‘ಹುಟ್ಟಿದಾಗ ನಾಲ್ಕು ಕಾಲು, ಹೋಗುವಾಗ ನಾಲ್ಕು ಜನ’. ಈ ಮಾತು ಮನಸಿನಂಗಳದಲಿ ಹೊಳೆದಾಗ ನಿಟ್ಟುಸಿರು ಬಿಟ್ಟೆ. ಹೌದಲ್ಲವೆ? ಅಂಬೆಗಾಲಿಟ್ಟು ಹರಿದಾಡುವ ಎಳೆ ಮಗುವಿಗೆ ಮುಂದೆ ಸಾಗಲು ಆಧಾರ ಎರಡು ಕಾಲು, ಎರಡು ಕೈ. ಅದೇ ಆ ಮಗು ಬೆಳೆಯುತ್ತ ಬಲಿಯುತ್ತ, ಬಾಲ್ಯ, ಯೌವನ, ಪ್ರೌಢ, ವೃದ್ಧಾಪ್ಯ ಹೀಗೆ ಬದುಕಿನ ವಿವಿಧ ಮಜಲುಗಳನ್ನು, ಹಂತ ಹಂತವಾಗಿ ದಾಟಿ, ಕೊನೆಗೆ ಉಸಿರು ನಿಲ್ಲಿಸಿದಾಗ, ಎತ್ತುವವರು ನಾಲ್ಕು ಜನ ತಾನೆ? ಮನುಷ್ಯನ ಹುಟ್ಟು, ಸಾವಿನ ಮಧ್ಯೆ ಅವನ ಅಮೂಲ್ಯವಾದ ಜೀವನದ ಅಸ್ತಿತ್ವ ನೋಡಿದರೆ, ಎಲ್ಲವೂ ಆಶ್ಚರ್ಯ!
ನಾನೀಗ ಬದುಕಿನ ಮಧ್ಯ ಭಾಗದಲ್ಲಿ ಬಂದು ನಿಂತಿರುವೆ. ಜೀವನದ ಅದೆಷ್ಟೋ ಸಿಹಿ ಕಹಿ ಹಾದಿಯನು ಸವೆಸುತ್ತ, ಜವಾಬ್ದಾರಿಗಳ ನಿಭಾಯಿಸುತ್ತ, ಮುಂದೆ ಸಾಗಿರುವಾಗ, ಕ್ಷಣ ಕಾಲ ನಿಂತು ಹಿಂದಿರುಗಿ ನೋಡಿದೆ. ನಾನು ಮಾಡಿದ ಕೆಲಸ ಕಾರ್ಯಗಳು, ಸುತ್ತಮುತ್ತಲಿನ ನನ್ನವರು ಕಂಡರು. ನನ್ನವರು ಅಂದರೆ ನನ್ನ ಪರಿವಾರ, ಬಂಧು, ಬಳಗ, ಸ್ನೇಹಿತರು. ಜೀವನದ ಹಾದಿಯಲಿ ಹಾಗೇ ಸಂಪರ್ಕಕ್ಕೆ ಬಂದವರೆಲ್ಲರಲ್ಲಿ ಅತ್ಯಂತ ಹಿರಿಯ ಜೀವವೆಂದರೆ ಅಪ್ಪ!
ಅಪ್ಪನಿಗೀಗ ಎಂಬತ್ತು ದಾಟಿದೆ. ಬಿಳಿ ಕೂದಲು, ಬಿಳಿದಾಡಿ, ಇರಬಹುದಾದ ಕೆಲವೇ ಕೆಲವು ಹಲ್ಲುಗಳು, ಅಲ್ಲೇ ಸುಕ್ಕುಗಟ್ಟಿದ ಚರ್ಮ, ಕ್ರುಶವಾದ ದೇಹ, ಇದಿಷ್ಟು ಕಣ್ಣಿಗೆ ಕಾಣುವಂತಿರುವ ಭೌತಿಕ ಅಂಶಗಳು. ಅವುಗಳ ಮಧ್ಯೆ ಅಪ್ಪ ಎನ್ನುವ ಭಾವನಾತ್ಮಕ ಸಂಬಂಧ, ಅಪ್ಪ ಮಗಳು ಎನ್ನುವ ಹುಚ್ಚು ಪ್ರೀತಿ, ಅದಾರಚೆಗೂ ಅದೇನೊ ಒಂದು ಸತ್ಯವಿದೆ. ವ್ಯಾಮೋಹದಾಚೆಗಿರುವ ಆ ಸತ್ಯದ ದರ್ಶನದಲ್ಲಿ ಅಪ್ಪನನ್ನು ಕಾಣುವ ತವಕದ ತಲ್ಲಣ ಶುರುವಾಯಿತು.
