ಬಸವಲಿಂಗಯ್ಯ ಹಿರೇಮಠ ಅವರ ಪಾರ್ಥಿವ ಶರೀರ ರಾತ್ರಿ ಧಾರವಾಡದಿಂದ ಸ್ವಗ್ರಾಮಕ್ಕೆ ಆಗಮನ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಜಾನಪದ ಲೋಕದ ಮಾಂತ್ರಿಕ ಜನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರ  ಪಾರ್ಥಿವ ಶರೀರ ಧಾರವಾಡದಿಂದ ಸ್ವಗ್ರಾಮ ಬೈಲೂರಿಗೆ ತಡ ರಾತ್ರಿ 9.40 ಕ್ಕೆ ತಲುಪಿದೆ. ದಿ.ಬಸವಲಿಂಗಯ್ಯ ಹಿರೇಮಠ ಪಾರ್ಥಿವ ಶರೀರದ ಜೊತೆಗೆ ಅವರ ಧರ್ಮಪತ್ನಿ ವಿಶ್ವೇಶ್ವರಿ ಪುತ್ರ ಭೂಷಣ್ ಮತ್ತು ಸೊಸೆ ಸೇರಿದಂತೆ ಇನ್ನೂ ಅನೇಕರು ಇದ್ದರು.

ಬೈಲೂರಿನ ಅವರ ಸ್ವಂತ ಮನೆಗೆ ಪಾರ್ಥೀವ ಶರೀರ ಹೊತ್ತ ವಾಹನ ಬಂದೊಡನೆ ಸ್ಥಳೀಯ ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು.

ಬಸವಲಿಂಗಯ್ಯ ಹಿರೇಮಠ ಅವರ ಪಾರ್ಥಿವ ಶರೀರ ವೀಕ್ಷಿಸುತ್ತಿರುವ ಶ್ರೀಗಳು ಮತ್ತು ಗಣ್ಯರು

ಈ ವೇಳೆ ತಹಶೀಲ್ದಾರ್ ಮಹೇಶ ಪತ್ರಿ, ಯುವ ಸಾಹಿತಿ ಸಿದ್ದರಾಮ ತಳವಾರ, ವರದಿಗಾರರಾದ ವಿಠ್ಠಲ ಮಿರಜಕರ, ಚಂದ್ರಕಾಂತ ಹೈಬತ್ತಿ, ಗ್ರಾಮಸ್ಥರು, ಸಂಬಂಧಿಕರು ಸೇರಿದಂತೆ ಇನ್ನೂ ಅನೇಕರು ಇದ್ದರು.

ಸೋಮವಾರ ಮುಂಜಾನೆ 11-30 ಕ್ಕೆ ಅಂತಿಮ ಸಂಸ್ಕಾರ ಜರುಗಲಿದ್ದು ಇದಕ್ಕಿಂತ ಮುಂಚೆ ನಾಡಿನ ಸಾಧು ಸಂತರು, ರಾಜಕೀಯ ನಾಯಕರು, ಕಲಾವಿದರು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಾಯಕರು, ಚಲನಚಿತ್ರ ನಟರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಆಗಮಿಸಿ ನುಡಿನಮನ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Share This Article
";