ಅಂಬೇಡ್ಕರ್ ನಗರ: ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಪುಂಡರು, ಶಾಲೆಯಿಂದ ಬೈಸಿಕಲ್‌ನಲ್ಲಿ ಮನೆಗೆ ಮರಳುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯ ದುಪಟ್ಟಾವನ್ನು ಎಳೆದಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಆಕೆ ಮೃತಪಟ್ಟ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ವಿದ್ಯಾರ್ಥಿನಿಯು ಸೈಕಲ್‌ನಲ್ಲಿ ತನ್ನ ಸಹಪಾಠಿ ಜತೆ ತೆರಳುತ್ತಿದ್ದಳು. ದುಪಟ್ಟಾ ಎಳೆದಿದ್ದರಿಂದ ಆಕೆ ಆಯತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಳು. ಆಗ ಹಿಂದಿನಿಂದ ಬಂದ ಮತ್ತೊಂದು ಬೈಕ್, ಆಕೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮರಣ ಹೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಹನ್ಸ್‌ವರ್ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ ಮಾರುಕಟ್ಟೆ ಸಮೀಪ ಅಪಘಾತ ಸಂಭವಿಸಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಕೃತ್ಯದಲ್ಲಿ ಭಾಗಿಯಾದ ಮೂವರು ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾರೆ.
ಮೃತ ಬಾಲಕಿ ಮತ್ತು ಆಕೆಯ ಸ್ನೇಹಿತೆ ಸೈಕಲ್‌ಗಳಲ್ಲಿ ತೆರಳುತ್ತಿದ್ದರು. ಬೈಕ್‌ನಲ್ಲಿ ಬಂದ ಇಬ್ಬರು ದುರುಳರು ಆಕೆಯ ದುಪಟ್ಟಾವನ್ನು ಎಳೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಆಕೆ ಆಯತಪ್ಪಿದ್ದು, ರಸ್ತೆಗೆ ಬಿದ್ದಿದ್ದಾಳೆ. ಆಕೆ ನೆಲದ ಮೇಲೆ ಬೀಳುತ್ತಿದ್ದಂತೆಯೇ ಮತ್ತೊಂದು ಬೈಕ್ ಆಕೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಆಕೆಯ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ದವಡೆ ಪುಡಿಯಾಗಿದೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
“ಎಲ್ಲಾ ಮೂವರು ಆರೋಪಿಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಪೊಲೀಸ್ ಸಿಬ್ಬಂದಿ ಮೇಲೆಯೂ ಗುಂಡು ಹಾರಿಸಿದರು” ಎಂದು ಅಂಬೇಡ್ಕರ್ ನಗರ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಕುಮಾರ್ ಸಿನ್ಹಾ ತಿಳಿಸಿದರು.