ಮದ್ಯ ಮಾರಾಟಗಾರರ ಅಂಧಾ-ದುಂಧಿ! ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ?

ವರದಿ:ಉಮೇಶ ಗೌರಿ(ಯರಡಾಲ)

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ನಿಗದಿತ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ನಡೆದಿದ್ದು, ಮದ್ಯ ಪ್ರಿಯರಿಗೆ ನುಂಗಲಾರದ ತುತ್ತಾಗಿದೆ.ಇದನ್ನು ಕಂಡು ಕಾಣದಂತೆ ಕುರುಡರಾದ ಇಲಾಖೆ ಅಧಿಕಾರಿಗಳು ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ಸಗಟು ಮಾರಾಟಗಾರರು ಹಾಗೂ ಬಿಡಿ ಮಾರಾಟಗಾರರು ತಮ್ಮ ಮನಸ್ಸಿಗೆ ಬಂದ ಬೆಲೆಗೆ ಅಂಧಾ-ದುಂಧಿ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ

ಹೌದು! ಚುನಾವಣೆ ಹಿನ್ನೆಲೆಯಲ್ಲಿ ಈಗಂತೂ ಮದ್ಯದ ವಹಿವಾಟು ಜೋರಾಗಿಯೇ ನಡೆದಿದೆ, ಬೇಡಿಕೆಗೆ ತಕ್ಕಂತೆ ಎಣ್ಣೆ ಪೂರೈಕೆಯಾಗುತ್ತಿಲ್ಲ ಅನ್ನೋದು ನೆಪ ಆಗಿದೆ, ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಎಲೆಕ್ಷನ್ ಕಾರಣದಿಂದಾಗಿ ಮದ್ಯ ಸರಬರಾಜು ವ್ಯತ್ಯಯ ಉಂಟು ಮಾಡಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಕಣದಲ್ಲಿ ಒಂದು ಕಡೆ ಝಣ ಝಣ ಕಾಂಚಾಣ ಸದ್ದು ಮಾಡುತ್ತಿದ್ದು, ಮತ್ತೊಂದು ಕಡೆ ನಶೆ ಏರುವುದಕ್ಕೆ ಹೆಂಡದ ಹೊಳೆ ಹರಿಸುತ್ತಿವೆ. ಎಲ್ಲೆಡೆ ಮದ್ಯದ ವಹಿವಾಟು, ದಾಸ್ತಾನು ಹಾಗೂ ಸಾಗಣೆ ಜೋರಾಗಿದೆ.

ರಾಜಕೀಯ ನಾಯಕರು ಹಾಗೂ ಬೆಂಬಲಿಗರು ಪಕ್ಷದ ಕಾರ್ಯಕರ್ತರಿಗೆ ಬಾಡೂಟದ ಜತೆಗೆ ಮದ್ಯದ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಕೆಲ ರಾಜಕೀಯ ಮುಖಂಡರು ಟೋಕನ್‌ ಮೂಲಕ ಮದ್ಯದಂಗಡಿಗಳಲ್ಲಿ ಮದ್ಯ ವಿತರಿಸುವ ವ್ಯವಸ್ಥೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮದ್ಯಕ್ಕೆ ಶೇ.20ರಷ್ಟು ಬೇಡಿಕೆ ಹೆಚ್ಚಳವಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಮದ್ಯ ಪೂರೈಕೆಯಾಗುತ್ತಿಲ್ಲ. ಚುನಾವಣಾ ನೀತಿಸಂಹಿತೆಯಿಂದಾಗಿ ಮದ್ಯದಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸಿಗುತ್ತಿಲ್ಲ. ಇದರಿಂದ ಮದ್ಯಪ್ರಿಯರು ಕಂಗಾಲಾಗಿದ್ದಾರೆ.

ಕಿರಾಣಿ ಅಂಗಡಿ, ಟೀ ಅಂಗಡಿ, ಹೋಟೆಲ್, ಪಾನ್‌ ಡಬ್ಟಾಗಳಲ್ಲೂ ಮದ್ಯ ಮಾರಾಟ. ರಾತ್ರೋ ರಾತ್ರಿ ಹಳ್ಳಿಗಳಿಗೆ ಮನಸೋಇಚ್ಛೆ ಸರಬರಾಜು, ಬಾರ್‌ ಮಾಲೀಕರಾದ ಪ್ರಭಾವಿಗಳು ಆಡಿದ್ದೇ ಆಟ. ಕಡಿಮೆ ಬೆಲೆ ಮದ್ಯ, ಹೆಚ್ಚಿನ ದರಕ್ಕೆ ಮಾರಾಟ.. ಇವು ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದಕ್ಕೆ ಉದಾಹರಣೆಗಳು.

