ಲಿಂಗಸುಗೂರು :ಬೆಳಕು ಯೋಜನೆಯು ಬಡವರ ಪಾಲಿನ ಪ್ರಜ್ವಲಿಸುವ ಜ್ಯೋತಿ ಯೋಜನೆಯಾಗಿದ್ದು ಯೋಜನೆ ವತಿಯಿಂದ ತಾಲೂಕಿನ ವಿದ್ಯುತ್ ರಹಿತ ಮನೆಗಳಿಗೆ ಉಚಿತವಾಗಿ ವಿದ್ಯುತ್ ಮೀಟರ್ ಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಶಾಸಕ ಡಿ.ಎಸ್ ಹುಲಿಗೇರಿ ಹೇಳಿದರು.
ಲಿಂಗಸುಗೂರು ತಾಲೂಕಿನ ಉಪ್ಪಾರನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲಾರಟ್ಟಿ ತಾಂಡದಲ್ಲಿ “ಬೆಳಕು ಯೋಜನೆಯ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳಕು ಯೋಜನೆಯ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕಳೆದ 70 ವರ್ಷಗಳಿಂದ ವಿದ್ಯುತ್ ಸೌಕರ್ಯಗಳಿಂದ ವಂಚಿತವಾಗಿರುವ ಕಿಲಾರಟ್ಟಿ ತಾಂಡಾಕ್ಕೆ ಬೆಳಕು ಯೋಜನೆಯಲ್ಲಿ ವಿದ್ಯುತ್ ಸೌಕರ್ಯ ಕಲ್ಪಿಸಿದ ಶಾಸಕರ ಕಾರ್ಯವೈಖರಿಗೆ ಮತ್ತು ಜೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ಫಲಾನುಭವಿಗಳು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಜೆಸ್ಕಾಂ ವಿಭಾಗ, ಉಪ ವಿಭಾಗದ ಅಧಿಕಾರಿಗಳು, ಉಪ್ಪಾರ್ ನಂದಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕುಂಬಾರ