ಮುದಗಲ್ಲ: ಲಿಂಗಸುಗೂರು ಶಾಸಕರ ಡಿ.ಎಸ್. ಹೂಲಗೇರಿ ಶಾಸಕನಾಗಲು ಅರ್ಹ ವ್ಯಕ್ತಿ ಅಲ್ಲ ಎಂದು ಜೆಡಿಎಸ್ ಮುಖಂಡ ಸಿದ್ದು ವೈ ಬಂಡಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಮಠದಲ್ಲಿ ಜರುಗಿದ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಲಿಂಗಸುಗೂರು ಶಾಸಕ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಕುಂಭಕರಣನಂತೆ ನಿದ್ದಿ ಮಾಡುತ್ತ ತಿರುಗುತ್ತಿದ್ದಾರೆ. ಮುದಗಲ್ ಪಟ್ಟಣದ ಜನರು ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ.
ಪಟ್ಟಣಕ್ಕೆ 10 ದಿನಕ್ಕೆ ಒಮ್ಮೆ ನೀರು ಬರುತ್ತಿದೆ. ಕುಡಿವ ನೀರಿನ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಪಟ್ಟಣದ ಜನರು ಶಾಸಕರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು, ನೀರಿನ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
ತಮ್ಮ ಉದ್ಯೋಗ ಅಭಿವೃದ್ಧಿ ಪಡಿಸಿಕೊಳ್ಳಲು ಶಾಸಕರಾಗಿದ್ದಾರೆ. ಇವರು ಜನರ ಸೇವೆ ಮಾಡುವುದು ಮರೆತಿದ್ದಾರೆ. ತಾಲ್ಲೂಕಿನಲ್ಲಿ ಇನ್ನೂ ಅನೇಕ ಪ್ರದೇಶಗಳು ನೀರಾವರಿಯಿಂದ ವಂಚಿತವಾಗಿವೆ. ನೀರು ಬಳಕೆ ಮಾಡಿಕೊಳ್ಳಲು ಸಾಧ್ಯತೆಗಳು ಇದ್ದರು ನೀರಾವರಿ ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದಾರೆ ಎಂದರು.
ಹಟ್ಟಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ಅವರು ಕಂಪನಿ ಸಿಬ್ಬಂದಿಗಳಿಗೆ ಸಮರ್ಪಕವಾದ ಸೌಲಭ್ಯ ನೀಡುತ್ತಿಲ್ಲ. ಹಟ್ಟಿ ಕಂಪನಿ ಸಿಬ್ಬಂದಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಂಪನಿ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುದಗಲ್ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಲಿಂಗಸುಗೂರು ಬ್ಲಾಕ್ ಅಧ್ಯಕ್ಷ ನಾಗಭೂಷಣ, ಪುರಸಭೆ ಸದಸ್ಯರಾದ ದುರಗಪ್ಪ ಕಟ್ಟಿಮನಿ, ಬಸವರಾಜ ಮಾಕಾಪುರ, ರಜ್ಜಬ್ ಅಲಿ ಟಿಂಗ್ರಿ, ಪರಸುರಾಮ ಕೆಂಭಾವಿ, ಅನ್ವರ್ ಕಂದಗಲ್, ಕರಿಯಪ್ಪ ಯಾದವ, ಷಣ್ಮುಖಪ್ಪ ಚಲವಾದಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ವರದಿ: ಮಂಜುನಾಥ ಕುಂಬಾರ