‘ಜನಮರ್ದನ’ ಅಲ್ಲಲ್ಲ, ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಸಿಎಂ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು:ಸಿದ್ದರಾಮಯ್ಯ

ಉಮೇಶ ಗೌರಿ (ಯರಡಾಲ)

ಬೆಂಗಳೂರು: ಬಿಜೆಪಿ ಆರಂಭಿಸಿರುವ ದಿಗ್ವಿಜಯ ಯಾತ್ರೆಗೆ ತಾಕತ್ತಿದ್ದರೆ ತಡೆಯೊಡ್ಡುವಂತೆ ಕಾಂಗ್ರೆಸ್‌ಗೆ ಸವಾಲು ಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ ರೀತಿ ಮಾತನಾಡಿಯೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಎಂದು ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

‘ಜನಮರ್ದನ’ ಅಲ್ಲಲ್ಲ, ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರ ಇಂತಹ ಜೋರು ಮಾತುಗಳನ್ನು ಸಹಿಸುವುದಿಲ್ಲ, ಇದೇ ರೀತಿ ಮಾತನಾಡಿಯೇ ಪಾಪ ಬಿ.ಎಸ್. ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ ಎಂದು ಹೇಳಿದ್ದಾರೆ.

ದಮ್ ಇದ್ದರೆ ಬಿಜೆಪಿ ಕರ್ನಾಟಕ ಯಾತ್ರೆ ಹಿಮ್ಮೆಟ್ಟಿಸಿ ಎಂದು ಸಿಎಂ ಬೊಮ್ಮಾಯಿ ಸವಾಲು ಹಾಕಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಲು ಹೋಗ್ಬೇಕು? ಸಮಾವೇಶದಲ್ಲಿನ ಖಾಲಿ ಕುರ್ಚಿಗಳನ್ನು ನೋಡಿದರೆ ನಿಮ್ಮ ‘ಜಾತ್ರೆ’ಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಎಂದು ನಿಮಗೆ ಅನಿಸಲ್ವಾ? ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಮಗೆ ಸವಾಲು ಹಾಕುವ ಧಮ್ ನಿಮಗಿಲ್ಲ ಎನ್ನುವುದು ಸ್ವತಃ ನಿಮಗೂ ಗೊತ್ತು. ನಿಮಗೆ ಧಮ್ ಇದ್ದರೆ ಮೊದಲು ನಿಮ್ಮ ಸಂಪುಟದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಿ ಬಿಡಿ. ಕನಿಷ್ಠ ಬಸವನಗೌಡ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ. ಆ ಮೇಲೆ ನಿಮ್ಮ ಧಮ್ ನೋಡೋಣ ಎಂದು ತಿರುಗೇಟು ನೀಡಿದ್ದಾರೆ.

ನನ್ನ ಆಡಳಿತ ಕಾಲದ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕೆಲವು ದಿನಗಳಿಂದ ಬಿಜೆಪಿಯ ನಾಯಕರು ಹೇಳುತ್ತಲೇ ಇದ್ದಾರೆ. ಮೊನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕೋರ್ಟ್ ನೋಟೀಸ್ ನೀಡಿದ್ದನ್ನು ನೋಡಿದರೆ ಇವರು ಹೇಳಿದ್ದು ನನಗೋ, ಯಡಿಯೂರಪ್ಪನವರಿಗೋ? ಎಂದು ಗೊಂದಲವಾಗುತ್ತಿದೆ ಎಂದು ಹೇಳಿದ್ದಾರೆ.

ನನ್ನ ಅಧಿಕಾರವಧಿಯ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ಧಮ್ಕಿ ಹಾಕುತ್ತಲೇ ಇದ್ದಾರೆ. ಧಮ್ ಇದ್ದರೆ ಮೊದಲು ಆ ಕೆಲಸ ಮಾಡಿ. ನಾನು ಅದನ್ನು ಎದುರಿಸಲು ಸದಾ ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನೆಲ್ಲ ನಿಮ್ಮವರ ಮೇಲೆ ಬಳಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೊದಲು ಬಿಜೆಪಿ ನಾಯಕರುಗಳ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಾಲು ಸಾಲು ಹಗರಣಗಳನ್ನು ಇತ್ಯರ್ಥ ಮಾಡಿಕೊಂಡು ಬನ್ನಿ. ಸಿಎಂ ಬೊಮ್ಮಾಯಿಯವರೇ ನೀವು ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ ಎಂದು ಎಚ್ಚರಿಸಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನೀವು ಸಿದ್ಧರಿದ್ದಿರಾ ಸಿಎಂ ಬೊಮ್ಮಾಯಿ ಅವರೇ? ನಮ್ಮ ಪಕ್ಷ ಸಿದ್ಧ ಇದೆ. ನೀವು ಸಿದ್ಧ ಇದ್ದರೆ ಸಾರ್ವಜನಿಕ ಚರ್ಚೆಗೆ ಸ್ಥಳ-ಸಮಯ ನೀವೇ ನಿರ್ಧರಿಸಿ ತಿಳಿಸಿ ನಾನು ಬರ್ತೇನೆ. ಧಮ್ ಎಂದರೆ ಧಮ್ ಬಿರಿಯಾನಿ ಎಂದು ನೀವು ತಿಳಿದುಕೊಂಡ ಹಾಗಿದೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಸಿಎಂ ಬೊಮ್ಮಾಯಿ ಅವರೇ? ನಿಮಗೆ ಆ ಧಮ್ ಇಲ್ಲ. ಕೊನೆಗೆ ಹಿಂದು-ಮುಸ್ಲಿಮ್, ಮಂದಿರ ಮಸೀದಿ, ಹಿಜಾಬ್-ಕೇಸರಿ ಶಾಲುಗಳ ವಿವಾದದಲ್ಲಿಯೆ ನಿಮ್ಮ ಪ್ರಚಾರ ಕೊನೆಗೊಳ್ಳುವುದು. ಬೇರೆ ದಾರಿ ನಿಮಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";