ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ಈ ಶತಮಾನದ ಆರಂಭಕ್ಕಾಗಲೇ ಭಾರತದಾದ್ಯಂತ ಸಂಚಿರಿಸಿ ಸ್ವದೇಶಿ ಆಂದೋಲನದ ದಿಟ್ಟಿ ಹರಿಕಾರನಾಗಿ ಜನಸಾಮಾನ್ಯರ ಮನಸ್ಸನ್ನು ಗಾಢವಾಗಿ ತಟ್ಟಿ ಗಂಭೀರ ಚಿಂತನೆಗೆ ತೊಡಗಿಸಿದ್ದ ರಾಜೀವ ದಿಕ್ಷೀತ ಅಸ್ಖಲಿತ ಮಾತುಗಾರರಾಗಿದ್ದರು, ಸಂಯಮತೆ ಕಟ್ಟಾಚಾರಗಳಿಗೆ ಬದ್ಧರಾಗಿ ಪ್ರಾಮಾಣಿಕ ಮನಸ್ಕರಾಗಿ ಭಾರತದ ಸಾಮಾಜಿಕ ಆರ್ಥಿಕ ಬದುಕಿನಲ್ಲಿ ಕ್ರಾಂತಿಯನ್ನು ಮಾಡಿದ ಶ್ರೇಯಸ್ಸು ಅವರದ್ದು. ಆಜಾದಿ ಬಚಾವೋ ಆಂದೋಲನ, ಭಾರತ ಸ್ವಾಭಿಮಾನ ಆಂದೋಲನಗಳನ್ನು ವ್ಯಾಪಕವಾಗಿ ರೂಪಿಸಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಸಾಹತುವಾದಿತ್ವದ ಕರಿ ಛಾಯೆಯನ್ನು ಅಳಿಸಿದ ಅಪ್ಪಟ ಸಾಧಕರವರು. ಸುದೀರ್ಘ ಅವಧಿಯ ದಾಸ್ಯತ್ವದ ನಮ್ಮ ದೃಷ್ಟಿಕೋನದಲ್ಲಿ ಮಾರ್ಪಾಡುಮಾಡಿ ಭಾರತೀಯತ್ವದ ನಮ್ಮ ಮೂಲ ಬೇರುಗಳ ಶೋಧನೆಯಲ್ಲಿ ತೊಡಗುವಂತೆಮಾಡಿದ ದಿಟ್ಟ ಹೋರಾಟಗಾರ, ನೈಜಭಾರತೀಯತ್ವದ ಅಪ್ಪಟ ಪ್ರತಿಪಾದಕ, ಅಂತೆಯೇ ಸುಭಕ್ಷು-ಸ್ವಾಭಿಮಾನಿ ಭಾರತ ರಾಷ್ಟ್ರದ ನಿರ್ಮಾಣದ ಕನಸಿಗರವರು.
ರಾಜೀವ ದಿಕ್ಷೀತ್ ಜನಸಿದ್ದೂ, ಸಾವನಪ್ಪಿದ್ದೂ ನವೆಂಬರ್ 30 ರಂದೇ ಅವರ ಜಯಂತ್ಯುತ್ಸವ-ಪುಣ್ಯತಿಥಿಗಳೆರೆಡನ್ನೂ ಏಕಕಾಲಕ್ಕೆ ಆಚರಿಸುವಂತಾಗಿರುದು ಒಂದು ಸುಯೋಗವೇ ಸರಿ. ಈ ಕ್ರಾಂತಿಕಾರಿ ದಾರ್ಶಿನಿಕ ಹೋರಾಟಗಾರನ ಜಯಂತ್ಯುತ್ಸವ ಪ್ರೇರಣೆಯ ಬುಗ್ಗೆಯಾದರೆ ಪುಣ್ಯತಿಥಿಯಾಚರಣೆ ಅವರ ಸಾಧನೆಗಳಿಗಾಗಿ ಶೃದ್ಧಾಪೂರ್ಣ ಭಾವದ ಕೃತಜ್ಞತೆಗಳ ಅರ್ಪಣೆಗೆ ಮೀಸಲು.
