ರಾಷ್ಟ್ರ ಮಾತೆ ಕಿತ್ತೂರು ಚೆನ್ನಮ್ಮ ಹಾಕಿರುವ ಸೆರಗನ್ನು ಹೆಣ್ಣು ಮಕ್ಕಳು ಹಾಕಲು ಅವಕಾಶ ಕೊಡಬೇಕು. ಸೆರಗು ಇಲ್ಲದ ತಲೆ ತಲೆಯಲ್ಲ; ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ

ಬೆಳಗಾವಿ: ‘ತಾಯಿ ಕಿತ್ತೂರು ಚೆನ್ನಮ್ಮ ಹಾಕಿರುವ ಸೆರಗನ್ನು ಹೆಣ್ಮಕ್ಕಳು ಹಾಕಲು ಅವಕಾಶ ಕೊಡಬೇಕು. ಸೀರೆಯ ಸೆರಗು ಹೆಣ್ಮ ಮಕ್ಕಳಿಗೆ ಕಳೆ ಇದ್ದಂತೆ. ಅದೇ ಒಂದು ರೂಪ, ಮಹಾಲಕ್ಷ್ಮಿಕಂಡಂತೆ ಕಾಣುತ್ತಾರೆ. ಸೆರಗು ಇಲ್ಲದ ತಲೆ ತಲೆಯಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನನ್ನ ತಾಯಿ ಕಿತ್ತೂರು ರಾಣಿ ಚೆನ್ನಮ್ಮ ಹಾಕಿರುವ ಸೆರಗನ್ನು ಭಾರತದಲ್ಲಿ ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ ಅವರಿಗೆ ಸೆರಗು ಹೊರಲು ಅವಕಾಶ ಕೊಡಬೇಕು. ತಲೆ ಮೇಲೆ ಸೆರಗು ಹಾಕಲು ಯಾರು ಬೇಡ ಅಂತಾರೆ? ಇದು ವಿಚಿತ್ರ. ಇದಕ್ಕೆ ಕೋರ್ಟ್‌ಗೆ ಹೋಗಬೇಕಾ?, ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾಗಾಂಧಿ ಸೇರಿದಂತೆ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕೂಡ ಸೆರಗು ಹಾಕಿದ್ದರು. ಆದರೆ, ಈಗ ನನ್ನ ಮಗಳಿಗೆ ಸೆರಗು ಹಾಕಬೇಡ ಅಂದರೆ ಹೇಗೆ?

ಸಿಎಂ ಬಸವರಾಜ ಬೊಮ್ಮಾಯಿ ಅವ್ರೇ ನಿಮ್ಮ ಅವ್ವನೂ ಸೆರಗು ಹಾಕುತ್ತಿದ್ದರು ಮಾರಾಯಾ. ನೀನು ನಿನ್ನ ಸೊಸೆಗೂ ಸೆರಗು ಹಾಕಿಸು. ನನ್ನ ಮಗಳು ಕೂಡಾ ಸೆರಗು ಹಾಕಿಕೊಂಡು ಹೋಗಲಿ ಅಂತಾ ಹೇಳು. ಆದ್ರೆ, ಅದಕ್ಕೆ ಜಾತಿ ಬಣ್ಣ ಕಟ್ಟಬೇಡ ಅಂತಾ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ವೋಟ್ ಬರುತ್ತೆ ಅಂತಾ ರಾಜಕೀಯದಲ್ಲಿ ಧರ್ಮ ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಿನ್ನೆ ಆಳಂದದಲ್ಲಿ ಮೂರು ಜನರು ಹೋಗಿ ಪೂಜೆ ಮಾಡಿದರೆ ಆಗುತ್ತಿತ್ತು. ಆದರೆ, ಬಿಜೆಪಿಯವರು ಬೇಕಂತಲೇ ಧ್ವಜ ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ನಾಳೆ ನಾನೂ ಅಲ್ಲಿಗೆ ಹೋಗುತ್ತಿದ್ದೇನೆ. ಸಮಸ್ಯೆ ಬಗೆಹರಿಸುತ್ತೇನೆ. ಶಾಂತಿ ತರಲು ಪ್ರಯತ್ನ ಮಾಡುತ್ತಿದ್ದೇನೆ.

