ಪದೇಪದೆ ಹೀಗೇ ಮಾಡುತ್ತೀಯಾ. ಒಮ್ಮೆ ಹೇಳಿದರೆ ನೀನು ಅರ್ಥವನ್ನೇ ಮಾಡಿಕೊಳ್ಳುವುದಿಲ್ಲ ಎಂದು ಟೀಚರಮ್ಮ ಗಲ್ಲ ಉಬ್ಬಿಸಿಕೊಂಡು ಕುಳಿತಿದ್ದಾರೆ. ಆಗ ಈ ಪುಟ್ಟಣ್ಣ ಏನು ಮಾಡುತ್ತಾನೆ? ಮುದ್ದಾದ ವಿಡಿಯೋ ನೋಡಿ.
ಆಗಷ್ಟೇ ಶಾಲೆಗೆ ಹೋಗಲು ಶುರು ಮಾಡಿದ ಪುಟ್ಟಮಕ್ಕಳಿಗೆ ಶಾಲೆಯಲ್ಲಿರುವ ಟೀಚರ್ ಅಮ್ಮನಂತೆಯೇ ಕಾಣುವುದು ಸಹಜ. ಸಾಕಷ್ಟು ಸಲ ಮನೆಗೆ ಬಂದು ಅಮ್ಮನಿಗೆ ಟೀಚರ್ ಎನ್ನುವುದು, ಶಾಲೆಗೆ ಹೋಗಿ ಟೀಚರ್ಗೆ ಅಮ್ಮನೆಂದು ಹೇಳುವುದನ್ನು ನೋಡಿರುತ್ತೀರಿ, ಅನುಭವಿಸಿರುತ್ತೀರಿ ಅಥವಾ ಕೇಳಿರುತ್ತೀರಿ. ಇದೊಂಥರಾ ಸ್ಥಿತ್ಯಂತರದ ಅವಧಿ. ಮನೆಯನ್ನು ಮನೆಯಲ್ಲಿಯೇ ಬಿಟ್ಟು, ಶಾಲೆಯನ್ನು ಶಾಲೆಯಲ್ಲೇ ಬಿಡಲಾಗದಂಥ ಪರಿಸ್ಥಿತಿ. ಹಾಗಾಗಿ ಆಗಾಗ ಮಕ್ಕಳ ವರ್ತನೆಯಲ್ಲಿ ಸಂದರ್ಭಕ್ಕನುಸಾರವಾಗಿ ಇಂಥ ಸಿಹಿಯಾದ ಗೊಂದಲ ವ್ಯಕ್ತವಾಗುತ್ತಿರುತ್ತದೆ. ಇದು ಮಗುವಿನ ಮುಗ್ಧತೆಯಲ್ಲದೆ ಬೇರೇನೂ ಅಲ್ಲ. ಹಾಗೆಯೇ ತನ್ನ ತಾಯಿತಂದೆಯಂತೆಯೇ ಶಿಕ್ಷಕರೂ ಕೂಡ ಎಂಬ ವಿಶ್ವಾಸದ ನೋಟ ಮತ್ತು ನಿರೀಕ್ಷೆಯೂ. ಈ ವಿಡಿಯೋ ಗಮನಿಸಿದರೆ ಸಾಕು ಈ ಬಗ್ಗೆ ನಿಮಗೆ ಸ್ಪಷ್ಟತೆ ಬರುತ್ತದೆ.
