ಉತ್ತರ ಕರ್ನಾಟಕದ ಸುಪ್ರಸಿದ್ಧ, ತೊಂಟದಾರ್ಯ ಮಠದ ಡಾ. ಸಿದ್ದಲಿಂಗ ಮಹಾಸ್ವಾಮೀಜಿಗಳು 1949ರ ಫೆಬ್ರವರಿ 29ರಂದು ವಿಜಾಪುರದ ಸಿಂಧಗಿಯ ಕೋರವಾರದಲ್ಲಿ ಜನಿಸಿದರು. 1974ರಲ್ಲಿ ಸಿದ್ದಲಿಂಗ ಶ್ರೀಗಳು ಮಠದ 19ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಇವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಶ್ರೀಸಾಮಾನ್ಯರ ಸ್ವಾಮೀಜಿ ಎಂದೇ ಪ್ರಖ್ಯಾತವಾಗಿದ್ದರು.
ಶಿವಶರಣರ ವಚನಗಳಿಂದ ಪ್ರಭಾವಿತರಾಗಿದ್ದ ಸ್ವಾಮೀಜಿ, ಹರಿಜನ ಕೇರಿ, ಡೋಣಿ ತಾಂಡಾಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿದ್ದರು. ಬಸವಧರ್ಮ ದೀಕ್ಷೆ ನೀಡುವ ಮೂಲಕ ಕರ್ನಾಟಕದಾಚೆಗೂ ಬಸವ ತತ್ವವನ್ನು ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದೀನ ದಲಿತರ, ಶೋಷಿತರ, ನೊಂದವರ ಸೇವೆಯೇ ಲಿಂಗಪೂಜೆ ಅಂತಾ ಸಿದ್ಧಲಿಂಗ ಶ್ರೀಗಳು ಭಾವಿಸಿದ್ದರು
ಯಾದಗಿರಿ, ಬಳ್ಳಾರಿ ಸೇರಿದಂತೆ ಹಿಂದುಳಿದ ಜಿಲ್ಲೆಗಳಲ್ಲಿ ವಸತಿ ನಿಲಯ ಸ್ಥಾಪನೆಗಾಗಿ ಸ್ವಾಮೀಜಿ ಭೂದಾನ ಮಾಡಿದ್ದರು. ರೈತರಿಗಾಗಿ ತೋಂಟದಾರ್ಯ ಸ್ವಾಮೀಜಿ 3 ಸಾವಿರ ಎಕರೆ ಭೂಮಿಯನ್ನ ದಾನ ಮಾಡಿದ್ದರು. ಅಲ್ಲದೆ ಕಪ್ಪತಗುಡ್ಡದ ರಕ್ಷಣೆಗಾಗಿ ಶ್ರೀಗಳು ತೀವ್ರ ಹೋರಾಟ ಮಾಡಿದ್ದರು.
ಮಠ, ಮಂದಿರ, ಮಸೀದಿಗಳನ್ನು ಸ್ಥಾಪಿಸಲು ಸ್ವಾಮೀಜಿ ಭೂದಾನ ಮಾಡಿದ್ದರು. ಸ್ವಾಮೀಜಿಯ ನೇತೃತ್ವದಲ್ಲಿ ಮಠದಲ್ಲಿ ಪ್ರತಿ ವಾರ ಶಿವಾನುಭವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಕುರಿತಾದ ಚರ್ಚೆಗಳು ನಡೆಯುತ್ತಿದ್ದವು.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರು ಮುಂಚೂಣಿಯಲ್ಲಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಮಾಡೋದಕ್ಕೆ ಮುಂದಾದಾಗ ಅದಕ್ಕೆ ಶ್ರೀಗಳು ಬೆಂಬಲ ಸೂಚಿಸಿದ್ದರು. ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದ ಶ್ರೀಗಳು, ಸಮಾಜದ ಹಿತ ಹಾಗೂ ಬೆಳವಣಿಗೆ ದೃಷ್ಟಿಯಿಂದ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂದು ಹೇಳಿಕೆ ನೀಡಿದ್ದರು.
