ಬಸವ ತತ್ವಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು

ಅತ್ಯಂತ ಅಪರೂಪದ ಮಠಾಧೀಶರಾಗಿ ಬಸವ ತತ್ವಗಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ದುಡಿದ ಅಗ್ರಗಣ್ಯರಲ್ಲಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಒಬ್ಬರು. ಶ್ರೀಗಳೊಂದಿಗೆ ನಿರಂತರ ಮೂರು ದಶಕಗಳ ನಿಕಟ ಸಂಪರ್ಕ ಹೊಂದಿದವರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳುವ ಭಾಗ್ಯ ನನ್ನದಾಗಿದೆ.

ಅವರಾಡುವ ಪ್ರತಿಯೊಂದು ಮಾತಿನಲ್ಲಿ ಸ್ಪಷ್ಟವಾದ ವೈಚಾರಿಕತೆ ಇರುತ್ತಿತ್ತು. ಅಪ್ಪಟ ಬಸವವಾದಿಗಳಾಗಿದ್ದ ಶ್ರೀಗಳು ಕೇವಲ ಬರೀ ಭಾಷಣಕಾರರಾಗಿರಲಿಲ್ಲ.

ತಾವು ಹೇಳುವ ಪ್ರತಿ ಮಾತಿಗೂ ಅವರು ಬದ್ಧರಾಗಿರುತ್ತಿದ್ದರು. ನಾಡನುಡಿಯ ಉಳಿವಿಗಾಗಿ ನಡೆದ ಗೋಕಾಕ ಚಳುವಳಿಯಲ್ಲಿ ಶ್ರೀಗಳು ಸಕ್ರಿಯರಾಗಿದ್ದರು.

ಮಹಾದಾಯಿ ನದಿನೀರಿನ ಬೇಡಿಕೆ ಮುಂದಿಟ್ಟು ರೈತರು ನಡೆಸಿದ ಚಳುವಳಿಗೆ ಅವರು ಬೆಂಬಲಿಗರಾಗಿದ್ದರು. ಅದೇ ರೀತಿ ಬಸವೇಶ್ವರ ಸ್ಥಾಪಿತ ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದ ಬಹುವ್ಯಾಪಕ ಚಳುವಳಿಗೆ ಪೂಜ್ಯರು ಬೆನ್ನೆಲುಬಾಗಿ ನಿಂತಿದ್ದರು. ಬಸವ ತತ್ತ್ವಗಳನ್ನು ಶಬ್ದಶಃ ಪಾಲಿಸುತ್ತಿದ್ದ ಪೂಜ್ಯರು ತರುಣ ಪೀಳಿಗೆಯಲ್ಲಿ ಬಸವತತ್ತ್ವಗಳನ್ನು ಅನೇಕ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದರು. ಅದೇ ತತ್ವಗಳಿಗೆ ಮಾರುಹೋಗಿ ಬ್ರಾಹ್ಮಣ್ಯವನ್ನು ತೊರೆದು, ಲಿಂಗದೀಕ್ಷೆ ಪಡೆದ ಶ್ರೀ ನಿಜಗುಣಪ್ರಭು ಸ್ವಾಮಿಗಳನ್ನು ಮುಂಡರಗಿ ಶಾಖಾ ಮಠಕ್ಕೆ ಮಠಾಧೀಶರನ್ನಾಗಿ ನೇಮಿಸಿಕೊಂಡರು.