ಹೀಗೆನಿಸಿದಾಗ ಅಪ್ಪನನ್ನು ದ್ರುಷ್ಟಿಸಿ ನೋಡಿದೆ. ನನ್ನ ಕಣ್ಣೆದುರಿಗೇ ಕುಳಿತು ಹರಟೆ ಹೊಡೆಯುತ್ತಿದ್ದ. ಹೇಗೆ ಕಾಣುತ್ತಿದ್ದಾನೆ? ಹೇಗೆ ಮಾತನಾಡುತ್ತಾನೆ? ಹಿಂದೆ ಹೇಗೆ ಇದ್ದ? ಅವನ ಬದುಕಿನ ಕಳೆದು ಹೋದ ದಿನಗಳು, ನನ್ನ ಅನುಭವದ ಮೂಲದಿಂದ ನೆನಪಾಗತೊಡಗಿತು.
ಅಪ್ಪನೊಂದಿಗೆ ಕುಳಿತು ಮಾತನಾಡುತ್ತಿದ್ದರೆ, ಅಬ್ಬಾ! ಎನಿಸುತ್ತದೆ. ಅದೆಷ್ಟೊ ಐತಿಹಾಸಿಕ ವಿಷಯಗಳ, ರಾಜಕೀಯ ಸಂಗತಿಗಳ, ಪ್ರಸಕ್ತ ಸಾಮಾಜಿಕ ಸಮಸ್ಯೆಗಳ, ಸಮಯ ಸಿಕ್ಕಾಗಲೆಲ್ಲಾ ಹೇಳೇ ಹೇಳಬೇಕೆನ್ನುವ ಉತ್ಸಾಹಕ್ಕೇನೂ ಕುಂದಿರಲಿಲ್ಲ. ಜೀವನೋತ್ಸಾಹವನ್ನು ಅಪ್ಪನಿಂದ ಕಲಿಯಬೇಕು ಎನಿಸುವಷ್ಟು ಮಾದರಿಯಾಗಿದ್ದ.
ಈಗ ತಂತ್ರ ಜ್ಞಾನ ಬಹಳ ಮುಂದುವರಿದು ಅಂಗೈಯಲ್ಲೇ ಎಲ್ಲಾ ಸಿಗುತ್ತಿರುವಾಗ, ದೂರದಲ್ಲಿರುವ ದೊಡ್ಡಮ್ಮನ ಮಗಳು, ಅಂದರೆ ನನ್ನ ಅಕ್ಕನಿಗೆ ವಿಡಿಯೊ ಕಾಲ್ ಮಾಡಿ, ಅಪ್ಪನಿಗೆ ಭೇಟಿ ಮಾಡಿಸಿದೆ. ಇಬ್ಬರಿಗೂ ಹಿಡಿಸಲಾರದಷ್ಟು ಸಂತೋಷವಾಯಿತು.
‘ಹೇಗಿದಿರಾ ಚಿಕ್ಕಪ್ಪ?’
ಈ ಪ್ರಶ್ನೆಯಿಂದ ಆರಂಭವಾಗಿತ್ತು. ಕೊನೆಗೆ ಅಕ್ಕನ ತೀರ್ಮಾನದ ಮಾತು ಹೀಗಿತ್ತು,
‘ರಾಣಿ, ಒಂದು ಕಾಲದಲ್ಲಿ ಚಿಕ್ಕಪ್ಪ ಸಿನಿಮಾ ಹೀರೊ ಇದ್ದ ಹಾಗೆ ಇದ್ದರು. ಈಗ ನೋಡಿದರೆ ನಂಬೋಕೆ ಅಗಲ್ಲ.’
ಅಕ್ಕನ ಮಾತು ಅಕ್ಷರಶಃ ಸತ್ಯ. ಈ ಮುಪ್ಪು ಯಾರನ್ನು ಬಿಟ್ಟಿದೆ ಹೇಳಿ? ಮುಂದೆ ಹೋದವರಿಗೂ ಮುಪ್ಪು, ಹಿಂದೆ ಬರುವವರಿಗೂ ಮುಪ್ಪು ತಪ್ಪಿದ್ದಲ್ಲ. ಇಂದು ಅಪ್ಪ, ನಾಳೆ ನಾವು. ಇದು ಹೀಗೇ ಗಿರಕಿ ಹೊಡೆಯುವ ವಾಸ್ತವ!
