ಬೆಳಗಾವಿ: ಹಿರಿಯ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿರುವ ಬೆಳಗಾವಿ ಜಿಲ್ಲೆಯ ಶಾಲೆಗಳ 54 ಶಿಕ್ಷಕರು ಕಳೆದ ಮೂರು ತಿಂಗಳಿಂದ ವೇತನವಿಲ್ಲದೆ ಪರದಾಡುವಂತಾಗಿದೆ.
ಸರಕಾರ 2022 ರಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 7 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 9 ಸೇರಿದಂತೆ ಒಟ್ಟು 16 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಿದೆ. ಆದರೆ, ಮೂರು ತಿಂಗಳ ಹಿಂದಿನವರೆಗೂ ಈ ಶಾಲೆಗಳಿಗೆ ಕಾಯಂ ಶಿಕ್ಷಕರಿರಲಿಲ್ಲ. ಅತಿಥಿ ಶಿಕ್ಷಕರ ಮೇಲೆಯೇ ಶಾಲೆ ನಡೆಸಲಾಗುತ್ತಿತ್ತು. ಇದೀಗ ಈ ಶಾಲೆಗಳಿಗೆ ಕಾಯಂ ಶಿಕ್ಷಕರು ಬಂದಿದ್ದಾರೆ. ಇವರು ಬಂದು ಮೂರು ತಿಂಗಳಾದರೂ ವೇತನ ಸಿಗದೆ ಸಂಕಷ್ಟದಲ್ಲಿದ್ದಾರೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 27 ಮತ್ತು ಚಿಕ್ಕೋಡಿ ಜಿಲ್ಲೆಗೆ 27 ಸೇರಿದಂತೆ ಒಟ್ಟು 54 ಶಿಕ್ಷಕರು ಮೇಲ್ದರ್ಜೆಗೇರಿದ ಶಾಲೆಗಳಿಗೆ ವರ್ಗವಾಗಿ ಬಂದಿದ್ದಾರೆ. ಆದರೆ, ಈ ಶಾಲೆಗಳಿಗೆ ಮುಖ್ಯೋಪಾಧ್ಯಾಯರ ಹುದ್ದೆ ಇನ್ನೂ ಮಂಜೂರಾಗಿಲ್ಲ. ಇದರಿಂದ ಶಾಲೆಗಳಿಗೆ ವೇತನ ಬಟವಡೆ ಸಂಖ್ಯೆ (ಡಿಡಿಒ ಕೋಡ್) ಕೊಡಲಾಗಿಲ್ಲ. ಹೀಗಾಗಿ ಈ ಶಾಲೆಗಳ ಶಿಕ್ಷಕರಿಗೆ ಮೂರು ತಿಂಗಳಿಂದ ವೇತನವಾಗಿಲ್ಲಎಂದು ಅಧಿಕಾರಿಗಳು ಹೇಳಿದ್ದಾರೆ
ಮೇಲ್ದರ್ಜೆಗೇರಿದ ಶಾಲೆಗಳು:
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಹೊನಗಾ, ಖಂಜಾರಗಲ್ಲಿ ಬೆಳಗಾವಿ, ಕಾಕತಿ, ದೇವಲಟ್ಟಿ, ಬಾಂದಾರಹಳ್ಳಿ, ಕಿತ್ತೂರ, ಕಾನಪೇಠ ಗ್ರಾಮದ ಪ್ರಾಥಮಿಕ ಶಾಲೆಗಳು ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕರಗಾಂವ, ಕನಸಗಿರಿ, ಮಾಡಲಗಿ, ಸೊಲ್ಲಾಪುರ, ಕೋನನಕೇರಿ, ತವಗ, ಗೋಸಬಾಳ, ನಾಯಿಂಗ್ಲಜ, ತೋರಣಹಳ್ಳಿ ಗ್ರಾಮದ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಮೇಲ್ದರ್ಜೆಗೇರಿದ ಈ 16 ಪ್ರೌಢಶಾಲೆಗಳಿಗೆ ಮುಖ್ಯೋಪಾಧ್ಯಾಯರು ಇಲ್ಲದಿರುವುದು ಮಕ್ಕಳ ಕಲಿಕೆಗೆ ಹಿನ್ನಡೆಯಾಗಲಿದೆ. ಸರಕಾರ ಕೂಡಲೇ ಈ ಎಲ್ಲ ಶಾಲೆಗಳಿಗೆ ಮುಖ್ಯೋಪಾಧ್ಯಾಯರನ್ನು ನೇಮಿಸಬೇಕು. ಅಲ್ಲದೆ, ಮೂರು ತಿಂಗಳಿಂದ ವೇತನವಿಲ್ಲದೆ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಕಾಲಕ್ಕೆ ವೇತನ ಪಾವತಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.
ಕೃಪೆ:ವಿಕ