ಬಿಜೆಪಿಯವರು ಹುಬ್ಬಳ್ಳಿ, ಮುಧೋಳ ಹಾಗೂ ಸಿಂಧಗಿಯಲ್ಲಿ ಶಾಂತಿ ಕೆಡಿಸಿದ್ದರು. ಅದನ್ನು ಸರಿ ಮಾಡಿದ್ದೇವೆ. ಅದರಂತೆ ಆಳಂದದಲ್ಲಿರುವ ಘಟನೆಯನ್ನು ಸರಿ ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ವಿಫಲವಾಗಿದೆ. ಮೂರು ತಿಂಗಳ ಮುಂಚೆಯೇ ಯುದ್ಧ ಆಗುತ್ತೆ ಅಂತಾ ಕೇಂದ್ರ ಸರ್ಕಾರಕ್ಕೆ ಗೊತ್ತಿತ್ತು. ಆದರೂ ಕರೆದುಕೊಂಡು ಬಂದಿಲ್ಲ. ಇತ್ತ ಏರ್ ಇಂಡಿಯಾ ಕಂಪನಿ ಮಾರಾಟ ಮಾಡಬೇಡಿ ಎಂದು ಹೇಳಿದ್ದೆವು. ಆದರೂ ನರೇಂದ್ರ ಮೋದಿ ವಿಮಾನ ಮಾರಾಟ ಮಾಡಿದರು. ನಮ್ಮ ವಿಮಾನ ಇದ್ದಿದ್ದರೆ ಇವತ್ತು ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಸದ್ಯ ನಾವು ಬಾಡಿಗೆ ತೆಗೆದುಕೊಳ್ಳುವ ದುಸ್ಥಿತಿ ಬಂದಿದೆ. ಮೋದಿ ದೇಶವನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನಾದರೂ ಮೋದಿಗೆ ದೇವರು ಸದ್ಭುದ್ಧಿ ಕೊಡಲಿ. ಉಳಿದಿರುವ ಎರಡು ವರ್ಷಗಳ ಅವಧಿಯಲ್ಲಿ ದೇಶವನ್ನು ಆರ್ಥಿಕತೆಗೆ ತೆಗೆದುಕೊಂಡು ಹೋಗಬೇಕು ಎಂದರು.

ವಿದೇಶಕ್ಕೆ ವಿದ್ಯಾರ್ಥಿಗಳು ಹೋಗಿರುವ ವಿಚಾರಕ್ಕೆ, ಅವನ್ಯಾವನೋ ಮಂತ್ರಿ ವಿದೇಶಕ್ಕೆ ಏಕೆ ಓದಲು ಹೋಗುತ್ತಿರಾ ಅಂತಾ ಹೇಳುತ್ತಾನೆ, ಅವನ ಹತ್ತಿರ ಹಣವಿದೆ ಕೊಡುತ್ತಾನೆ, ನಮ್ಮ ಹತ್ತಿರ ಹಣವಿಲ್ಲ ನಾವೆಲ್ಲಿ ಅಷ್ಟೊಂದು ಹಣ ಕೊಡೋಣ. ನನ್ನ ಮಗಳು ದುಬೈನಲ್ಲಿ ಓದುತ್ತಿದ್ದಾಳೆ. ನನಗೆ ಇಲ್ಲಿ ಎರಡು ಕೋಟಿ ರೂಪಾಯಿ ಕೊಡಲು ಸಾಧ್ಯವಿಲ್ಲ. ದುಬೈನಲ್ಲಿ ಕಡಿಮೆ ರೇಟ್‌ನಲ್ಲಿ ಸಿಕ್ಕಿದೆ. ಓದಲು ಹೋಗಿದ್ದಾಳೆ. ಅಲ್ಲಿಯೂ ಓದಲು ಹೋಗಬೇಡ ಅಂದ್ರೆ ಹೇಗೆ? ಎಂದು ಹೇಳಿದರು.

ಪ್ರಮೋದ್ ಮುತಾಲಿಕ್ ಜೀವನದಲ್ಲಿ ಮೊದಲ ಬಾರಿಗೆ ಒಂದೊಳ್ಳೆ ಮಾತು ಆಡಿದ್ದಾರೆ. ಕಾಲೇಜಿನವರು ದುಡ್ಡು ಹೊಡೆಯುತ್ತಿದ್ದಾರೆ ಅಂತಾ ಹೇಳಿದ್ದಾರೆ. ಅವರ ಹೇಳಿಕೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಇಬ್ರಾಹಿಂ ಉತ್ತರಿಸಿದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";