇಸ್‌ಬುಕ್‌ ವೇದಿಕೆಗಳು. ಕಾರಣ ಮತ್ತು ವೇದಿಕೆ ಸಿಕ್ಕಿದ್ದೇ ತಡ ಬಿಜೆಪಿ ಬೆಂಬಲಿತ ವ್ಯಕ್ತಿಗಳು, ಭಾಷಣಕೋರರು, ಸಮಾಜ ವಿದ್ವಂಸಕರು, ಸಂಘಟನೆಗಳು ಸೇರಿ ಕಟ್ಟುಕಥೆಗಳನ್ನು, ಸಾಕ್ಷಿಗಳನ್ನು, ತಿರುಚಿದ ಪೋಟೊಗಳು, ಸ್ಕ್ರೀನ್ ಶಾಟ್ ಗಳು, ಸಣ್ಣ ಸಣ್ಣ ಮೆಸೇಜುಗಳನ್ನು ಸಿದ್ದಪಡಿಸಿಕೊಂಡು ಸಾವಿರಾರು ಜನರಿಗೆ ಹಂಚಿದುವು. ಇವತ್ತಿಗೂ ಹಂಚುತ್ತಲೇ ಇವೆ. ಈ ಕಥೆಗಳನ್ನು ನೀವು ಇಂಟರ್ನೆಟ್ ನಲ್ಲಿ ಹುಡುಕಿದರೆ ಇವು ಸಿಗುವುದೇ ಐದಾರು ಬಿಜೆಪಿ ಬೆಂಬಲಿತ ವೆಬ್ ಸೈಟುಗಳು ಮತ್ತು ಹತ್ತಾರು ಫೇಸ್‌ಬುಕ್‌ ಪೇಜ್ ಗಳಲ್ಲಿ. ಅಲ್ಲಿ ಹುಟ್ಟಿದ ಕಥೆಗಳು ಮುಂದೆ ಸಾವಿರಾರು ಜನರಿಗೆ ಬೇರೆ ಬೇರೆಯ ತರಹದಲ್ಲಿ ಹಂಚಿಹೋಗಿವೆ.

ಹಾಗೆ ಹಂಚಿದ ಕಥೆಗಳಲ್ಲಿ ಈ ಒಕ್ಕಲಿಗ ವೀರರ ಕಥೆಯೂ ಒಂದು. ಇದು ವೀರರ ಕಥೆಯಲ್ಲ, ಬದಲಿಗೆ ಬಿಜೆಪಿಯ ಬೆಂಬಲಿಗರು ಒಕ್ಕಲಿಗರನ್ನು ಟಿಪ್ಪು ಮತ್ತು ಮುಸ್ಲಿಂ ಜನರ ವಿರುದ್ದವಾಗಿ ಎತ್ತಿ ಕಟ್ಟಲು ಹೂಡಿದ ಹುನ್ನಾರದ ಹುಸಿಯಷ್ಟೆ!ಆಮೇಲೆ ಗಮನಿಸಿ ಮಂಡ್ಯದ ಒಕ್ಕಲಿಗರಲ್ಲಿ ‘ಉರಿಗೌಡ’ ಹೆಸರು ಇಡುವುದು ಅಪರೂಪದಲ್ಲಿ ಬಹಳ ಅಪರೂಪ. ಯಾಕಂದರೆ ‘ಉರಿ’ ಶಬ್ದವು ಕೆಟ್ಟದ್ದು ಎಂದು ಭಾವಿಸಲಾಗುತ್ತದೆ. ಉರಿ ಎನ್ನುವುದು ಕೋಪದ, ಸುಡುವ, ಸುಟ್ಟುಹೋದ ಅರ್ಥಗಳನ್ನು ಕೊಡುವುದರಿಂದ ಇಂತಹ ಪದಗಳನ್ನು ನೇರವಾಗಿ ಎಂದೂ ಹೆಸರಾಗಿ ಇಡುವುದಿಲ್ಲ. ಇದು ಜನರ ನಂಬುಗೆ. ಉರಿ, ಮಾರಿ ಮೊದಲಾದ ಪದಗಳನ್ನು ನಾಮ ಪದಗಳಾಗಿ ಬಳಸುವುದಿಲ್ಲ.

ಮಂಡ್ಯದ ಜನ‌ ಅರಿತುಕೊಳ್ಳಬೇಕಾದ್ದು ಇಷ್ಟೇ: ಇವತ್ತಿನ ರಾಜಕೀಯ ಪಕ್ಷಗಳು ನಮ್ಮ ಸಮಾಜವನ್ನು ಮೊದಲಿಗೆ ಹಿಂದು, ಮುಸ್ಲಿಂ ಎಂಬ ಧರ್ಮದ ಆಧಾರದಲ್ಲಿ ಒಡೆದು ನಂತರ ಬ್ರಾಹ್ಮಣ, ಶೂದ್ರ ದಲಿತ ಎಂಬ ಜಾತಿ ಆಧಾರದಲ್ಲಿ ಒಡೆದು ಹಣ ಅಧಿಕಾರವನ್ನು ಕಬಳಿಸಿಕೊಂಡು ನಮ್ಮನ್ನು ಆಳುತ್ತಾ ಬದುಕುತ್ತವೆ. ಒಡೆದುಹೋದ ನಾವು ಹಸಿವು, ಉದ್ಯೋಗ, ಆಸ್ತಿ, ಮನೆ-ಮಕ್ಕಳು ಕಳೆದುಕೊಂಡು ಬೀದಿಪಾಲಾಗುತ್ತೇವೆ. ಭಾಷಣಕಾರರು ಯಾರೂ ಬಂದು ನಮ್ಮ ಹಸಿವಿಗೆ ಅನ್ನ ಕೊಡುವುದಿಲ್ಲ, ಉದ್ಯೋಗ ಒದಗಿಸುವುದಿಲ್ಲ ಕಡೆಗೆ ಗಲಭೆ ದೊಂಬಿ ಎಬ್ಬಿಸಿ ಅದರಿಂದ ಸತ್ತ, ಜೈಲುಪಾಲಾದ, ಕೈಕಾಲು ಮುರಿದುಕೊಂಡ ಮಕ್ಕಳನ್ನ ಕಾಪಾಡುವುದಿಲ್ಲ. ನಾವು ಕೇವಲ ಬಲಿಪಶುಗಳು.

ವರ್ತಮಾನದ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿರುವ ನಾವು
ಇತಿಹಾಸದ ಟಿಪ್ಪುವನ್ನು ಇತಿಹಾಸದಲ್ಲೇ ಬಿಡೋಣ‌. ಇವತ್ತು ಎಲ್ಲರೂ ಜೊತೆಯಾಗಿ ಬದುಕುವುದನ್ನ ಕಲಿಯೋಣ. ಧರ್ಮ- ಜಾತಿಯ ಹೆಸರಲ್ಲಿ ಪ್ರಚಾರಕ್ಕೆ ಬರುವ ಜನರನ್ನು ವಾಪಾಸು ಕಳಿಸೋಣ. ಅಂತಹ ಕೆಟ್ಟ ಕಟ್ಟುಕಥೆಗಳನ್ನು ಹರಡದಿರೋಣ. ಹರಡುವವರಿಗೆ ಎಚ್ಚರಿಸೋಣ.

 

ಲೇಖನ : ರಾಜೇಂದ್ರ ಪ್ರಸಾದ್,
ಕವಿ, ವಿಮರ್ಶಕ ಸಾಹಿತಿ
M-9886133949
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";