ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಮಾತೆಯರಾಗಿ ಸೇವೆ ಸಲ್ಲಿಸಿದ ಹಿರಿಯ ಆರೋಗ್ಯ ಸಹಾಯಕಿಯರಿಗೆ ಸಮಾಜ ಗುರುತಿಸಿ ಕೃತಜ್ಞತೆ ಸಲ್ಲಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಹೇಳಿದರು.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ದಿ. ಸಾವಿತ್ರಿ ಬಾಬುರಾವ್ ಶಿವಪೂಜಿ ದತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ದತ್ತಿನಿಧಿ ಇಡುವುದೇ ಸುಂದರ ಕೆಲಸ. ನಮ್ಮ ಹಿರಿಯರನ್ನು ಕೇವಲ ಮನೆಗೆ ಸೀಮಿತವಾಗಿ ನೆನೆಯುವಂತಾಗದೆ ಇಂತಹ ಸಾರ್ವಜನಿಕ ವೇದಿಕೆಗಳಲ್ಲಿ ದತ್ತಿನಿಧಿ ಇಡುವ ಮೂಲಕ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ವಿಶೇಷ ಸೇವೆಯನ್ನು ನೆನೆದರೆ ಉತ್ತಮ. ಆ ನಿಟ್ಟಿನಲ್ಲಿ ದತ್ತಿ ನಿಧಿಗಳು ಹೆಚ್ಚಾಗಲಿ ಎಂದರು.
ಯಾವುದೇ ರೀತಿಯ ಸೌಕರ್ಯಗಳೂ ಇಲ್ಲದ ಸಂದರ್ಭದಲ್ಲಿ ಹತ್ತಾರು ಮೈಲಿ ಕಾಲುನಡಿಗೆಯಲ್ಲಿ ಹೋಗಿ ಹಗಲು ರಾತ್ರಿ ಹಳ್ಳಿಗರ ಸೇವೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ತ್ಯಾಗದಿಂದ ದುಡಿದ ಜೀವಿಗಳ ಭಾವನೆಗಳನ್ನು ಗೌರವಿಸಿ ಅವರ ಆಗು-ಹೋಗುಗಳಿಗೆ ಊರುಗೋಲಾಗಿ ಸೇವೆ ಮಾಡಿ ಎಂದು ದತ್ತಿನಿಧಿ ದಾನಿ ಪತ್ರಕರ್ತ ಮುರುಗೇಶ ಶಿವಪೂಜಿ ಅಭಿಪ್ರಾಯಪಟ್ಟರು.
ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಕಾಲದಲ್ಲಿ ಆರೋಗ್ಯ ಸಹಾಯಕಿಯರಾಗಿ ನೂರಾರು ಜೀವಿಗಳಿಗೆ ಜೀವಮಾತೆಯರಾಗಿ ಕೆಲಸ ಮಾಡಿದ ಆರೋಗ್ಯ ಸಹಾಯಕಿಯರ ಸೇವೆ ನಿಜಕ್ಕೂ ಮಾದರಿ ಮತ್ತು ಬೆಲೆಕಟ್ಟಲಾಗದಂತಹದು. ಅಂತಹವರ ಸಾಲಿನಲ್ಲಿ ನಿಲ್ಲುವ ನಮ್ಮ ತಾಯಿಯಂತಹ ಅನೇಕ ಮಾತೆಯರ ಆರೋಗ್ಯಸೇವೆಯನ್ನು ನಾವೀಗ ನೆನೆಯಬೇಕಿದೆ. ಆ ನಿಟ್ಟಿನಲ್ಲಿ ದಿ. ಸಾವಿತ್ರಿ ಶಿವಪೂಜಿಯವರ ಸ್ಮರಣೆಯಲ್ಲಿ ಇಂದು ಜಿಲ್ಲೆಯ ಕೆಲವು ಹಿರಿಯ ಆರೋಗ್ಯ ಸಹಾಯಕಿಯರನ್ನು ಅವರ ಸೇವೆಯನ್ನು ಗುರುತಿಸಿ ಅವರನ್ನು ಈ ವೇದಿಕೆ ಮೇಲೆ ಗೌರವಿಸಲಾಗುತ್ತಿದೆ ಎಂದರು.
