ಮಗನನ್ನೇ …ಕೊಲೆ ಮಾಡಿಸಿದ ತಂದೆ ! ಸುಣ್ಣದ ಡಬ್ಬಿಯಿಂದ ಸಿಕ್ಕಿಬಿದ್ದ ಕೊಲೆಗಾರರು!

ಬೆಳಗಾವಿ: ಕುಡಿತದ ಚಟ ಬಿಡುವಂತೆ ಬುದ್ಧಿವಾದ ಹೇಳಿದರೂ ಕೇಳದ ಮಗನನ್ನು ತಂದೆಯೇ ಸಂಚು ಹೂಡಿ ಕೊಲೆ ಮಾಡಿಸಿದ ಘಟನೆ ಗೋಕಾಕ ತಾಲೂಕಿನ ಕುಟರನಟ್ಟಿಯಲ್ಲಿ ನಡೆದಿದ್ದು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (39) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿ ಸಂಗಮೇಶನ ಸಂಗಡ ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಮಂಜುನಾಥ ಶೇಖಪ್ಪ ಹೊಂಗಲ (43), ಕೊಲೆ ಮಾಡಲು ಸಹಾಯ ಮಾಡಿದ ಯರಗಟ್ಟಿ ತಾಲೂಕಿನ ಅಡಿವೆಪ್ಪ ಅಜ್ಜಪ್ಪ ಬೊಳೇತ್ತಿನ( 38) ಎಂಬ ಇಬ್ಬರು ಆರೋಪಿಗಳನ್ನು ಮುರುಗೋಡ ಪೊಲೀಸರು ಬಂಧಿಸಿದ್ದಾರೆ.

ಸಂಗಮೇಶನನ್ನು ಬೈಲಹೊಂಗಲದ ಸಾರಾಯಿ ಅಂಗಡಿಯಲ್ಲಿ ಕಂಠಪೂರ್ತಿ ಕುಡಿಸಿದ ಆರೋಪಿ ಮಂಜುನಾಥ ಸಂಗಮೇಶನನ್ನು ಬೈಕ್ ಮೇಲೆ ಅಡಿವೆಪ್ಪನ ಸಹಾಯದಿಂದ ಕುಟರನಟ್ಟಿಗೆ ಕರೆದುಕೊಂಡು‌ ಹೋಗಿ‌ ನಿರ್ಜನ ಪ್ರದೇಶದಲ್ಲಿ ಕಲ್ಲು ಎತ್ತಿ ಹತ್ಯೆ ಮಾಡಿ ಯಾರಿಗೂ ಸುಳಿವು ಸಿಗದಂತೆ ಪರಾರಿಯಾಗಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಘಟನೆ ನಡೆದ ಕೆಲವೇ ದಿನಗಳಲ್ಲಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಸಂಗಮೇಶ ಬೈಲಹೊಂಗಲ ಹಾಗೂ ಬೆಳಗಾವಿಯಲ್ಲಿ ಈರುಳ್ಳಿ ವ್ಯಾಪಾರ ವಹಿವಾಟು ಮಾಡಿಕೊಂಡು ಬರುತ್ತಿದ್ದ. ಬಂದ ಲಾಭದಲ್ಲಿ ನಿತ್ಯ ಸಾರಾಯಿ ಕುಡಿಯುವುದೇ ಕಾಯಕ ಮಾಡಿಕೊಂಡು ಮನೆಯವರಿಗೂ ಭಾರವಾಗಿದ್ದ. ಸಾರಾಯಿ ಕುಡಿಯುವುದನ್ನು ಬಿಡುವಂತೆ ಮನೆಯಲ್ಲಿ ಎಷ್ಟು ಬುದ್ಧಿವಾದ ಹೇಳಿದರೂ ಬಿಟ್ಟಿರಲಿಲ್ಲ. ಬಹಳಷ್ಟು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿತ್ತು. ಈ ವಿಚಾರವಾಗಿ ಮನೆಯಲ್ಲಿ ಸಾಕಷ್ಟು ಬಾರಿ ಜಗಳವೂ ಆಗಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ‌ ಈತನ ಕಾಟ ತಡೆಯಲು ಸಾಧ್ಯವಾಗದೇ ಸಂಗಮೇಶನ ತಂದೆ ಮಾರುತಿಯು ಮಂಜುನಾಥ ಮತ್ತು ಆತನ ಸ್ನೇಹಿತ ಅಡಿವೆಪ್ಪನ ಸಹಾಯದಿಂದ ಕೊಲೆ ಮಾಡಿಸಿದ್ದಾನೆ.

ತಲೆ ಮೇಲೆ ಕಲ್ಲು ಹಾಕಿ ಕೊಲೆ
ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಮೂವರು ಸಾರಾಯಿ ಕುಡಿದಿದ್ದರು. ಬಳಿಕ ಮಂಜುನಾಥ ಮತ್ತು ಅಡಿವೆಪ್ಪ ಸೇರಿ ಕುಟರನಟ್ಟಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಸಂಗಮೇಶನ ತಲೆಯ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿ ಪರಾರಿಯಾಗಿದ್ದರು. ಆಗಸ್ಟ್ 20 ರಂದು ಸುದ್ದಿ ತಿಳಿದ ಮುರುಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಹೋದಾಗ ಹತ್ಯೆಯಾಗಿದ್ದ. ಸಂಗಮೇಶನ ಜೇಬಿನಲ್ಲಿ ಸುಣ್ಣದ ಡಬ್ಬಿ ಹಾಗೂ ಆರೋಪಿ ಮಂಜುನಾಥ ಮೊಬೈಲ್ ನಂಬರ್ ಚೀಟಿ ಸಿಗುತ್ತದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜೀವ ಪಾಟೀಲ, ಈರುಳ್ಳಿ ವ್ಯಾಪಾರಿಯ ಕೊಲೆಗೆ ಸಂಬಂದಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";