ತುಮಕೂರು: ಬುದ್ದಿಮಾಂಧ್ಯೆ ಯುವತಿ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಅಧಿಕಾರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 1 ಲಕ್ಷ ರೂ ದಂಡವನ್ನು ತುಮಕೂರಿನ ಜಿಲ್ಲಾ ಎರಡನೇ ಹೆಚ್ಚುವರಿ ಅಧಿಕ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
2017 ಜನವರಿ 15 ರಂದು ತುಮಕೂರಿನ ಮಹಿಳಾ ಠಾಣಾ ಎ.ಎಸ್.ಐ ಉಮೇಶಯ್ಯ ಬುದ್ದಿಮಾಂಧ್ಯೆ ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಸುಮಾರಿಗೆ ಯುವತಿಗೆ ಡ್ರಾಪ್ ಕೊಡೋ ನೆಪದಲ್ಲಿ ಖಾಸಗಿ ಬೊಲೆರೋ ವಾಹನದಲ್ಲಿ ಅತ್ಯಾಚಾರ ಎಸಗಿದ್ದನು. ಸತತ ಐದು ವರ್ಷಗಳ ವಾದ ಪ್ರತಿವಾದಗಳ ಬಳಿಕ ಜಿಲ್ಲಾ ನ್ಯಾಯಾಲಯದಲ್ಲಿ ಎಎಸ್.ಐ ಉಮೇಶಯ್ಯ ಅಪರಾಧಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಕೊಟ್ಟು ನ್ಯಾಯಾಧೀಶ ಎಚ್ ಎಸ್ ಮಲ್ಲಿಕಾರ್ಜುನ ಸ್ವಾಮಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ಸಂತ್ರಸ್ತೆ ಪರ ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: 2017 ಜನವರಿ 14 ಸಂಜೆಯ ವೇಳೆಗೆ ಸಂತ್ರಸ್ತೆ ನೃಪತುಂಗ ಬಡಾವಣೆಯ ಮನೆಯಿಂದ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಿಂದ ಬರುತ್ತಾಳೆ. ಚಿಕ್ಕಪೇಟೆಯ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ತಂಗುತ್ತಾಳೆ. ಅಲ್ಲಿಂದ ಪುನಃ ಮನೆಗೆ ಹೋಗಲು ದಾರಿ ಗೊತ್ತಾಗದೇ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಂತರಸನಹಳ್ಳಿ ಕಡೆಗೆ ನಡೆದುಕೊಂಡು ಹೋಗುತ್ತಿರುತ್ತಾಳೆ.
ಈ ವೇಳೆ ಕರ್ತವ್ಯ ನಿಮಿತ್ತ ಅಂತರಸನಹಳ್ಳಿ ಬಳಿ ಗಸ್ತು ತಿರುಗುತಿದ್ದ ಎ.ಎಸ್.ಐ ಉಮೇಶ್‍ನ ಕಣ್ಣಿಗೆ ಬೀಳುತ್ತಾಳೆ. ಯುವತಿಯನ್ನು ವಿಚಾರಿಸಿದಾಗ ತಾನು ದೇವಸ್ಥಾನಕ್ಕೆ ಬಂದಿದ್ದು, ಮನೆಗೆ ಹೋಗಲು ದಾರಿ ತಪ್ಪಿದ್ದೇನೆ ಎನ್ನುತ್ತಾಳೆ. ಸಿಕ್ಕಿದ್ದೇ ಚಾನ್ಸ್ ಅಂದು ಕೊಂಡ ಕಾಮುಕ ಉಮೇಶ್ ಕೊರಟಗೆರೆ ಕಡೆಯಿಂದ ಬರುತಿದ್ದ ಖಾಸಗಿ ಬೊಲೆರೋ ವಾಹನ ತಡೆದು ಅದರಲ್ಲಿ ಯುವತಿಗೆ ಮನೆಗೆ ಡ್ರಾಪ್ ಕೊಡಲು ಹೊರಡುತ್ತಾನೆ. ಈ ವೇಳೆ ತುಮಕೂರು ನಗರದಲ್ಲೆಲ್ಲಾ ಸುತ್ತಾಡಿಸುತ್ತ ಬೊಲೆರೋ ವಾಹನ ಚಾಲಕ ಪ್ರತಿರೋಧ ಒಡ್ಡಿದ್ದರೂ ಅದರಲ್ಲೇ ಅತ್ಯಾಚಾರ ಎಸಗುತ್ತಾನೆ. ಬಳಿಕ ಬೆಳಗಿನ ಜಾವ ಯುವತಿ ತಮ್ಮನಿಗೆ ಕಾಲ್ ಮಾಡಿ ಅಕ್ಕನನ್ನು ಕರೆದುಕೊಂಡು ಹೋಗುವಂತೆ ತಾಕೀತು ಮಾಡುತ್ತಾನೆ. ಯುವತಿ ಮನೆಗೆ ಹೋದ ನಂತರ ನಡೆದ ಘಟನೆಯನ್ನು ಮನೆಯವರಿಗೆ ಹೇಳಿದ್ದಳು.