ಜಿಲ್ಲೆಯ 75 ವರ್ಷ ಮೇಲ್ಪಟ್ಟ ಇಂದ್ರವ್ವ ಮಲ್ಲಪ್ಪ ಬಡಿಗೇರ ,ಸಲೀಮ ಮೀರ್ ಸಾಬ್ ಪಠಾಣ್ ,ಶಾಂತವ್ವ ಶ್ರೀಶೈಲಪ್ಪ ವಾಲಿ ,ಲಕ್ಷ್ಮೀಬಾಯಿ ತುಕಾರಾಮ್ ಸೂರ್ಯವಂಶಿ ,ಶಮಿಮಬಿ ಎನ್ ನದಾಫ್ ,ಈರವ್ವ ಗೋವಿಂದಪ್ಪ ಪೂಜಾರ್ ,ಮಾಲತಿ ದುಂಡಪ್ಪ ಜಾಗನೂರೆ ,ಸುಶೀಲಾ ಈರಪ್ಪ ರಾಮಗುರವಾಡಿ ಮುಂತಾದ 8 ಜನ ಹಿರಿಯ ಆರೋಗ್ಯ ಸಹಾಯಕಿಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ದೇವರನ್ನು ಭಜಿಸುವ ತುಟಿಗಳಿಗಿಂತ ಸಹಾಯಮಾಡುವ ಹಸ್ತಗಳು ಶ್ರೇಷ್ಠ ಇಂತಹ ದಾನಮಾಡುವ ಕೈಗಳು ಹೆಚ್ಚಾಗಲಿ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಾಹಿತಿಗಳಾದ ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಲೇಖಕಿಯರ ಸಂಘದ ಸದಸ್ಯೆಯರಿಂದ ಕವನ ಗಾಯನ ಕಾರ್ಯಕ್ರಮ ನಡೆಯಿತು.
ಸಂಘದ ವತಿಯಿಂದ ದತ್ತಿ ದಾನಿಗಳಾದ ಮ೦ಜುಳಾ ಶಿವಪೂಜಿ ಮತ್ತು ಸಂಗೀತಾ ಶಿವಪೂಜಿ ಯವರನ್ನು ಸನ್ಮಾನಿಸಲಾಯಿತು.ಸಾಹಿತಿಗಳಾದ ಜ್ಯೋತಿ ಬದಾಮಿ, ಪತ್ರಕರ್ತೆ ಕೀರ್ತಿ ಕಾಸರಗೋಡು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ. ಸುರೇಶ ಜ್ಯೋತಿ, ಜ್ಯೋತಿ ಮಾಳಿ, ಸುನಂದಾ ಹಾಲಬಾವಿ ಮಹಾನಂದ ಪರುಶೆಟ್ಟಿ, ಶಾಲಿನಿ ಚಿನಿವಾಲ, ಪ್ರಭಾ ಪಾಟೀಲ, ಶಿವಾನಂದ ತಲ್ಲೂರ, ಎಂ. ವೈ. ಮೆಣಸಿನಕಾಯಿ, ಶ್ರೀರಂಗ ಜೋಶಿ ಸೇರಿದಂತೆ ಸಾಹಿತ್ಯಾಸಕ್ತರು ಲೇಖಕಿಯರ ಸಂಘದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಲಲಿತಾ ಪರ್ವತ ರಾವ್ ಪ್ರಾರ್ಥಿಸಿದರು, ಇಂದಿರಾ ಮೋಟೆಬೆನ್ನೂರ ಸ್ವಾಗತಿಸಿದರು. ಕಾರ್ಯದರ್ಶಿ ರಾಜನಂದಾ ಘಾರ್ಗಿ ನಿರೂಪಿಸಿದರು. ಸುಧಾ ಪಾಟೀಲ ವಂದಿಸಿದರು.