ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪಿ ಸಂಜೀವ ಭಂಡಾರಿಗೆ :ಇತ್ತ ಜಾಮೀನು- ಅತ್ತ ಬಂಧನ

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಸಂಜೀವ ಭಂಡಾರಿ, ಜಾಮೀನು ಪಡೆದು ಹೊರಬರುತ್ತಿದ್ದಂತೆಯೇ ಸಿಐಡಿ ಅಧಿಕಾರಿಗಳು ಬಂಧಿಸಿದರು.

ಈ ಪ್ರಕರಣದ ‘ಕಿಂಗ್ ಪಿನ್’ ಸಂಜೀವ ಅವರನ್ನು ಸೆ.3ರಂದು ಬಂಧಿಸಲಾಗಿತ್ತು.ಸಂಜೀವ ಸೇರಿದಂತೆ ಎಲ್ಲ 20 ಆರೋಪಿಗಳೂ ಇಲ್ಲಿನ ಹಿಂಡಲಗಾ ಜೈಲಿನಲ್ಲಿದ್ದರು. ಸೋಮವಾರ ಇವರ ಅರ್ಜಿ ವಿಚಾರಣೆ ನಡೆಸಿದ ಗೋಕಾಕದ 2ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಸಂಜೀವ ಜಾಮೀನು ಪಡೆದು ಜೈಲಿನಿಂದ ಹೊರ ಬರುತ್ತಿದ್ದಂತೆ ಸಿಐಡಿ ಅಧಿಕಾರಿಗಳು ಅವರನ್ನು ಬಂಧಿಸಿದರು. ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ಆರು ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಲಾಗಿದೆ.

2021ರಲ್ಲಿ ನಡೆದ ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲೂ ಸಂಜೀವ ಅಕ್ರಮ ಎಸಗಿರುವ ಆರೋಪದಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದು ಮತ್ತೆ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಕೂಡ ಅಭ್ಯರ್ಥಿಗಳಿಗೆ ಸ್ಮಾರ್ಟ್ ವಾಚ್ ನೀಡಿ ಅಕ್ರಮ ಎಸಗುವ ಡೀಲ್ ಮಾಡಿದ ಆರೋಪ ಅವರ ಮೇಲಿದೆ.

Share This Article
";