ಸೋಮೇಶ್ವರ ಶುಗರ್ ಫ್ಯಾಕ್ಟರಿ ಎಲೆಕ್ಷನ್; ಯುವ ನಾಯಕ ಪಿಕೆಗೆ ಒಲಿಯಲಿದೆಯೇ ಲಕ್…?

ಉಮೇಶ ಗೌರಿ (ಯರಡಾಲ)

ವರದಿ:ಉಮೇಶ ಗೌರಿ (ಯರಡಾಲ)

ಬೆಂಗಳೂರಿಗೆ ಡಿಕೆ-ಕಿತ್ತೂರಿಗೆ ಪಿಕೆ! ರೈತ ಪರ ಕನಸು ಹೊತ್ತ ಉತ್ಸಾಹಿ ಮುಖಂಡ ಪುಂಡಲೀಕ!

ಬೈಲಹೊಂಗಲದ ʼಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆʼ ಆಡಳಿತ ಮಂಡಳಿಗೆ ರವಿವಾರ ಸೆಪ್ಟೆಂಬರ್ 10 ರಂದು (ನಾಳೆಯೇ) ಚುನಾವಣೆ ನಡೆಯಲಿದೆ. ಅಖಾಡದಲ್ಲಿ ಪ್ರಮುಖವಾಗಿ ಮೂರು ಪೆನೆಲ್ ಅಧಿಕಾರದ ಗದ್ದುಗೆ ಏರಲು ಹಣಾಹಣಿಯಲ್ಲಿ ಸ್ಪರ್ಧೆಗೆ ಧುಮುಕಿವೆ!

ʼಕಿಸಾನ್ ಸಹಕಾರʼ ಪೆನೆಲ್ ನೊಂದಿಗೆ ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ʼಪುಂಡಲೀಕ ಖಂಡು ನೀರಲಕಟ್ಟಿʼ (ಪಿಕೆ) ಸಹಕಾರಿ ರಂಗದಲ್ಲಿ ರೈತ ಸೇವೆಯ ಕನಸು ಹೊತ್ತಿದ್ದಾರೆ. ಎಂ.ಎ ಪದವೀಧರರಾದ ʼಪಿಕೆʼ ರೈತರ ಸಮಸ್ಯೆಗಳು, ಕೃಷಿ ಮತ್ತು ಸಹಕಾರ ಕ್ಷೇತ್ರದ ಪ್ರಸ್ತುತ ಸವಾಲುಗಳ ಬಗ್ಗೆ ಅಪಾರ ಆಸಕ್ತಿ ಮತ್ತು ವಿಸ್ತಾರ ಜ್ಞಾನ ಹೊಂದಿದ್ದು ಹೊಸದೊಂದು ಆಶಯ ಹೊತ್ತು ರೈತರ ಬೆನ್ನಿಗೆ ನಿಂತಿದ್ದಾರೆ.

ನಲವತ್ತರ ಪ್ರಾಯದ ಪಿ.ಕೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದು ಅನೇಕ ರೈತ ಪರ ಹೋರಾಟಗಳಲ್ಲಿ ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ರೈತರ ಹಿತಚಿಂತಕರಾಗಿ ಸ್ವತಃ ರೈತರಾಗಿ ಸರ್ಕಾರದ ಗಮನ ಸೆಳೆದು‌ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿ‌ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕ ಅದರಲ್ಲೂ ಬೈಲಹೊಂಗಲ, ಕಿತ್ತೂರು ಭಾಗದಲ್ಲಿ ಪುಂಡಲೀಕ ಅವರ ಅನೇಕ ಸಮಾಜಪರ ಕೆಲಸಗಳ ಮೂಲಕ ಕಿತ್ತೂರು ನಾಡಿನ ‘ಪಿಕೆʼ ಎಂದೇ ಗುರುತಿಸಿಕೊಂಡಿದ್ದಾರೆ!

ಕಾರ್ಖಾನೆ ರೈತರ ಆಸ್ತಿ! ಆಡಳಿತ ಮಂಡಳಿಯ ಅಧ್ವಾನದಿಂದ ಸೊರಗಿದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಬಲವಂತರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಬೇಕು, ರೈತರು ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಕನಸು ಹೊತ್ತು ಚುನಾವಣಾ ಕಣಕ್ಕೆ ಧುಮುಕಿದ ʼಪುಂಡಲೀಕ ನೀರಲಕಟ್ಟಿʼಗೆ ಈ ಬಾರಿ ವಿಜಯಲಕ್ಷ್ಮಿ ಒಲಿಯುವ ಬಗ್ಗೆ ರೈತ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕೌಟುಂಬಿಕ ಹಿನ್ನೆಲೆ:ಮೂಲತ: ಕಾದರವಳ್ಳಿ ಗ್ರಾಮದ ಖಂಡು ಹಾಗೂ ರುಕ್ಮಾಯಿ ದಂಪತಿಗಳ ಸುಪುತ್ರರಾದ ಪಿ.ಕೆ ತೀರ ಬಡತನದಲ್ಲಿ ಜನಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದಿದ್ದು ಧಾರವಾಡದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯದರ್ಶಿಯಾಗಿ ರಾಜಕೀಯ ಜೀವನ ಆರಂಭಿಸಿದ ಪುಂಡಲೀಕ ನೀರಲಕಟ್ಟಿ ಇದೀಗ ಕಿತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮುಂಚೂಣಿ ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ. ರಾಜ್ಯಶಾಸ್ತ್ರ ಹಾಗೂ ಸಮಾಜ ಸೇವಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಇದೀಗ ಕಾನೂನು ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಸಮಾಜ ಸೇವೆಗೆ ಸದಾ ಸೈ:
ಪ್ರಕೃತಿ ವಿಕೋಪ, ನೆರೆ ಹಾವಳಿ ಹಾಗೂ ಬರ ಪರಿಸ್ಥಿಯ ಸಂದರ್ಭದಲ್ಲಿ ಸಮಾಜದ ನಿರ್ಗತಿಕರಿಗೆ ಸಂಘಟನೆಯ ಮೂಲಕ ಅಗತ್ಯ ಆಹಾರ ಅರಿವೆ ನೀಡುತ್ತ ನೊಂದ ಜನತೆಯ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.

