ವಿಜಯಪುರ: ಶತಮಾನದ ಸಂತ, ದೇಶ ಕಂಡ ಎರಡನೇ ವಿವೇಕಾನಂದ ಎಂದೇ ಪೂಜಿಸಲ್ಪಡುವ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯಕ್ಕೀಡಾಗಿದ್ದ ಶ್ರೀಗಳು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಸಂಜೆ ಶ್ರೀಗಳ ಆರೋಗ್ಯ ಚಿಂತಾಜನಕವಾಗಿತ್ತು. ಶ್ರೀಗಳ ಅಂತಿಮ ದರ್ಶನ ಪಡೆಯುವುದಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದತ್ತ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೈತ ಕುಟುಂಬದಲ್ಲಿ 1941 ರ ಅಕ್ಟೋಬರ್ 24 ರಂದು ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ
ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ 4 ನೇ ತರಗತಿವರೆಗೆ ಓದಿದ ನಂತರ ಅವರು ವೇದಾಂತ ಕೇಸರಿ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳವರನ್ನು ಆಶ್ರಯಿಸಿದರು. ಬಾಲಕ ಚುರುಕುತನವನ್ನು ಗುರುತಿಸಿದ ಹಿರಿಯ ಶ್ರೀಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ದೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಸಿದ್ದೇಶ್ವರ ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು.
ಶ್ರೀಗಳಿಗೆ ಕನ್ನಡದ ಜೊತೆ ಸಂಸ್ಕೃತ, ಇಂಗ್ಲೀಷ್, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿತ್ತು.
ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಸಿದ್ಧೇಶ್ವರ ಸ್ವಾಮಿಗಳವರ ನಿಧನಕ್ಕೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಶ್ರೀಗಳವರ ಆರೋಗ್ಯ ವಿಚಾರಿಸಲು ಆಗಮಿಸಿದ್ದಾಗ ಪ್ರಧಾನಿ ಮೋದಿ ದೂರವಾಣಿ ಕರೆ ಮೂಲಕ ಶ್ರೀಗಳವರ ಆರೋಗ್ಯ ವಿಚಾರಿಸಿದ್ದರು.
ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರವಾಗಿದ್ದು ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು.
ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳು ಕೊಲ್ಹಾಪುರದಲ್ಲಿ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ “ಸಿದ್ದಾಂತ ಶಿಖಾಮಣಿ “ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು.
ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅವರು ಕರ್ನಾಟಕದ ವಿಜಯಜಪುರದ ಜ್ಞಾನ ಯೋಗಶ್ರಮದ ಸಂಸ್ಥಾಪಕರಾಗಿದ್ದಾರೆ. ಶ್ರೀಗಳವರು ತಮಗೆ ಭಾರತ ಸರ್ಕಾರ ಘೋಷಿಸಿದ್ದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಅತ್ಯುನ್ನತ ಪ್ರಶಸ್ತಿಗಳನ್ನು ವಿನಯಪೂರ್ವಕವಾಗಿ ನಿರಾಕರಿಸಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಸಿದ್ದೇಶ್ವರ ಶ್ರೀಗಳ ಉಪನ್ಯಾಸ ಸರಣಿಯ “ಬದುಕುವದು ಹೇಗೆ,” ನಾವು ಹೇಗೆ ಬದುಕಬೇಕು / ದಾರಿ ಮಾಡಿಕೊಳ್ಳಬೇಕು “ಲಕ್ಷಾಂತರ ಭಾರತೀಯರನ್ನು ರೂಪಾಂತರಿಸಿದೆ. ಶ್ರೀ ಸ್ವಾಮೀಜಿ “ಪತಂಜಲಿಯ ಯೋಗಶಾಸ್ತ್ರ” ವನ್ನು ಮಹಾನ್ ಪಾಂಡಿತ್ಯಪೂರ್ಣ ಪಾಂಡಿತ್ಯದೊಂದಿಗೆ ಸಂಪಾದಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಶ್ರೀಗಳವರ ಇಚ್ಛೆಯ ಪ್ರಕಾರದಂತೆಯೇ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೆಲವು ವರ್ಷಗಳ ಹಿಂದೆಯೇ ತಮ್ಮ ಅಂತ್ಯಕ್ರಿಯೆಯ ವಿಧಿವಿಧಾನಗಳ ಬಗ್ಗೆ ಇಚ್ಛೆಯನ್ನು ಸ್ಪಷ್ಟವಾಗಿ ತಿಳಿಸಿದ್ದ ಶ್ರೀಗಳವರು ತಮಗಾಗಿ ಯಾವುದೇ ಸ್ಮಾರಕ ನಿರ್ಮಿಸಬಾರದು ಎಂಬ ಸೂಚನೆ ನೀಡಿದ್ದರು ಎಂದು ಯೋಗಾಶ್ರಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.