ಎಂ.ಕೆ ಹುಬ್ಬಳ್ಳಿ :ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದ ಜನತೆಯು ಹಲವಾರು ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ. ಪಟ್ಟಣದಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿರುವುದು, ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಮುಖ್ಯ ರಸ್ತೆ ಹದಗೆಟ್ಟಿರುವುದು, ಕುಡಿಯುವ ನೀರಿನ ಸಮಸ್ಯೆ, 3 ತಿಂಗಳಿಂದ ಕುಡಿಯುವ ನೀರಿನ ಘಟಕಗಳು ಬಂದ್ ಆಗಿರುವುದು, ಪಟ್ಟಣ ಪಂಚಾಯಿತಿಗೆ ಸುಸಜ್ಜಿತವಾದ ಕಟ್ಟಡ ಇಲ್ಲದೇ ಇರುವುದು, ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳೇ ಪಟ್ಟಣದ ಅಭಿವೃದ್ಧಿಗೆ ಅಡ್ಡಗಾಲು ಆಗಿವೆ ಎಂದರೆ ತಪ್ಪಾಗಲಾರದು.
ಇನ್ನೂ ಎಂ.ಕೆ ಹುಬ್ಬಳ್ಳಿ ಪಟ್ಟಣವು ಮೇಲ್ದರ್ಜೆಗೇರಿ 5 ವರ್ಷದ ಆಡಳಿತ ಅವಧಿಯನ್ನು ಮುಗಿಸಿ ಇನ್ನೇನೂ ಕೆಲವೇ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಂತರ 2 ನೇ ಅವಧಿಯನ್ನು ಪ್ರಾರಂಭಿಸಲಿದೆ. ಪಟ್ಟಣ ಪಂಚಾಯಿತಿ ಆಡಳಿತ ಆದರೂ ಅದ್ಯಾಕೋ ಏನೋ ಗೊತ್ತಿಲ್ಲಾ ಪಟ್ಟಣದ ಬಹುತೇಕ ವಾರ್ಡಗಳು ಮಾತ್ರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಆಗದೇ ಇರುವುದು ಹಾಗೂ ದಿನ ನಿತ್ಯ ಹಲವಾರು ಸಮಸ್ಯೆಗಳಿಂದ ಪಟ್ಟಣದ ನಿವಾಸಿಗಳು ತೊಂದರೆಗೆ ಒಳಗಾಗುತ್ತಿದ್ದಾರೆ.
ಪಟ್ಟಣ ಪಂಚಾಯಿತಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಂದರೂ ಅದರಿಂದ ಅಭಿವೃದ್ಧಿ ಕಾರ್ಯ ಜನರ ನಿರೀಕ್ಷೆಯಂತೆ ಆಗದೆ ಇರುವುದು ವಿಪರ್ಯಾಸ. ಕೆಲವು ಅಭಿವೃದ್ಧಿ ಕಾಮಗಾರಿಗಳು ನಡೆದರು ಕೂಡ ಕಳಪೆ ಆಗಿದ್ದು,ಜೊತೆಗೆ ಸರ್ಕಾರದ ಹಣ ದುರ್ಬಳಕೆ ಆಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣ ಪಂಚಾಯಿತಿಗೆ ಖಾಯಂ ಇಂಜಿನಿಯರ್ ನೇಮಕ ಅವಶ್ಯವಾಗಿದೆ. ಅನೇಕ ಕೆಲಸಗಳಿಗೆ ಇಂಜಿನಿಯರ್ ಅವಶ್ಯವಾಗಿದ್ದರೂ ವಾರದಲ್ಲಿ ಎರಡು ದಿನ ಬರುವ ಇಂಜಿನಿಯರ್ ಗಾಗಿ ಕಾದುಕುಳಿತು ಕೆಲಸ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಇದರಿಂದ ಜನರಿಗೆ ಆಗುತ್ತಿರುವ ತೊಂದರೆಯನ್ನು ಮೇಲಾಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುತ್ತಿಲ್ಲಾ.
ಇನ್ನೂ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿದರೆ ಸರಿಯಾಗಿ ಸ್ಫಂದಿಸದೆ ಇಂಜಿನಿಯರ್ ಮೇಲೆ ಹಾಕಿ ಜಾರಿಕೊಳ್ಳುತ್ತಾರಂತೆ.ಇದರಿಂದ ಅನುದಾನ ಬಳಕೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದು ಜನ ಸಾಮಾನ್ಯರಿಗೆ ತಲುಪಿಸಲು ವಿಫಲರಾಗಿರುವುದರಿಂದ ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.
ನೂತನ ಪಟ್ಟಣ ಪಂಚಾಯಿತಿ ಸದಸ್ಯರು ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಬಹುದೆ ಎಂಬುದನ್ನು ಕಾದುನೋಡಬೇಕಿದೆ