ರಾಜೀವ ದಿಕ್ಷೀತರು ಉತ್ತರಪ್ರದೇಶದ ರಾಜ್ಯದ ಅಲಿಘರದಲ್ಲಿ 1967 ರ ನವೆಂಬರ್ 30 ರಂದು ಜನಿಸಿದರು. ತಂದೆ ರಾದೇಶ್ಯಾಮ ದಿಕ್ಷೀತರು ರಾಜೀವಗೆ ಉತ್ತಮ ಸಂಸ್ಕಾರ ನೀಡಿ ಅಪ್ಪಟ ಭಾರತೀಯನನ್ನಾಗಿ ರೂಪಿಸಿದರು. ಇಲಹಾಬಾದ್ ದ ನ್ಯಾಶನಲ್ ಇನ್ ಸ್ವಿಟ್ಯೂಟ್ ಆಫ್ ಟೆಕ್ನಾಲಿಜಿಯಲ್ಲಿ ಬಿ.ಟೆಕ್ ಪದವಿಧರರಾದರು ಅನಂತರ ಕಾನಪೂರದಲ್ಲಿ ಇಂಡಿಯನ್ ಇನ್ ಸ್ವಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ ಎಮ್.ಟೆಕ್ ಪದವಿ ಪಡೆದರು. ಫ್ರಾನ್ಸ್ದಲ್ಲಿ ಟೆಲೆಕಮ್ಯೂನಿಕೇಶನ್ ಕ್ಷೇತ್ರದಲ್ಲಿ ವಿಜ್ಞಾನಿಯಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅಲ್ಲಿಯೇ ಡಾಕ್ಟರೇಟ್ ಪದವಿ ಸಂಪಾದಿಸಿದರು. ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ ಸಂಸ್ಥೆಯಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ರೊಂದಿಗೆ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು.
ಓದು ಬರಹದಲ್ಲಿ ಅಪಾರ ಆಸಕ್ತಿಯನ್ನುಳ್ಳ ರಾಜೀವ ಗಂಭೀರ ಚಿಂತಕರಾಗಿದ್ದರು ಸ್ವಾತಂತ್ರೋತ್ತರ ಕಾಲದಲ್ಲಿ ರಾಜಕೀಯ ರಂಗ ಕಲುಷಿತ ಗೊಳ್ಳುತ್ತಿರುವುದನ್ನು ಗಮನಿಸಿದ ದೇಶದ ಶೇಕಡಾ 80 ರಷ್ಟು ಜನಸಾಮಾನ್ಯರನ್ನು ರಾಜಕಾರಣಿಗಳು ಹಾಗೂ ಆಡಳಿತಾಧಿಕಾರಿಗಳು ಶೋಷಿಸುತ್ತಿರುವದನ್ನು, ದಾರಿತಪ್ಪಿಸುತ್ತಿರುವುದನ್ನು ಕಂಡು, ತಮ್ಮ ವೃತ್ತಿಗೆ ತೀಲಾಂಜಲಿ ನೀಡಿ ಸಾಮಾಜಿಕ ಆಂದೋಲನಗಳನ್ನು ಸಂಘಟಿಸಿ ಪ್ರಚರಿಸುವ ಕಾರ್ಯದಲ್ಲಿ ತೊಡಗಿದರು.
