ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ:ಅಧಿಕೃತ ಘೋಷಣೆ!

ಉಮೇಶ ಗೌರಿ (ಯರಡಾಲ)

ನವದೆಹಲಿ: ಕಳೆದ ನಾಲ್ಕು ದಿನಗಳಿಂದ ಶುರುವಾಗಿದ್ದ ಸಿಎಂ ಸ್ಥಾನದ ಆಯ್ಕೆಯ ಹಗ್ಗ ಜಗ್ಗಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ. ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಿ ಅಧಿಕೃತ ಮುದ್ರೆಯನ್ನು ಒತ್ತಿದೆ. ಕಳೆದ ಭಾನುವಾರದಿಂದ ಸಿಎಂ ಅಯ್ಕೆಯ ಕಸರತ್ತು ನಡೆಯುತ್ತಿತ್ತು. ಹೈಕಮಾಂಡ್ ಅಧಿಕಾರ ಹಂಚಿಕೆಯ ಸೂತ್ರವನ್ನರಿಸಿ ಸಿಎಂ ಆಯ್ಕೆಗೆ ಮುಂದಾಗಿತ್ತು. ಆದ್ರೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಾತ್ರ ಯಾವ ಅಧಿಕಾರ ಹಂಚಿಕೆಯ ಸೂತ್ರವನ್ನು ಒಪ್ಪಿಕೊಳ್ಳದೇ, ಐದು ವರ್ಷದ ಪೂರ್ಣ ಅವಧಿಗೆ ನನ್ನನ್ನೇ ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಶುಕ್ರವಾರ ಅಮವಾಸ್ಯೆ ಹಿನ್ನೆಲೆ ಮೇ 20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ಬೆಂಗಳೂರಿಕ ಕಂಠೀರವ ಕ್ರೀಡಾಂಗಣದಲ್ಲಿ  ನಡೆಯಲಿದೆ.

ಕರ್ನಾಟಕ ಸಿಎಂ ಕದನ ಅಂತ್ಯವಾಗಿದ್ದು 5ನೇ ದಿನ ಸಿಎಂ ಬಿಕ್ಕಟ್ಟಿಗೆ ತೆರೆ ಎಳೆಯಲಾಗಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮನವೊಲಿಕೆಯ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಡಿಕೆ ಶಿವಕುಮಾರ್‌  ಒಪ್ಪಿಗೆ ನೀಡಿದ್ದಾರೆ.

ಬುಧವಾರ ದಿನಪೂರ್ತಿ ಡಿಕೆಶಿ ಜೊತೆ ಮಾತುಕತೆ ನಡೆಸಿದರೂ ಯಾವುದೇ ಕಾರಣಕ್ಕೂ ತಮ್ಮ ಬೇಡಿಕೆಯಿಂದ ಹಿಂದಕ್ಕೆ ಸರಿದಿರಲಿಲ್ಲ. ತಡರಾತ್ರಿ ಸೋನಿಯಾ ಗಾಂಧಿ ಡಿಕೆಶಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದು ಕುರ್ಚಿ ಕಾದಾಟಕ್ಕೆ ಬ್ರೇಕ್‌ ಬಿದ್ದಿದೆ.

ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿದ್ದರೆ ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸಲಿದ್ದಾರೆ. ಡಿಕೆ ಶಿವಕುಮಾರ್‌ ಡಿಸಿಎಂ ಜೊತೆಗೆ ಎರಡು ಪ್ರಬಲ ಖಾತೆಯನ್ನು ನೀಡುವುದಾಗಿ ಹೈಕಮಾಂಡ್‌ ಭರವಸೆ ನೀಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಇಂದು ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.

ಕರ್ನಾಟಕದ ಜನರು ಕಾಂಗ್ರೆಸ್‍ಗೆ ಅತಿದೊಡ್ಡ ಸಂಖ್ಯೆ ನೀಡಿದ್ದಾರೆ. ಸಿಎಂ ಹುದ್ದೆಯ ಕಾದಾಟದಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗುವುದು ಬೇಡ. ಈಗ ಒಮ್ಮೆ ಸಹಕರಿಸಿದರೆ ಭವಿಷ್ಯದಲ್ಲಿ ಸಿಎಂ ಸ್ಥಾನ ನೀಡಲಾಗುವುದು. ಪಕ್ಷಕ್ಕಾಗಿ ಮತ್ತೊಮ್ಮೆ ತ್ಯಾಗ ಮಾಡಲು ಸೋನಿಯಾ ಗಾಂಧಿ ಸೂಚಿಸಿದ್ದಾರೆ. ಸೋನಿಯಾ ಗಾಂಧಿ ನೀಡಿದ ಭರವಸೆ ಮೇಲೆ ಡಿಸಿಎಂ ಸ್ಥಾನಕ್ಕೆ ಡಿಕೆಶಿ ತೃಪ್ತರಾಗಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";