ಪ್ರತಿ ಬಾಟಲ್ಗೆ 30ರಿಂದ 40 ರೂ.ವರೆಗೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ.ಇನ್ನು ಸಿಎಲ್-2, ಸಿಎಲ್-7,  ಸಿಎಲ್-9 ಪರವಾನಗಿ ಪಡೆದುಕೊಂಡಿರುವ ಸನ್ನದುದಾರರು ಗ್ರಾಹಕರಿಗೆ ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸಿಎಲ್-7, ಸಿಎಲ್-9 ಸನ್ನದುದಾರರು ಚಿಲ್ಲರೆ ವ್ಯಾಪಾರ ನಡೆಸುವಂತಿಲ್ಲ. ಆದರೆ ಜಿಲ್ಲಾದಂತ ರಾಜಾರೋಷವಾಗಿ ನಡೆಯುತ್ತಿದೆ. ಬಾರ್‌ ಹಾಗೂ ರೆಸ್ಟೋರೆಂಟ್ ಪರವಾನಗಿ ಪಡೆದುಕೊಂಡವರು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ರಾಜಾರೋಷವಾಗಿಯೇ ಚಿಲ್ಲರೆ ವ್ಯಾಪಾರ ಹಾಗೂ ಅನಧಿಕೃತ ಪಬ್ ನಡೆಸುತ್ತಿದ್ದಾರೆ. ಕೆಲವು ಬಾರ್‌ಗಳು ಬೆಳಗ್ಗೆಯೇ ತೆರೆಯುತ್ತವೆ. ಬಾರ್‌ ಮಾಲೀಕರು ನಿಯಮ ಉಲ್ಲಂಘಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಕಳಪೆ ಮಟ್ಟದ ಸಾರಾಯಿ ಪೂರೈಕೆ ಆಗುತ್ತಿರುವುದು ಮತದಾರರ ಆಮಿಷಕ್ಕೆ ಒಳಗಾಗಿ ಆರೋಗ್ಯ ಕೆಡಿಸಿಕೊಳ್ಳುವ ಸ್ಥಿತಿ ಇದ್ದರೂ ಅಬಕಾರಿ ಹಾಗೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕೂತಿದ್ದು ವಿಪರ್ಯಾಸ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ಮದ್ಯವನ್ನು ನಿಗದಿಗಿಂತ ಹೆಚ್ಚು ಬೆಲೆಗೆ ಮಾರುತ್ತಿದ್ದರೂ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಇಷ್ಟೊಂದು ಬೆಲೆನಾ ಎಂದು ಕೇಳಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವೆಂದರೆ ಬಿಡಿ, ದೂರು ಕೋಡೋದಾದ್ರೆ ಕೊಡಿ ಎಂದು ಮದ್ಯ ಮಾರಾಟಗಾರರು ಗ್ರಾಹಕರಿಗೆ ದಬಾಯಿಸುತ್ತಿದ್ದಾರೆ ಎನ್ನಲಾಗಿದೆ.

