ಉಪಸಮರ : ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ಸಜ್ಜಾಗಿದೆ

ಉಮೇಶ ಗೌರಿ (ಯರಡಾಲ)

 

ಬೆಂಗಳೂರು (ಅ08):ಸಿಂದಗಿಯ ಜೆಡಿಎಸ್‌ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಹಾಗೂ ಹಾನಗಲ್‌ನ ಬಿಜೆಪಿ ಶಾಸಕರಾಗಿದ್ದ ಸಿ.ಎಂ.ಉದಾಸಿ ಅವರ ಅಕಾಲಿಕ ನಿಧನದ ಹಿನ್ನೆಲೆ ಇದೀಗ ಉಪಚುನಾವಣೆ ಎದುರಾಗಿದೆ. ಈ ತಿಂಗಳ 11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್‌ ಪಡೆಯಲು 13 ಕೊನೆಯ ದಿನವಾಗಿದೆ. ಈ ತಿಂಗಳ 30ರಂದು ಮತದಾನ ನಡೆಯಲಿದೆ. ಫಲಿತಾಂಶ ನ.2ರಂದು ಹೊರಬೀಳಲಿದೆ

ಬಿ.ಎಸ್‌.ಯಡಿಯೂರಪ್ಪ  ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿ ಬಸವರಾಜ ಬೊಮ್ಮಾಯಿ ಸ್ಥಾನ ಅಲಂಕರಿಸಿದ ಬಳಿಕ ಎದುರಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ಸಜ್ಜಾಗಿದೆ.

ಉಭಯ ಕ್ಷೇತ್ರಗಳಿಗೆ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಈಗಾಗಲೇ ಹಲವರು ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವುದರಿಂದ ಇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಆಡಳಿತಾರೂಢ ಬಿಜೆಪಿ ಗುರುವಾರ ತನ್ನ ಅಭ್ಯರ್ಥಿಗಳ ಪಟ್ಟಿಬಿಡುಗಡೆಗೊಳಿಸಿದೆ.

ಬಿಜೆಪಿಯಿಂದ ಹಾನಗಲ್‌ ಕ್ಷೇತ್ರಕ್ಕೆ ಹಾವೇರಿಯ ಮಾಜಿ ಶಾಸಕ ಶಿವರಾಜ್‌ ಸಜ್ಜನರ್‌ ಅವರನ್ನು ಅಚ್ಚರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಸಿಂದಗಿ ಕ್ಷೇತ್ರದಿಂದ ಮಾಜಿ ಶಾಸಕ ರಮೇಶ್‌ ಭೂಸನೂರು ಅವರಿಗೆ ಟಿಕೆಟ್‌ ನೀಡಿದೆ.
ಕಾಂಗ್ರೆಸ್‌ ಪಕ್ಷ ಸಿಂದಗಿಯಿಂದ ಅಶೋಕ್‌ ಮನಗೂಳಿ ಮತ್ತು ಹಾನಗಲ್‌ನಿಂದ ಶ್ರೀನಿವಾಸ್‌ ಮಾನೆ ಅವರನ್ನು ಕಣಕ್ಕಿಳಿಸಿದೆ.
ಇನ್ನು ಜೆಡಿಎಸ್ ಪಕ್ಷ ಉಭಯ ಕ್ಷೇತ್ರಗಳಲ್ಲೂ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿ, ಸಿಂದಗಿಯಿಂದ ನಾಜಿಯಾ ಶಕೀಲಾ ಅಂಗಡಿ ಹಾಗೂ ಹಾನಗಲದಿಂದ ನಿಯಾಜ್‌ ಶೇಖ್‌ ಅವರನ್ನು ಅಖಾಡಕ್ಕೆ ಇಳಿಸಿದೆ.

ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆ ಚುನಾವಣೆ:

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ನಂತರ ಈ ಎರಡು ಕ್ಷೇತ್ರಗಳ ಉಪಚುನಾವಣೆ ಎದುರಾಗಿರುವುದರಿಂದ ಅವರಿಗೆ ಇದು ಸಹಜವಾಗಿಯೇ ಪ್ರತಿಷ್ಠೆ ಪ್ರಶ್ನೆಯಾಗಿದೆ.
ಅದರಲ್ಲೂ ಹಾನಗಲ್‌ ವಿಧಾನಸಭಾ ಕ್ಷೇತ್ರ ಬೊಮ್ಮಾಯಿ ಯವರ ತವರು ಜಿಲ್ಲೆಗೆ ಸೇರಿದ್ದು. ಇಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಸಿ.ಎಂ.ಉದಾಸಿ ಅವರ ಅಕಾಲಿಕ ನಿಧನದಿಂದ ಚುನಾವಣೆ ಎದುರಾಗಿದೆ. ಹೀಗಾಗಿ, ಈ ಕ್ಷೇತ್ರವನ್ನು ಬಿಜೆಪಿಗೇ ಉಳಿಸಿಕೊಳ್ಳುವುದು ಬೊಮ್ಮಾಯಿ ಅವರ ಪಾಲಿಗೆ ಮಹತ್ವವಾದದ್ದು.

ಉದಾಸಿ ಕುಟುಂಬಕ್ಕೆ ಸಿಗದ ಟಿಕೆಟ್
ಹಾನಗಲ್‌ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ನಿಧನದಿಂದ ಉಪ ಚುನಾವಣೆ ಎದುರಾಗಿದ್ದು, ಅವರ ಸೊಸೆ ಹಾಗೂ ಹಾಲಿ ಸಂಸದ ಶಿವಕುಮಾರ್‌ ಉದಾಸಿ ಪತ್ನಿ ರೇವತಿ ಅವರಿಗೆ ಟಿಕೆಟ್‌ ನೀಡಬೇಕೆಂದು ರಾಜ್ಯ ಬಿಜೆಪಿ ನಾಯಕರು ಕೋರಿದ್ದರು. ಆದರೆ ಹೈಕಮಾಂಡ್‌ ಅದನ್ನು ತಿರಸ್ಕರಿಸಿ ಶಿವರಾಜ್‌ ಸಜ್ಜನರ್‌ಗೆ ಟಿಕೆಟ್‌ ನೀಡಿದೆ.

ಉಭಯ ಕ್ಷೇತ್ರಗಳಿಗೆ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಅಂತಿಮ.

ಸಿಂದಗಿ ಕ್ಷೇತ್ರ

ಬಿಜೆಪಿ ರಮೇಶ್‌ ಭೂಸನೂರು

ಕಾಂಗ್ರೆಸ್‌ ಅಶೋಕ್‌ ಮನಗೂಳಿ

ಜೆಡಿಎಸ್‌ ನಾಜಿಯಾ ಶಕೀಲಾ ಅಂಗಡಿ

ಹಾನಗಲ್‌ ಕ್ಷೇತ್ರ

ಬಿಜೆಪಿ ಶಿವರಾಜ್‌ ಸಜ್ಜನರ್‌

ಕಾಂಗ್ರೆಸ್‌ ಶ್ರೀನಿವಾಸ್‌ ಮಾನೆ

ಜೆಡಿಎಸ್‌ ನಿಯಾಜ್‌ ಶೇಖ್‌

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";