“ಗಲ್ಲದ ಮ್ಯಾಲಿನ ಗುಂಗಾಡ
ಜೀವನದಲ್ಲಿ ಅಪವಾದಗಳು, ನಿಂದನೆಗಳು, ಹೊಗಳಿಕೆಗಳು, ತೆಗಳಿಕೆಗಳು, ಸುಖಾ ಸುಮ್ಮನೆ ಕಮ್ಮೆಂಟುಗಳು ಹೀಗೆ ಹಲವಾರು ಪ್ರಸಂಗಗಳಿಗೆ ನಾವು ಒಳಗಾಗಿರುತ್ತೇವೆ. ಇಲ್ಲವೇ ನಾವೂ ನಮಗೆ ಗೊತ್ತಿರದಂತೆ ಭಾಗಿ ಆಗಿರುತ್ತೇವೆ.
ಜೀವನವೇ ಒಂದು ಕಾಂಪ್ಲೆಕ್ಸ್ ವಿಷಯ. ನಾಜೂಕಿನ ನಡಾವಳಿ. ಏನು ಮಾಡಿದರೂ, ಆಡಿದರೂ, ಸುಮ್ಮನಿದ್ದರೂ, ಯಾರ ತಂಟೆಗೆ ಹೋಗದಿದ್ದರೂ ಒಂದಿಲ್ಲೊಂದು ಕಮ್ಮೆಂಟು ಬರೋದು ಗ್ಯಾರಂಟಿ.
ಪ್ರತಿಯೊಂದಕ್ಕೊ ಉತ್ತರ ಕೊಡಾಕ ಹೋಗಬಾರದು. ಉತ್ತರಕ್ಕ ಉತ್ತರ ಬೆಳೆದು ರಾಮ ಕಥಿ ಆಗಿ ಮಹಾಭಾರತವೇ ನಡೆದು ಬಿಡಬಹುದು. ಹಾಗಂತ ಸುಮ್ಮನಿದ್ದರೂ ಕಷ್ಟ.
“ಮೌನಂ ಸಮ್ಮತಿ ಲಕ್ಷಣಂ” ಅಂತ ತಿಳಕೊಂಡು ಬಿಡ್ತಾರ!! ಕೆಲವೊಮ್ಮೆ ಬಲವಂತವಾಗಿ ಉತ್ತರ ಕೊಡಬೇಕಾಗಿ ಬರಬಹುದು. ಗಂಟು ಬಿದ್ದ ಗಂಡನ ಸಮಾಧಾನಕ್ಕಾಗಿಯೋ, ಹಿಂದೆ ಬಿದ್ದ ಹೆಂಡತಿಯ ಮೆಚ್ಚಿಸಲೋ, ಬೆನ್ನು ಬಿದ್ದ ಬಂಧುಗಳ ಬಲವಂತಕ್ಕೋ, ಪ್ರೀತಿಪಾತ್ರ ಪ್ರಿಯಕರ ಅಥವಾ ಪ್ರಿಯತಮನ ಪ್ರೇರಣೆಗೋ ಇಲ್ಲಾ ಗೆಳೆತನಕ್ಕೆ ಕಟ್ಟು ಬಿದ್ದೋ ಹೀಗೆ ಒಂದಿಲ್ಲ ಒಂದು ಪ್ರಸಂಗದ ಬಂಧಿಯಾಗಿ ಉತ್ತರ(ರಿಸ್ಪಾನ್ಸ್) ಕೊಡಬೇಕಾಗಿ ಬರಬಹುದು.
ಇವೆಲ್ಲ ಒಂಥರಾ ಗಲ್ಲದ ಮ್ಯಾಲಿನ ಗುಂಗಾಡ (ಸೊಳ್ಳೆ) ಇದ್ಧಾಂಗ. ಹೊಡದರ ಕಪಾಳಿಗೆ ಪೆಟ್ಟು. ಇಲ್ಲದಿದ್ದರೆ ಗುಂಗಾಡು ರಕ್ತ ಹೀರತೈತಿ. ಹೆಂಡತಿ ಇಲ್ಲ ಗಂಡನ ಗಲ್ಲದ ಮ್ಯಾಲ ಗುಂಗಾಡು ಕುಂತಿದ್ರಂತೂ ಪರಿಸ್ಥಿತಿ ಇನ್ನೂ ನಾಜೂಕು!! ಯಾವುದೂ ಗದ್ದಲ ಬ್ಯಾಡ ಅಂದ್ರ ಚಪ್ಪಾಳೆ ಹೊಡದು ಗುಂಗಾಡು ಓಡಿಸ್ಕೋತಾ ನಕ್ಕೋತ ಇದ್ದು ಬಿಡಬೇಕು.
ಹವ್ಯಾಸಿ ಬರಹಗಾರ: ಪ್ರಕಾಶ ರಾಜಗೋಳಿ.ಯರಡಾಲ.