ಬಸವತತ್ತ್ವಗಳ ನಿಷ್ಠುರ ಮತ್ತು ಪ್ರಖರ ಪ್ರತಿಪಾದಕರಾಗಿದ್ದ ಪೂಜ್ಯ ಶ್ರೀ ಸಿದ್ಧಲಿಂಗ ಶ್ರೀಗಳು ಆ ತತ್ತ್ವಗಳನ್ನು ಅಷ್ಟೇ ಪ್ರಖರವಾಗಿ ವಿರೋಧಿಸುತ್ತಿರುವ ವೀರಶೈವ ಪಂಚಪೀಠಗಳನ್ನು ನೇರವಾಗಿಯೇ ಖಾರವಾಗಿ ಟೀಕಿಸುತ್ತಿದ್ದರು.ಗುರುಮಠ-ವಿರಕ್ತಮಠಗಳ ನಡುವಿನ ಶಾಶ್ವತ ತಿಕ್ಕಾಟ, ಸೈದ್ಧಾಂತಿಕ ಕಲಹಗಳಿಂದ ಲಿಂಗಾಯತ ಸಮಾಜದಲ್ಲಿ ಒಕ್ಕಟ್ಟು ಮರೀಚಿಕೆಯಾಗಿದೆ. ಈ ಕಲಹವನ್ನು ಪರಿಹರಿಸಲು 2003 ರಲ್ಲಿ ಸಮಾಜದ ಸಂಘಟನೆಗಳು ಸೇರಿ ಕೊಂಡು ಕೂಡಲ ಸಂಗಮದಲ್ಲಿ ಸಂಘಟಿಸಿದ್ದ ೯೦೦ ಮಠಾಧೀಶರ ಬೃಹತ್ ಸಮಾವೇಶ ಐತಿಹಾಸಿಕ ಮಹತ್ವ ಪಡೆದಿದೆ. ಅದರಲ್ಲಿ ಶ್ರೀ ಸಿದ್ಧಲಿಂಗ ಶ್ರೀಗಳು ಆಡಿದ ಮಾತುಗಳು ತುಂಬ ಮಹತ್ವ ಪಡೆದಿವೆ. ಬಸವತತ್ತ್ವಗಳ ನಾಶಕ್ಕಾಗಿ ಪಂಚಪೀಠಗಳು ನಿರಂತರವಾಗಿ ನಡೆಸಿದ ಕುತಂತ್ರಗಳನ್ನು ಕಣ್ಣಾರೆ ಕಂಡ ಅವರು “ಈ ವರೆಗೆ ಹೊರಗಿ ನಿಂದ ಬಸವಣ್ಣನನ್ನು ಮುಗಿಸಲು ನೀವೆಲ್ಲ ಸಾಕಷ್ಟು ಪ್ರಯತ್ನಿಸಿ ದಣಿದು ಸೋತಿದ್ದೀರಿ, ಇನ್ನು ಒಳಗೆ ಬಂದು ಅದೇ ಕಾರ್ಯವನ್ನು ಮಾಡಲು ಹೇಸದವರು ನೀವಾಗಿದ್ದೀರಿ, ಅದನ್ನೇ ಮುಂದುವರೆಸುವುದಾದರೆ ನೀವು ಒಳಗೆ ಬರುವ ಅಗತ್ಯವಿಲ್ಲ, ಬಸವಣ್ಣನನ್ನು ಒಪ್ಪಿ, ಅವನ ತತ್ವಗಳನ್ನು ಪಾಲಿಸುವುದಾದರೆ ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ, ಇಲ್ಲದಿದ್ದರೆ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ” ಎಂದು ನೇರವಾಗಿ ಹೇಳಿಬಿಟ್ಟರು. ತದನಂತರ ಶಿವಯೋಗ ಮಂದಿರದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಪಂಚಾಚಾರ್ಯರ ಪರವಾಗಿದ್ದ ವೀರಶೈವರ ಒಂದು ಗುಂಪು ಶ್ರೀಗಳ ಮೇಲೆ ಹಲ್ಲೆ ನಡೆಸಿತು. ಆದರೂ ಅವರು ವಿಚಲಿತರಾಗಲಿಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಸಂದರ್ಭದಲ್ಲಿ ಈ ರ‍್ಯಾಲಿಯಿಂದ ಏನುಪ್ರಯೋಜನವಾಗುತ್ತದೆ ಹಾಗೂ ಅದರ ಉದ್ದೇಶವೇನು ಎಂದು ಪ್ರಶ್ನಿಸಿದರು. ನಾನು ಅವರಿಗೆ ಲಕ್ಷಾನುಲಕ್ಷ ಜನರು ರ‍್ಯಾಲಿಗಳಲ್ಲಿ ಸೇರುತ್ತಾರೆ. ಅಲ್ಲಿ ನಡೆಯುವ ಚರ್ಚೆಗಳಿಂದ, ತಜ್ಞರ ಭಾಷಣಗಳಿಂದ ತಮ್ಮ ಧರ್ಮದ ಬಗ್ಗೆ, ಅರಿವು ಉಂಟಾಗುತ್ತದೆ. ಅದನ್ನು ಅವರು ಒಪ್ಪಿಕೊಂಡರು ಮತ್ತು ನಮ್ಮೆಲ್ಲ ರ‍್ಯಾಲಿಗಳಲ್ಲಿ ಭಾಗವಹಿಸಿ ಲಿಂಗಾಯತ ಧರ್ಮದ ಮಹತ್ವ ಹಾಗೂ ಸಾಂವಿಧಾನಿಕ ಮಾನ್ಯತೆಯ ಕುರಿತು ಅದ್ಭುತವಾಗಿ ಮಾತನಾಡಿದರು.

ಸಮಾಜದಲ್ಲಿ ಲಿಂಗಭೇದ, ಅಸಮಾನತೆ, ಜಾತೀಯತೆಯಂತಹ ಸಂಗತಿಗಳು ತಮ್ಮ ಅರ್ಥ ಕಳೆದುಕೊಂಡಿವೆ. ಬಸವ ಧರ್ಮ ವೈಜ್ಞಾನಿಕ, ತಾರ್ಕಿಕ ವಿಚಾರಗಳ ಆಚಾರಗಳ ಸಂಹಿತೆ ಯಾಗಿದೆ. ಇಂದಿಲ್ಲ ನಾಳೆಯಾದರೂ ನಮ್ಮ ಹೋರಾಟ ಯಶಸ್ವಿಯಾಗುವುದು ಖಂಡಿತ. ಆ ಕಾಲ ಬೇಗ ಬರುತ್ತದೆ. ಆಗ ಪೂಜ್ಯ ಸಿದ್ಧಲಿಂಗ ಶ್ರೀಗಳು ಕಂಡ ಬಸವನ ಕನಸುಗಳು ನನಸಾಗುತ್ತವೆ

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";