ಸಾಯಂಕಾಲದ ಕಾಫಿ ಹಿಡಿದುಕೊಂಡು ಹೋಗಿ ಅಪ್ಪನ ಎದುರಿಗೆ ಕುಳಿತೆ. ನಾನು ಕುಡಿಯಲು ಆರಂಭಿಸಿದೆ.
ಅಪ್ಪ ಕಾಫಿ ಸಿಕ್ಕ ಸಂತೋಷಕ್ಕಿಂತ, ಮಗಳು ಬಂದು ಎದುರಿಗೆ ಕುಳಿತ್ತಿದ್ದಾಳೆ ಎನ್ನುವ ಖುಶಿ! ಕೈಯಲ್ಲಿರುವ ಕಾಫಿ ಕಪ್ ಅನ್ನು ಅಲ್ಲಿಟ್ಟೆ, ಇಲ್ಲಿಟ್ಟೆ, ಅಂತ ಆಟವಾಡಿದಂತೆ ಮಾಡಿದ. ಅವನ ಬಾಡಿ ಲ್ಯಾಂಗ್ವೇಜ್ ಬಹಳ ಸ್ಪಷ್ಟವಾಗಿ ಅಭಿವ್ಯಕ್ತಿಸುತ್ತಿತ್ತು. ಏನು ಮಾತಾಡಲಿ? ಏನು ಹೇಳಲಿ? ಯಾವುದು ಮೊದಲು? ಯಾವುದು ಆಮೇಲೆ? ಹೀಗೆ ನೂರೆಂಟು ಗೊಂದಲದಲಿ ಸಿಕ್ಕಿ ಹಾಕಿಕೊಂಡು ಪೇಚಾಡುತ್ತಿದ್ದ. ಅಪ್ಪನನ್ನೇ ದ್ರುಶ್ಟಿಸಿ ನೋಡುತ್ತ ಗೊಳ್ಳ್ ಅಂತ ನಕ್ಕು ಬಿಟ್ಟೆ.
ಅಪ್ಪ ಎಷ್ಟು ಸೂಕ್ಷ್ಮಿ ಎಂದರೆ ನಾ ನಕ್ಕಿದ್ದು ತಿಳಿದು, ತಾನೂ ಜೋರಾಗಿ ನಕ್ಕ. ಸ್ವಲ್ಪ ಹೊತ್ತು ಇಬ್ಬರೂ ನಕ್ಕಿದ್ದೇ ನಕ್ಕಿದ್ದು… ಕಣ್ಣಂಚಲಿ ನೀರು ಜಿನುಗುವವರೆಗೂ ನನ್ನ ನಗು ನಿಲ್ಲುತ್ತಿರಲಿಲ್ಲ. ಹೊಟ್ಟೆ ಹಿಡಿದು ನಗುವಾಗ, ನನ್ನ ಮಕ್ಕಳೆಲ್ಲಾ ಬಂದು ಬಗ್ಗಿ ನೋಡಿ, ‘ಈ ಅಪ್ಪ ಮಗಳಿಗೆ ಹುಚ್ಚು ಹಿಡಿದಿರಬಹುದೆ?’ ಎನ್ನುವಂತೆ ಗಮನಿಸಿ ನೋಡುತ್ತ, ಮೌನವಾಗಿ ತಲೆ ಚಚ್ಚಿಕೊಂಡು, ನಗುತ್ತ ಹೋದರು.
ಅಪ್ಪನಿಗೆ ವಯಸ್ಸಿಗನುಗುಣವಾಗಿ ಮರೆವು ಬಂದಿರಬಹುದೆ? ಎಂದು ಒಮ್ಮೊಮ್ಮೆ ಮನಸು ಆಲೋಚಿಸುತ್ತಿರುವಾಗಲೇ, ದಿಢೀರ್ ಅಂತ ನನಗೇ ನೆನಪಾಗದ ವಿಷಯವನ್ನು ಸ್ವಾರಸ್ಯಕರವಾಗಿ ಹೇಳಿ ಬಿಡುತ್ತಿದ್ದ. ಮಾತು ಬಾರದೆ ಮೂಕಳಂತೆ ಸುಮ್ಮನಾಗಿ ಬಿಡುತ್ತಿದ್ದೆ. ‘ಅರ್ರೆ!!! ಅಪ್ಪನಿಗೆ ಏನೆಲ್ಲಾ ನೆನಪಿದೆ!’ ಕಣ್ಣರಳಿಸಿ, ಹುಬ್ಬೇರಿಸುವಂತೆ ಮಾಡುತ್ತಿದ್ದ. ಅನೇಕ ಬಾರಿ ಅಪ್ಪ ಹೇಳಿದ ಸಂಗತಿಗಳ ನಾ ಮರೆಯಬಾರದೆಂದು ಮೊಬೈಲ್‌ನ ಡಾಕ್ಯುಮೆಂಟ್‌ನಲ್ಲಿ ನೋಟ್ ಮಾಡಿಕೊಳ್ಳುತ್ತಿದ್ದೆ. ನಾವು ಅಪ್ಪ, ಮಗಳ ಮಧ್ಯೆ ಸ್ಮರಣ ಶಕ್ತಿಯ ಪಂದ್ಯ ಕಟ್ಟಿದಂತೆನಿಸಿ ಮನಸಿಗೆ ಮುದ ನೀಡಿತು.