ರಾಜಕೀಯದಲ್ಲಿ ಮುಂಚೂಣಿ:
ಗೋವಾ ರಾಜ್ಯದ ಪಥೋರ್ಡಾ ಮತ್ತು ಕುಂಬರ್ ಜುವಾ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣಾ ವೀಕ್ಷಕರಾಗಿ ಉತ್ತರ ಕನ್ನಡ ಜಿಲ್ಲೆ ಲೋಕಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ, ‘ಪ್ರಾಜೆಕ್ಟ್ ಶಕ್ತಿ’ ಅಲ್ಲದೇ ‘ಮನೆ ಮನೆ ಕಾಂಗ್ರೆಸ್’ ಹಾಗೂ ‘ಒಂದು ಪುಟ ಒಂದು ಕುಟುಂಬ’ ದಡಿ ಪ್ರತಿಶತ ೧೦೦% ನೋಂದಾವಣೆ ಮಾಡಲು ಶ್ರಮಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳ ಚುನಾವಣಾ ವೀಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಮ್ಮದೇ ಸ್ವಂತ ‘ಪಿಕೆ’ ಫೌಂಡೇಶನ್ ಸ್ಥಾಪಿಸಿ ಶಾಲಾ ಮಕ್ಕಳಿಗೆ ಶಾಲಾಬ್ಯಾಗ್, ನೋಟ್ ಬುಕ್ಸ್ ಪೆನ್ಸಿಲ್ ಸೇರಿದಂತೆ ಅಗತ್ಯ ಶಾಲಾ ಸಲಕರಣೆ ನೀಡಿದ್ದಾರೆ.

ಕೊರೋನದಂತ ಇಂದಿನ ಸಂಕಷ್ಟದ ತುರ್ತು ಸಂದರ್ಭದಲ್ಲಿ ನಿರ್ಗತಿಕ ಬಡವರಿಗೆ ಆಹಾರ ಸಾಮಗ್ರಿ ನೀಡುವುದು, ಸಂಚಾರ ತೊಂದರೆಯಿಂದ ಬಳಲಿದ ಕೂಲಿ ಕಾರ್ಮಿಕರಿಗೆ ವಾಹನ ಸೌಲಭ್ಯ ಕಲ್ಪಿಸಿ ಅವರವರ ಗೂಡಿಗೆ ಸೇರಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ. ಇದೆ ಸಂದರ್ಭದಲ್ಲಿ ದೂರದ ವಿಜಯಪುರ ಜಿಲ್ಲೆಯಿಂದ ಕೂಲಿ ಕಾರ್ಮಿಕರ ಮಗು ಅನಾರೋಗ್ಯದಿಂದ ಮೃತಪಟ್ಟ ಮಗುವಿನ ಶವವನ್ನು ಅವರ ಸ್ವಂತ ಊರಿಗೆ ಸಾಗಿಸಲು ನೆರವಾಗಿದ್ದಾರೆ. ಅದ್ಬುತ ಸಂಘಟನಾ ಶಕ್ತಿ ಹೊಂದಿದ ಇವರು ಕಿತ್ತೂರು, ಖಾನಾಪೂರ, ಬೈಲಹೊಂಗಲ, ಧಾರವಾಡ ಗ್ರಾಮೀಣ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳ ಮೂಲಕ ಹಲವಾರು ಸಮಾಜ ಪರ ಕಾರ್ಯಗಳಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಡಿದ್ದಾರೆ. ಮಾಜಿ ಸಚಿವ ದಿವಂಗತ ಡಿ.ಬಿ.ಇನಾಮದಾರ, ವಿನಯ ಕುಲಕರ್ಣಿ, ಶಾಸಕಿಯರಾದ ಅಂಜಲಿ ನಿಂಬಾಳ್ಕರ, ಲಕ್ಷೀ ಹೆಬ್ಬಾಳಕರ ಸೇರಿದಂತೆ ಹಲವು ಹಿರಿಯ ರಾಜಕೀಯ ನಾಯಕರೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದಾರೆ.

ಇದೀಗ ಸಹಕಾರ ರಂಗದಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿದ ಇವರು ರೈತ ಪೆನೆಲ್ ನಲ್ಲಿ ಬೈಲಹೊಂಗಲ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಇವರಂತಹ ಉತ್ಸಾಹಿ ಯುವ ವಿದ್ಯಾವಂತ ನಾಯಕರು ಸಹಕಾರ ರಂಗದಲ್ಲಿ ಸೇವೆ ಸಲ್ಲಿಸಲು ರೈತ ಬಂಧುಗಳು ಅಮೂಲ್ಯವಾದ ಮತ ನೀಡಿ ಒಂದು ಬಾರಿ ಕಾರ್ಖಾನೆಯ ಹಾಗೂ ರೈತರ ಪರ ಸೇವೆ ಸಲ್ಲಿಸಲು ಅವಕಾಶ ನೀಡುವುದು ಸೂಕ್ತ ಅನ್ನೋ ಅಭಿಪ್ರಾಯ ಎಲ್ಲೆಡೆಯೂ ಕೇಳಿ ಬರುತ್ತಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";