ಶರಣ ಡಾ. ಈಶ್ವರ ಮಂಟೂರ ಹೃದಯಾಘಾತದಿಂದ ನಿಧನ.

ಬೆಳಗಾವಿ:ಬಸವಾದಿ ಶರಣರ ತತ್ವಗಳನ್ನು ನಾಡಿನ ತುಂಬ ಪಸರಿಸಲು ತಮ್ಮ ಇಡೀ ಬದುಕನ್ನು ಮೀಸಲಿಟ್ಟಿದ್ದ ಡಾ. ಈಶ್ವರ ಮಂಟೂರ ಅವರು ಹೃದಯಾಘಾತದಿಂದ ಇಂದು (ಡಿ.09) ಲಿಂಗೈಕ್ಯರಾಗಿದ್ದಾರೆ.

ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬಂದಿದ್ದ ಶರಣರದು ಶಿಸ್ತುಬದ್ಧ ಜೀವನ. ಜಮಖಂಡಿ ಹತ್ತಿರದ ಮದರಕಂಡಿ ಆಶ್ರಮದ ನಿರಂತರ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆದಿದ್ದರು

ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರಿನ ‘ಕಲಾನೇಕಾರ’ ಕುಟುಂಬದಲ್ಲಿ 23 ಮಾರ್ಚ 1972 ರಂದು ತಂದೆ ಶ್ರೀಶೈಲಪ್ಪ
ತಾಯಿ ಅನ್ನಪೂರ್ಣ ಶರಣ ದಂಪತಿಗಳ ಪುಣ್ಯ ಉದರದಿಂದ ಜನ್ಮ ತಾಳಿದವರು.ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಸಂಗೀತ,ಸಾಹಿತ್ಯ, ಭಜನೆ, ಪುರಾಣ, ಪ್ರವಚನ ಮುಂತಾದ ಕಲೆಗಳನ್ನು ಮೈಗೂಡಿಸಿಕೊಂಡು ಬೆಳೆದವರು, ತಿಳಿಯಲಾರದ ಘನವನ್ನು ತಿಳಿಯುವ ಕಾಣಬಾರದ ಪರವಸ್ತುಗಳನ್ನು ಕಾಣುವ ಅಂತರಂಗದ ರತ್ನವಾದ ಆತ್ಮವಿದ್ಯೆಯ ಕಡೆಗೆ ಒಲವು ತೋರಿದವರು.

ಶರಣ ಶ್ರೀ ಡಾ. ಈಶ್ವರ ಮಂಟೂರ ಅವರು ಕವಿಯಾಗಿ, ಚಿಂತಕರಾಗಿ, ಅನುಭಾವಿ ಪ್ರವಚನಕಾರರಾಗಿ, ಸಾಹಿತಿಗಳಾಗಿ,
ಸಮಾಜೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಮುನ್ನಡೆದಿದ್ದರು .ಕಲ್ಲು ಮನಸ್ಸಿನ ಹೃದಯಗಳನ್ನು ಹೂವಿನಂತೆ ಅರಳಿಸುವ ಕ್ರೂರಿಗಳ ಭಾವದಲ್ಲಿ ದಯೆಯನ್ನು ತುಂಬುವ, ದ್ವೇಷಿಗಳ ಮನದಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವ, ವಿನಯಗುಣ ಸರಳ ಸಂಪನ್ನ ಶರಣರಾದ ಇವರ ತ್ಯಾಗ, ಸೇವೆ
ಅನುಪಮವಾದುದು.

ಮುಖ್ಯವಾಗಿ ಇಲಕಲ್ಲಿನ ಮಹಾಂತ ಅಪ್ಪಗಳ ಪ್ರಭಾವದಿಂದಾಗಿ ತಮ್ಮ ವಿಶಿಷ್ಟ ಕಾರ್ಯ ಚಟುವಟಿಕೆಗಳನ್ನು ಕೈ ಗೊಳ್ಳುತ್ತಿದ್ದ ಶರಣರ ಪ್ರವಚನದ ದೇಸಿ ಸೊಗಡನ್ನು ಮರೆಯಲಾಗದು.
ನಿರಂತರ ಶಿವಾನುಭವ, ಗಣ್ಯರ ಸಂಮಾನ, ಶಿವಯೋಗ ಶಿಬಿರಗಳು, ವಾರ್ಷಿಕ ಬೃಹತ್ ಕಾರ್ಯಕ್ರಮಗಳ ಜೊತೆಗೆ, ವೈಯಕ್ತಿಕ ಪ್ರವಚನ ನೀಡಲು ಇಡೀ ಲೋಕವನ್ನು ಸಂಚಾರ ಮಾಡುತ್ತಿದ್ದರು.

ಪೂಜ್ಯ ಶರಣರು 1993 ರಲ್ಲಿ ಬಿ.ಕಾಂ. ಪದವಿ ಪಡೆದು, ಅಣ್ಣಾಗೃಹಪಾಠ ಶಿಕ್ಷಣ ಕೇಂದ್ರ ಆರಂಭಿಸಿ ಐದು ವರ್ಷಗಳ ಕಾಲ ಜ್ಞಾನ ಚಿಂತನದಡಿಯಲ್ಲಿ ಆಧ್ಯಾತ್ಮಿಕ ತಳಹದಿಯ ಮೇಲೆ ಸಹಸ್ರಾರು ಮಕ್ಕಳಿಗೆ ಜ್ಞಾನದಾಸೋಹ ನೀಡುತ್ತಲೇ ಬ್ಯಾಂಕಿನಲ್ಲಿ
ಕರಣಿಕರಾಗಿ ಸೇವೆ ಸಲ್ಲಿಸಿದ್ದಾರೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";