ಪಾಪ ಅಲ್ವಾ? ಈ ಪುಟ್ಟಣ್ಣ ಏನೋ ತಪ್ಪುಮಾಡಿದ್ದಾನೆ. ಟೀಚರ್ಗೆ ಕೋಪ ಬಂದಿದೆ. ಇನ್ನೊಮ್ಮೆ ಹೀಗೆಲ್ಲ ಮಾಡಲ್ಲ ಕ್ಷಮಿಸಿ ಎಂದು ಕೇಳಿಕೊಂಡರೂ ಟೀಚರ್ ಮಾತ್ರ ಪುರಿಯಂತೆ ಗಲ್ಲ ಉಬ್ಬಿಸಿಕೊಂಡು ಕುಳಿತಿದ್ದಾರೆ. ಅಸಹಾಯಕನಾದ ಪುಟ್ಟಣ್ಣನಿಗೆ ಕಣ್ಣುಗಳು ಉಕ್ಕುತ್ತಿವೆ. ಎದುರಿಗಿರುವವರು ಟೀಚರೋ ಅಮ್ಮನೋ ಎಂಬ ಗೊಂದಲ ಉಂಟಾಗಿರಲು ಸಾಕು. ಏನು ಮಾಡುವುದು? ನನ್ನನ್ನು ಟೀಚರ್ ಕ್ಷಮಿಸದಿದ್ದರೆ ಎಂಬ ಆತಂಕ ಮತ್ತೆ ಮತ್ತೆ ಕ್ಷಮೆ ಕೇಳುವ ಹಾಗೆ ಮಾಡುತ್ತಿದೆ. ಏನೂ ತೋಚದೆ, ಟೀಚರ್ ಕಣ್ಣಲ್ಲಿ ಕಣ್ಣಿಟ್ಟು ಅವರನ್ನು ತಬ್ಬಿಕೊಂಡು ಗಲ್ಲಕ್ಕೆ ಮುತ್ತು ಕೊಟ್ಟು ಕ್ಷಮೆ ಕೇಳಿಬಿಟ್ಟಿದ್ದಾನೆ!ಮನಸೋಲದಿದ್ದೀತೇ ಟೀಚರ್ಗೆ?
10,60,000.ಹೆಚ್ಚು ನೆಟ್ಟಿಗರು ಈ ವಿಡಿಯೋ ವೀಕ್ಷಿಸಿದ್ದಾರೆ. ಇನ್ನು ಪ್ರತಿಕ್ರಿಯೆಗಳು, ಮನಸಿನಂತೆ ಮಾದೇವ! ‘ರಣಬೀರ್ ಕಪೂರ್ ಕಾ ಲಡಕಾ’ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಬಡಾ ಖಿಲಾಡಿ, ಬನೇಗಾ ಆಗೇ ಜಾಕೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.
ಕೆಲವರು, ‘ಇವನು ಅಮ್ಮಾ ಅನ್ನುತ್ತಿದ್ದಾನೆ ಮೇಡಮ್ ಅನ್ನುತ್ತಿಲ್ಲ’ ಎಂದಿದ್ದಾರೆ. ‘ಶಿಕ್ಷಕಿಯೂ ತಾಯಿಯ ಸಮಾನ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಇಷ್ಟು ಚಿಕ್ಕ ಮಕ್ಕಳಿಗೆ ಇಂಥಾ ಶಿಕ್ಷಕಿಯರೇ ಸಿಗಬೇಕು’ ಎಂದು ಆಪ್ತವಾಗಿ ಹೇಳಿದ್ದಾರೆ ಮಗದೊಬ್ಬರು. ‘ಅಯ್ಯೋ ನಮ್ಮ ಟೀಚರುಗಳೆಲ್ಲ ಸರೀ ಶಿಕ್ಷೆ ಕೊಡುತ್ತಿದ್ದರು’ ಎಂದು ಶಿಕ್ಷೆಯ ಪರಿಯನ್ನು ಸಾಕಷ್ಟು ಜನ ವಿವರಿಸಿದ್ದಾರೆ.
ಅಮ್ಮನ ತೋಳಿನಿಂದ ಬಂದ ಮಗುವಿಗೆ ಶಾಲೆಯಲ್ಲಿ ಶಿಕ್ಷಕರೇ ಎಲ್ಲ ಅಲ್ಲವೆ? ಪ್ರೀತಿಯಿಂದ ತಿದ್ದಿದಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅಷ್ಟೊಂದು ಮಕ್ಕಳನ್ನು ನೋಡಿಕೊಳ್ಳುವಾಗ ಟೀಚರ್ಗೂ ಸುಸ್ತಾಗಿಬಿಡುತ್ತದೆ. ಆಗ ಇಂಥ ಸಾತ್ವಿಕ ಕೋಪವನ್ನು ಪ್ರಕಟಿಸುವುದು ಅಥವಾ ನಟಿಸುವುದು ಅನಿವಾರ್ಯ.