ಅಪ್ಪನಿಗೆ ವಯಸ್ಸಾಯಿತೆಂದು ಹಂತ ಹಂತವಾಗಿ ಅನಿಸಲು ಶುರುವಾಗಿದೆ. ಅವನ ಜೊತೆ ಜೊತೆಯಲ್ಲೇ ನನಗೂ ವಯಸ್ಸಾಗುತ್ತದೆಯಲ್ಲ! ಎನಿಸಿದಾಗ ನಗು ಬಂತು. ಎಷ್ಟೇ ಆದರೂ ಅಪ್ಪನಿಗೆ ನಾ ಮಗಳೇ ತಾನೆ? ಅದೊಂದು ಸಮಾಧಾನ.
ಅಪ್ಪನಿಗೆ ಏನಾದರೂ ಬೇಕಿದ್ದರೆ ಸಹಾಯ ಮಾಡಬೇಕು ಎನ್ನುವ ತವಕ ನನ್ನಲ್ಲಿ. ಹಾಗೆ ನಮಗನಿಸಿದರೆ ಆಯಿತೆ? ಅದು ಅಪ್ಪನಿಗೂ ಅನಿಸಬೇಕಲ್ಲ? ಆಗ ನಾವು ಸಹಾಯ ಮಾಡಬಹುದು. ಆದರೆ ಅಪ್ಪನ ವಿಚಾರವೇ ಬೇರೆ. ‘ನಾ ಸಿಂಬೂಳ್ ಸೀನದ ಇದ್ರ ನಾನೇ ಸೀನ್ತಾ. ನೀ ಹೆಂಗ್ ಸೀನ್ತೀ?’ ಹೀಗೆ ಅಪ್ಪ ಬೀದರಿನ ಭಾಷೆಯಲ್ಲಿ ಮರು ಪ್ರಶ್ನೆ ಮಾಡಿದಾಗ ನಕ್ಕು ಸುಮ್ಮನಾಗುವುದು ಜಾಣತನ. ಇಲ್ಲದಿದ್ದರೆ ಕೆಂಪು ಮಣ್ಣಿನ ಕಂಪು ಕಡಕ್ಕಾಗುವ ಅಪಾಯವಿರುತ್ತದೆ.
ವಯಸ್ಸಾದಂತೆಲ್ಲಾ ಸ್ವಾಭಿಮಾನ ಜಾಸ್ತಿಯಾಗುತ್ತೊ ಏನೊ? ತನ್ನ ಕೆಲಸ ತಾನೇ ಮಾಡಿಕೊಳ್ಳುವ ಹಟದೊಂದಿಗೆ ಸ್ವಾವಲಂಬಿಯಾಗಿರುವ ಹೆಬ್ಬಯಕೆ. ಅದೂ ಒಂದು ರೀತಿ ಒಳ್ಳೆಯದೇ ಆದರೂ ಕೆಲವೊಮ್ಮೆ ಅತಿ ಎನಿಸುತ್ತಿತ್ತು.
ಒಂದು ಕಾಲದಲ್ಲಿ ಅಪ್ಪ ಶೈಕ್ಷಣಿಕ ಕ್ಷೇತ್ರದ ಸುಪ್ರಸಿದ್ಧ ವ್ಯಕ್ತಿ. ‘ಶಿಕ್ಷಕ’ ವೃತ್ತಿಯಿಂದ ಆರಂಭಿಸಿ, ಶಾಲಾ ತನಿಕಾಧಿಕಾರಿಯಾಗಿ ನಿವೃತ್ತಿ ಹೊಂದಿ, ವಿಶ್ರಾಂತ ಜೀವನ ಸಾಗಿಸುತ್ತಿರುವ ಹಿರಿಯ ಜೀವ. ಐವತ್ತು ವರ್ಷಗಳ ಹಿಂದೆ ಶಿಕ್ಷಣ ವಲಯದ ಧುರೀಣ, ಹೋರಾಟಗಾರ, ಬರಹಗಾರ, ಅನುವಾದಕ ಇನ್ನೂ ಏನೇನೊ ಆಗುವುದರ ಜೊತೆಗೆ ಸತ್ಯ, ನ್ಯಾಯ, ನಿಶ್ಟುರಿಯೂ ಹೌದು.
