ಬೆಳಗಾವಿ: ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ತನ್ನ ಆಡಳಿತಾವಧಿಯ ಕೊನೆಯಲ್ಲಿ ಅಸ್ತಿತ್ವದಲ್ಲಿರುವ ಮೀಸಲಾತಿ ನೀತಿಗೆ ಮಾಡಿದ ಬದಲಾವಣೆಯಿಂದಾಗಿ ಲಿಂಗಾಯತ ಹೃದಯಭೂಮಿ ಕಿತ್ತೂರು ಕರ್ನಾಟಕ ಪ್ರದೇಶದ ಕ್ಷೇತ್ರಗಳಲ್ಲಿ ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಪರಿಣಾಮ ಬೀರುವ ನಿರೀಕ್ಷೆಯಿದೆ.
ಕಿತ್ತೂರು ಕರ್ನಾಟಕ ಭಾಗವೂ ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ ಮತ್ತು ಗದಗ ಜಿಲ್ಲೆಗಳನ್ನು ಒಳಗೊಂಡಿದೆ. ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ರದ್ದುಪಡಿಸುವ ಮತ್ತು ಲಿಂಗಾಯತ ಮತ್ತು ಒಕ್ಕಲಿಗರ ನಡುವೆ ಮೀಸಲಾತಿ ಹಂಚಿಕೆಯ ವಿಷಯವು ಈ ಪ್ರದೇಶದ ಮತದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ರದ್ದಾದ 2ಬಿ ಕೋಟಾದಿಂದ ಲಿಂಗಾಯತರಿಗೆ ಶೇ.2ರಷ್ಟು ಮೀಸಲಾತಿಯನ್ನು ವಿಸ್ತರಿಸುವ ಮೂಲಕ ಆಡಳಿತಾರೂಢ ಬಿಜೆಪಿ ಲಿಂಗಾಯತರನ್ನು ಸಮಾಧಾನಪಡಿಸಲು ಪ್ರಯತ್ನ ನಡೆಸಿದ್ದರೂ, ಈ ಭಾಗದ ಬಹುಪಾಲು ಲಿಂಗಾಯತ ಮತದಾರರು ಕೇಸರಿ ಪಕ್ಷದ ವಿರುದ್ಧ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ.
2013ರ ಚುನಾವಣೆಯಲ್ಲಿ ಈ ಪ್ರದೇಶದ 56 ಸ್ಥಾನಗಳ ಪೈಕಿ ಕಾಂಗ್ರೆಸ್ 34 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. 2018ರಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಯಶಸ್ಸನ್ನು ಕಂಡಿತ್ತು, ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ನಂತರ ವಿರೋಧ ಪಕ್ಷದಲ್ಲಿ ಕುಳಿತಿತ್ತು.
ಮೀಸಲಾತಿಯ ವಿಷಯದ ಹೊರತಾಗಿ, ಕಾಂಗ್ರೆಸ್‌ನ 40% ಕಮಿಷನ್ ಆರೋಪ ಮತ್ತು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೇಲಿನ ಲೋಕಾಯುಕ್ತ ದಾಳಿಯಂತಹ ಇತರ ವಿವಾದಾತ್ಮಕ ವಿಷಯಗಳು ಬಿಜೆಪಿಯ ಭವಿಷ್ಯಕ್ಕೆ ಧಕ್ಕೆ ಉಂಟಾಗುವ ಸಾದ್ಯತೆ ಇದೆ.