ಗೋಕಾಕ : ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರಂತಾ ಮಹಾನ್ ನಾಯಕರ ಪ್ರತಿಮೆಗಳಿಗೆ ಅವಮಾನ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಸುರಿದ ಪ್ರಕರಣದಿಂದ ಬೆಳಗಾವಿಯಲ್ಲಿ ಸಮಸ್ಯೆ ಉದ್ಭವವಾಗಿದೆ. ರಾಯಣ್ಣ ಪ್ರತಿಮೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ನಡೆದ ಎರಡು ಘಟನೆಗಳಿಂದ ಗಲಾಟೆ ರಾಜ್ಯಕ್ಕೆ ವ್ಯಾಪಿಸುವಂತಹ ಅವಕಾಶ ಇದೆ. ಹೀಗಾಗಿ ಪೊಲೀಸರು ತನಿಖೆ ನಡೆಸಿ, ಕೂಡಲೇ ಭಾಗಿಯಾದವರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ಯಾರೋ ಕಿಡಿಗೇಡಿಗಳು ಮಾಡಿದಂತ ಕೃತ್ಯಕ್ಕೆ ಸರ್ಕಾರ, ಪೊಲೀಸ್ ಇಲಾಖೆಯೇ ನಿರ್ಲಕ್ಷ್ಯ ಎಂದು ಹೇಳಲಿಕ್ಕೆ ಆಗುವುದಿಲ್ಲ. ಆದರೆ ಕೃತ್ಯ ಎಸಗಿದವರನ್ನು ಹಿಡಿಯುವಂತ ಶಕ್ತಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಇದೆ. ಆ ಕೆಲಸ ಮಾಡಬೇಕು ಎಂದು ಆಗ್ರಹ ಮಾಡಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಇಂತಹ ಘಟನೆಗಳು ಪದೇ ಪದೇ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.