ಬೆಳಗಾವಿ: ಜಿಲ್ಲೆಯ ಬಹುತೇಕ ವನವೆಲ್ಲಾ ಖಾನಾಪೂರ ತಾಲೂಕಿನಲ್ಲಿ ಹರಡಿಕೊಂಡಿದೆ.ಪಶ್ಚಿಮಘಟ್ಟದಲ್ಲಿ ಬರುವ ಈ ಸುಂದರ ಕಾಡು ಜೀವ ವೈವಿಧ್ಯತೆಯಿಂದ ಕೂಡಿದೆ. ತೇಗ,ಹಲಸು,ನೇರಳೆ,ಹೀಗೆ ಹಲವು ವನರಾಸಿ ಇರುವ ನಿತ್ಯಹರಿದ್ವರ್ಣವನ ಇದಾಗಿದೆ.
ಕರಡಿ,ಕಾಡುಕೋಣ,ಚಿರತೆ,ಜಿಂಕೆ, ಹೀಗೆ ಪ್ರಾಣಿ ವೈವಿಧ್ಯವನ್ನು ಹೊಂದಿರುವ ಈ ಕಾಡಿನಲ್ಲಿ ಇನ್ನೂ ಹಲವು ವಿಶ್ಮಯಗಳನ್ನು ಕಾಣಬಹುದಾಗಿದೆ. ಅನೇಕ ಸೂಕ್ಷö್ಮಜೀವಿಗಳು ಹಾಗೂ ಕೀಟವಲಯದ ಅನೇಕ ಪ್ರಭೇದಗಳು ಇಲ್ಲಿಯ ಪರಿಸರದ ಸಮತೋಲನದ ಕೊಂಡಿಯನ್ನು ಹೇಳುತ್ತವೆ.ಅಂತಹ ಕೆಲವು ಅಂಶಗಳಲ್ಲಿ ಈ ಚಿಟ್ಟೆ ಹಾಗೂ ಕಾಡು ಸುಮಗಳು ಸೇರಿಕೊಂಡಿವೆ.
ಇನ್ನೂ ಬೆಟ್ಟಗುಡ್ಡಗಳಿಂದ ಕೂಡಿದ ಈ ವನದಲ್ಲಿ ಅನೇಕ ನದಿ, ಝರಿ, ಜಲಪಾತಗಳನ್ನು ಹೊಂದಿ ತನ್ನ ಚೆಲವನ್ನು ಇಮ್ಮಡಿಸಿಗೊಳಸಿಕೊಂಡಿದೆ. ವನದ ಬಯಲಿನಲ್ಲಿ ಬಿಳಿ ಸುಮಗಳು ಹಸಿರು ನೆಲದಲ್ಲಿ ಹಿಮ ಬಿದ್ದಂತೆ ಭಾಸವಾಗುತ್ತದೆ.ಇನ್ನು ಗುಲಾಬಿ, ಹಳದಿ ಹೂವುಗಳಿಂದ ಪಕೃತಿಯೇ ಬಣ್ಣದ ರಂಗೋಲಿ ಬಿಡಿಸಿದಂತೆ ಚಿತ್ತಾರವನ್ನು ಬಿಡಿಸಿದಂತಿರುತ್ತದೆ. ಇನ್ನೂ ಅವುಗಳನ್ನು ಅರಿಸಿ ಬರುವ ಹಲವು ಜಾತಿಯ ಬಣ್ಣ ಬಣ್ಣದ ಚಿಟ್ಟೆಗಳು ಬಣ್ಣ ಓಕುಳಿ ಆಡಿದಂತೆ ಕಾಣುತ್ತದೆ.
ಹೆಮ್ಮಡಗಾ ಒಂದು ದಟ್ಟಾರಣ್ಯ ಪ್ರದೇಶವಾಗಿದ್ದು. ಇಲ್ಲಿ ಬಾವಲಿ ಗುಹೆಯನ್ನು ಕಾಣಬಹುದಾಗಿದೆ.ನಾವು ಸಾಮಾನ್ಯವಾಗಿ ಒಂದೆರಡು ವಿಧಧ ಚಿಟ್ಟೆಗಳನ್ನು ಕಂಡರೆ ಇಲ್ಲಿ ನೂರಾರು ಪ್ರಭೇದಗಳನ್ನು ಕಾಣಬಹುದು.
ಕಾಮನ್ ಜಿಝಿಬಲ್ ,ಕಾಮನ್ ಟೈಗರ್,ಪಿಕಾಕ್ ಪ್ಯಾನ್ಸಿ,ಸ್ಮಾಲ್ ಗ್ರಾಸ್ ಎಲ್ಲೋ,ಇಂತಹ ಹೆಸರಿನ ಚಿಟ್ಟೆಗಳು ಬಣ್ಣ ಬಣ್ಣದ ಬಟ್ಟೆ ತೊಟ್ಟು ಗಿಡದಿಂದ ಗಿಡಕ್ಕೆ ಹಾರುತ್ತಾ ಪ್ಯಾಷನ್ ಶೋ ನಡೆಸುತ್ತವೆ.ಜೀವವೈವಿಧ್ಯತೆಯನ್ನು ಹೊಂದಿದ ಈ ಕಾಡಿನಲ್ಲಿ ಹಲವು ರೀತಿಯ ಹಾವು, ಕಪ್ಪೆಗಳನ್ನು ಕಾಣಬಹುದಾಗಿದೆ.ಎತ್ತರದ ಬೆಟ್ಟಗುಡ್ಡಗಳಲ್ಲಿ ಅಲ್ಲಲ್ಲಿ ಕಂಡು ಬರುವ ಜಲಪಾತಗಳು ಹರಿಯುವುದು ಸಂಗೀತದಂತೆ ಭಾಸವಾಗುತ್ತದೆ.
ನಿಸರ್ಗದ ನೆತ್ತಿಯ ಮೇಲೆ ನಿಂತು ಕೆಳಗಡೆ ಕಂಡುಬರುವ ಹಸಿರನ್ನು ನೋಡಿದಾಗ ನಮ್ಮ ಮನಸ್ಸು ಉಲ್ಲಾಸಿತವಾಗುವದು.ಇಂತಹ ಸುಂದರ ಸೃಷ್ಟಿಯಲ್ಲಿ ಅನೇಕ ಜೀವಿಗಳು ತಮ್ಮದೆ ಆದ ಕೊಡುಗೆಯನ್ನು ನೀಡಿ ನಿತ್ಯ ನಮ್ಮನ್ನು ಸಲುಹುತ್ತಿವೆ.ಅಂತಹ ವನಗಳಿಗೆ ನಾವು ಎಷ್ಟು ಕೃತಜ್ಞರಾದರೂ ಕಡಿಮೆಯೇ..
ಚಿತ್ರ ಲೇಖನ : ಸಂತೋಷ ಸಂಬಣ್ಣವರ