ಸ್ನೇಹಜೀವಿ ಶಿಕ್ಷಕರ ಬಳಗದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ: ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಎನ್.ಆರ್.ಠಕ್ಕಾಯಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಕೋಳಿ ಅವರನ್ನು ಇತ್ತೀಚೆಗೆ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯಮಾರ್ಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸ್ನೇಹಜೀವಿ ಶಿಕ್ಷಕರ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕರು, ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಿಶ್ವನಾಥ ಪಾಟೀಲ ಮಾತನಾಡಿ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆ ಹಾಗೂ ತಾಲೂಕಿನಲ್ಲಿ ಉತ್ತಮ ಕೆಲಸಗಳು ನಡೆಯಲಿ ಎಂದು ಶುಭ ಹಾರೈಸಿದರು. ಕನ್ನಡದ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಕಸಾಪ ನೂತನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ವಿಶಿಷ್ಟ ಕಾರ್ಯಕ್ರಮಗಳನ್ನು ಪರಿಷತ್ತಿನಿಂದ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಾದ ಮಲ್ಲಿಕಾರ್ಜುನ ಕೋಳಿ ಮಾತನಾಡಿ ಜಿಲ್ಲೆಯಲ್ಲಿ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ಕನ್ನಡಾಭಿಮಾನ ಹೆಚ್ಚಿಸುವ ಹಾಗೂ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಹೂಲಿಕೇರಿ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಅಶೋಕ ಶೀಲವಂತರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಶಿಕ್ಷಣ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟರು. ಸಾಹಿತ್ಯ ಪರಿಷತ್ತಿಗೆ ಕ್ರಿಯಾಶೀಲ ಶಿಕ್ಷಕರು ನೇಮಕಗೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ ಮಾತನಾಡಿ ಎಲ್ಲ ಕನ್ನಡ ಮನಸ್ಸುಗಳು ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದರ ಮೂಲಕ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಸಾಧನೆಗಳು ಜನಸಾಮಾನ್ಯರನ್ನು ತಲುಪುವಂತೆ ಮಾಡುವಲ್ಲಿ ಎಲ್ಲ ಪದಾಧಿಕಾರಿಗಳು ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇಂಚಲದ ಡಿ.ಇಡಿ ಕಾಲೇಜಿನ ಪ್ರಾಚಾರ್ಯರಾದ ಮಲ್ಲೇಶ ಯರಗುದ್ದಿ, ಒಕ್ಕುಂದದ ಮರಡಿಬಸವೇಶ್ವರ ಪಿ.ಕೆ.ಪಿ.ಎಸ್ ನಿರ್ದೇಶಕರಾದ ಬಸನಗೌಡ ಹುಲೆಪ್ಪನವರ, ತಡಸಲೂರ ಪ್ರಾಥಮಿಕ ಶಾಲೆಯ ಪ್ರದಾನ ಗುರುಗಳಾದ ವಿ.ಬಿ ಪರವಿನಾಯ್ಕರ, ಚಚಡಿ ಸಿ.ಆರ್.ಪಿ ರಫೀಕ್ ಮುರಗೋಡ, ಹಿರೇಬೂದನೂರು ಸಿ.ಆರ್.ಪಿ ಎಂ.ಜಿ.ಬಾಳೇಕುಂದರಗಿ, ಶಿಕ್ಷಕರಾದ ಬಿ.ಎನ್ ಬೆಳ್ಳಿಕಟ್ಟಿ, ಎ.ಎಸ್. ಮರಕಟ್ಟಿ, ಆರ್.ಎಫ್. ಬಿಜ್ಜೂರ, ರಾಜೇಶ್ವರಿ ಶೀಲವಂತರ ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ತಿಕ ಶೀಲವಂತರ ವಂದಿಸಿದರು. ವಿನಾಯಕ ಶೀಲವಂತರ ನಿರೂಪಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";