ಸಮಾಜದಲ್ಲಿ ಅಪ್ಪ ಇದ್ದಲ್ಲಿ ತಲ್ಲಣ ಇರುತ್ತಿತ್ತು, ಹೋರಾಟ ಇರುತ್ತಿತ್ತು. ನೇರವಾಗಿ ಹೇಳುವುದಾದರೆ ವಾಸ್ತವ ನೆಲೆಯಲ್ಲಿ ಚಿಂತನೆ ಮಾಡುವ ಜಗಳಗಂಟ! ಇಂದಿಗೂ ಬೀದರಿನ ಜನತೆ ‘ಸಿದ್‌ಬಟ್ಟೆ ಸರ್ ಅಂದ್ರ ತೋಲ್ ಸಿಟ್ನೌರ್ ಹರ’, ‘ಸಿದ್‌ಬಟ್ಟೆ ಸರ್ ಮಾತಿಗ್ ಖಂಗಾ ಖೀಂಗ ಅನ್ಪಲೆ ಇಲ್ರಿ, ಯಾಕಂದುರಾ ಖರೆ ಮಾತಾಡ ಮನ್ಷಾ’ ಅಂತ ಪ್ರೀತಿ, ಅಭಿಮಾನದಿಂದಲೇ ನೆನೆಯುತ್ತಾರೆ.
ನನಗೆ ಬುದ್ದಿ ತಿಳಿದಾಗಿನಿಂದ ಅಪ್ಪನೊಂದಿಗೆ ಕಳೆದ ಸಮಯ, ಪ್ರತಿ ಕ್ಷಣ ಕ್ಷಣವೂ ನೆನಪಿದೆ. ಹುಟ್ಟಿದಾಗಿನಿಂದ ಇಪ್ಪತ್ತೊಂದು ವರ್ಷ ವಯಸ್ಸಿನವರೆಗೆ ಅಪ್ಪನ ಹೆಗಲ ಮೇಲೆ ಕುಳಿತೇ ಜೀವನ ಸಾಗಿಸಿದ ಭಾವನೆ. ಹಾಗೆ ಕುಳಿತು ಸುತ್ತಮುತ್ತ ನೋಡಿದ ಕ್ಷಣಗಳನ್ನು ಸೆರೆ ಹಿಡಿದಿಡುವ ಉತ್ಸಾಹ ಮನಸಿಗಿದೆ. ನೆನಪಿನಂಗಳದ ಸವಿಯನು ಅನಾವರಣ ಮಾಡುವಾಗ ಅಪ್ಪನದು ಇಳಿವಯಸ್ಸು, ನನ್ನದು ಮುಸ್ಸಂಜೆಯ ಸಮಯ. ಆದರೂ ಅದು ಆಹ್ಲಾದಕರ.
ಇಂದಿಗೂ ಅಪ್ಪನೊಂದಿಗೆ ಕುಳಿತು ಕಾಫಿ ಸವಿಯುತ್ತ, ಅದೂ… ಇದೂ… ಚರ್ಚೆ ಮಾಡುತ್ತಲೇ ಸಾಗಿದೆ ಜೀವನ… ಅಪ್ಪ ಇಲ್ಲದೆ ಕೊರಗುವ ಅದೆಷ್ಟೋ ಮನಸುಗಳ ನಡುವೆ, ನನಗಿನ್ನೂ ಅಪ್ಪನೊಂದಿಗೆ ಸಮಯ ಕಳೆಯಲು ಅವಕಾಶವಿದೆ ಎನ್ನುವ ಕೃತಜ್ಞತಾ ಭಾವದಿಂದ ಮನದುಂಬಿ ಬಂತು. ಉಸಿರು ಏರಿಳಿತ ನಿರಂತರ ಇರುವವರೆಗೆ, ‘ಜೀವನ’ ‘ಹಸಿರು’! ಹಾಗಿಯೇ ಸಾಗಬೇಕಲ್ಲವೆ? ಹೌದು ಹಾಗೆಯೇ ಸಾಗಿದೆ ಈ ಜೀವನ ಯಾನ!
ಲೇಖಕರು:ಸಿಕಾ