ಬಿಲ್ ಇಲ್ಲ: ಖರೀದಿ ಮದ್ಯಕ್ಕೆ ಯಾವುದೇ ಬಿಲ್ ಕೇಳಿದರೆ ಅಂಗಡಿ ಮಾಲೀಕರು ಬಿಲ್‌ಗಳನ್ನು ನೀಡುವುದಿಲ್ಲ. ಬಿಲ್ ಕೇಳಿದ ಗ್ರಾಹಕರಿಗೆ ಹಾರಿಕೆ ಉತ್ತರ ನೀಡಿ ಕಳುಹಿಸುತ್ತಾರೆ. ಸರಕಾರ ನಿಗದಿ ಮಾಡಿದ ಬೆಲೆಗಿಂತ ಹೆಚ್ಚುವರಿಯಾಗಿ ಮಾರಾಟ ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಂಗಡಿದಾರರು ಮದ್ಯದ ಮೇಲೆ ಜಿಎಸ್ಟಿ ಅಥವಾ ತೆರಿಗೆ ಹೆಚ್ಚಳವಾಗಿರುವ ಕಾರಣ ನೀಡುತ್ತಿದ್ದಾರೆ.ಇನ್ನೂ ಕೆಲವರು ಯಾವುದೇ ತೆರಿಗೆ ವಿವರ ಇಲ್ಲದ ಜಿಎಸ್ಟಿ ನಂಬರ ಇರುವ ಬಿಲ್ ಕೊಟ್ಟು ಕೈತೊಳಿದುಕೊಳ್ಳುತ್ತಾರೆ.
ಆದರೆ ಯಾವುದೇ ಉತ್ಪನ್ನಕ್ಕೆ ಎಮ್ ಆರ್ ಪಿ (ಗರಿಷ್ಟ ಚಿಲ್ಲರೆ ದರ)ಯೇ ಅಂತಿಮ ದರವಾಗಿದ್ದು,ಗ್ರಾಹಕರು ಅದಕ್ಕಿಂತ ಹೆಚ್ಚು ಪಾತಿಸಬೇಕಾಗಿಲ್ಲ.ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ)ಯು ಎಮ್ಆರ್ ಪಿ ಯಲ್ಲಿ ಅಡಕವಾಗಿರುತ್ತದೆ.

ಅವ್ಯವಸ್ಥೆ ಬಾರ್ ಗಳು: ಕೆಲ ಬಾರ್ ಆಂಡ್ ರೆಸ್ಟೋರೆಂಟ್ ಗಳಲ್ಲಿ ಸರಿಯಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.ಗುಣಮಟ್ಟದ ಆಹಾರವಿಲ್ಲ ಹಾಗೂ ಸುವ್ಯವಸ್ಥಿತ ಮಲಮೂತ್ರ ವಿಸರ್ಜನೆ ಕೊಠಡಿ ಇಲ್ಲ.ಹೀಗಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕಡೆ ಗಮನ ಕೊಡದೆ ಮಾಲಿಕರ ಜೊತೆ ಸೇರಿ ಗ್ರಾಹಕರ ಜೀವನದ ಮೇಲೆ ಚೆಲ್ಲಾಟ ಆಡುತ್ತಿದ್ದಾರೆ.

ತೆರಿಗೆ ಇಲಾಖೆಗೆ ಮಣ್ಣೆರಚುತ್ತಿರು ರೆಸ್ಟೋರೆಂಟ್ ಗಳು: ಸಣ್ಣ ಪುಟ್ಟ ಮಾರಾಟ ಮಳಿಗೆಗೆ ಮೇಲೆ ತೆರಿಗೆ ಅಧಿಕಾರಿಗಳು ಪದೇ ಪದೇ ದಾಳಿ ಮಾಡುತ್ತಾರೆ. ಆದರೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುವ ಕೆಲ ಬಾರ್ ಆಂಡ್ ರೆಸ್ಟೋರೆಂಟ್ ಗಳು ಗ್ರಾಹಕರಿಗೆ ಯಾವುದೇ ತೆರಿಗೆ ವಿವರ ಇಲ್ಲದ ಜಿಎಸ್ಟಿ ನಂಬರ ಇರುವ ಬಿಲ್ ಕೊಟ್ಟು ಕೈತೊಳಿದುಕೊಳ್ಳುತ್ತಿರುವುದು ಅಧಿಕಾರಿಗಳ ಗಮನಕ್ಕೆ ಇದ್ದರು ಕೈಕಟ್ಟಿ ಕುಳಿತಿರುವುದು ವಿಪರ್ಯಾಸ.

ಮದ್ಯದ ಅಂಗಡಿಗಳ ಮಾಲೀಕರು ಅಬಕಾರಿ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಮಾರಾಟದಲ್ಲಿ ತೊಡಗಿದ್ದಾರೆ.  ಅಕ್ರಮ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಬಕಾರಿ ಹಾಗೂ ತೆರಿಗೆ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ ವಹಿಸಿದ್ದಾರೆ”

ಹೆಸರು ಹೇಳಲು ಇಚ್ಛಿಸದ ಮದ್ಯಪ್ರೀಯ ಗ್ರಾಹಕ.

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";