ಮಹಾದಾಯಿಗಾಗಿ ಶ್ರೀಗಳ ಅವಿರತ ಹೋರಾಟ: ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಲಪ್ರಭಾ ಅಚ್ಚು ಕಟ್ಟು ರೈತರು ನಡೆಸುತ್ತಿದ್ದ ಹೋರಾಟಕ್ಕೆ ಡಾ.ಸಿದ್ದಲಿಂಗ ಸ್ವಾಮೀಜಿ ಸಂಪೂರ್ಣ ಬೆಂಬಲ ನೀಡಿದ್ದರು. ರೈತರ ಜೊತೆಗೂಡಿ ಶ್ರೀಗಳು ಕೂಡ ಬೀದಿಗಿಳಿದು ಹೋರಾಟ ನಡೆಸಿದ್ದರು.
ಕಪ್ಪತ ಗುಡ್ಡ ರಕ್ಷಿಸಲು ಶ್ರೀಗಳ ಅಹೋರಾತ್ರಿ ಧರಣಿ: ಕಪ್ಪತ ಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗೆ ಆಗ್ರಹಿಸಿ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು 3 ದಿನಗಳ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೂಡ ನಡೆಸಿದ್ದರು. ಗಣಿಗಾರಿಕೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಉಪನ್ಯಾಸ ನೀಡಿದ್ದರು. ಬೀದಿ ನಾಟಕಗಳನ್ನು ಆಯೋಜಿಸಿ ಕಪ್ಪತ್ತಗುಡ್ಡ ಮಹತ್ವವನ್ನು ಸಾರಿದ್ದರು.
ಕನ್ನಡ ನಾಡು ನುಡಿಗಾಗಿ ಶ್ರೀಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ರೈತರ ಸಮಸ್ಯೆಗೆ, ಕಾರ್ಮಿಕರ ಸಮಸ್ಯೆಗೆ ದನಿಯಾಗಿದ್ದರು. ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ, ತೋಂಟದಾರ್ಯ ಸ್ವಾಮೀಜಿಗಳಿಗೆ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಜೊತೆಗೆ ಇನ್ನೂ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. ಶ್ರೀಗಳ ಕಾರ್ಯಕ್ಕೆ 1995ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಾಮಾಜಿಕ ಸೇವೆಗಾಗಿ 1994ರಲ್ಲಿ ಗುಲ್ಬರ್ಗ ವಿವಿಯಿಂದ ಡಿ.ಲಿಟ್ ಪದವಿ ಪ್ರದಾನ ಮಾಡಲಾಗಿತ್ತು. ಶ್ರೀಗಳಿಗೆ 2001ರಲ್ಲಿ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. 2009ರಲ್ಲಿ ಬಸವ ಪುರಸ್ಕಾರ ದೊರೆತಿದೆ.
ಸಮಾಜಿಕ ಕಳಕಳಿಯ ನೂರಾರು ಕಾರ್ಯಗಳಿಗೆ ಸ್ವಾಮೀಜಿ ಜನಾನುರಾಗಿಯಾಗಿದ್ದರು. ಸಮಾಜಿಕ ಕ್ರಾಂತಿಯ ಹರಿಕಾರರಾಗಿದ್ದ ಶ್ರೀಗಳು ಅಗಲಿ ಇಂದಿಗೆ ಮೂರು ವರ್ಷ ಕಳೆದವು ಆದರೆ ಅವರು ನಮ್ಮೊಡನೆ ಇಲ್ಲ ಅನ್ನುವ ಭಾವನೆ ನಮಗ್ಯಾವತ್ತು ಬಂದೆ ಇಲ್ಲಾ. ಅಪಾರ ಭಕ್ತ ಸಮೂಹವನ್ನು ಅಗಲಿದ ಮಹಾನ್ ಬಸವ ಚೇತನಕ್ಕೆ ಕೋಟಿ ಕೋಟಿ ನಮನಗಳು….
ಲೇಖಕರು: ಡಾ|| ಜಗದೀಶ ಹಾರುಗೊಪ್ಪ. ಎಂ ಕೆ ಹುಬ್ಬಳ್ಳಿ. ಚನ್ನಮ್ಮ ಕಿತ್ತೂರು