ಭಾರತದ ಆರ್ಥಿಕ ಸಬಲೀಕರಣಕ್ಕೆ ಸ್ವದೇಶಿ ವಸ್ತುಗಳ ಬಳಕೆ ಮಾಡುವ ಅಗತ್ಯವನ್ನು ಸಾರಿ ಹೇಳಿದರು. ಸ್ವದೇಶಿ ಆಂದೋಲನಕ್ಕೆ ಕಳೆಕಟ್ಟಿಸಿ ಜನಮನದಲ್ಲಿ ದೃಷ್ಟಿಕೋನದ ಮಾರ್ಪಾಡು ಮಾಡಿದರು. ಭಾರತದ ಪ್ರಾಚೀನ ಇತಿಹಾಸದ ಮಾಹತಿಯನ್ನು, ಮೇಲ್ಮೇಯನ್ನು ಸಾರಿ ಹೇಳಿದರು. ನಮ್ಮತನದ ಬಗೆಗೆ ನಮ್ಮ ಮನಸ್ಸಿನಲ್ಲಿ ಹೆಮ್ಮೆಯ ಭಾವವನ್ನು ತುಂಬಿದರು. ಭಾರತದ ಆರ್ಥಿಕ ನೀತಿಗಳಲ್ಲಿಯ ದೋಷಗಳನ್ನು ಜನಸಾಮಾನ್ಯರ ಗಮನಕ್ಕೆ ತಂದು ಸಬಲ ಆರ್ಥಿಕ ನೀತಿ ನಿರೂಪಣೆಯತ್ತ ಜನಾಭಿಪ್ರಾಯವನ್ನು ರೂಪಿಸಿದರು.
ಭಾರತೀಯತ್ವದ ಪ್ರಬಲ ಪ್ರತಿಪಾದಿಯಾಗಿ ಹೊಸ ರಾಷ್ಟ್ರ ನಿರ್ಮಾಣದ ಅಮೋಘ ಸಂಕಲ್ಪದ ಕನಸಿಗರಾಗಿ, ಹರಿಕಾರರಾಗಿ ಅದೇ ಪ್ರಚಾರ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಹಾಗಾಗಿ ವಿವಾಹ ಮಾಡಿಕೊಳ್ಳದೇ ಅಪ್ಪಟ ಬ್ರಹ್ಮಚಾರಿಯಾಗಿ ಉಳಿದುಕೊಂಡರು. ದಯಾನಂದ ಸರಸ್ವತಿ, ಚಂದ್ರಶೇಖರ ಆಜಾದ, ಭಗತಸಿಂಗ್, ಉಧಮಸಿಂಗ್ ಮೊದಲಾದ ಕ್ರಾಂತಿಕಾರರ ವಿಚಾರಗಳಿಂದ ಪ್ರೇರಿತರಾದ ರಾಜೀವ ದಿಕ್ಷೀತ್ ನವಭಾರತ ನಿರ್ಮಾಣದ ವಿಶಿಷ್ಟ ಕ್ರಾಂತಿಕಾರಿಯಾಗಿ ಮಾರ್ಪಟ್ಟರು. ಮಧ್ಯಪಾನ, ಗುಟಕಾ ಸೇವನೆಯ ವಿರುದ್ಧ ಹಾಗೂ ಗೋಮಾಂಸ ಭಕ್ಷಣೆ ಹಾಗೂ ಸಾಮಾಜಿಕ ಅಸಮತೆ ಅನ್ಯಾಯಗಳ ವಿರುದ್ಧ ಸಮರ ಸಾರಿದರು. ಜನೇವರಿ 9, 2009 ರಂದು ಭಾರತ ಸ್ವಾಭಿಮಾನ ಆಂದೋಲನದ ಸಂಸ್ಥಾಪಕರಲ್ಲೋರ್ವರಾದರು ರಾಷ್ಟ್ರದ ತೆರಿಗೆ ವ್ಯವಸ್ಥೆಯಲ್ಲಿ ವಿಕೇಂದ್ರಿಕರಣದ ನೀತಿಗೆ ಒತ್ತಾಯಿಸಿದರು. ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಪರಿವರ್ತನೆಗೆ ಆಗ್ರಹಿಸಿದರು.
ರಾಜೀವ ದಿಕ್ಷೀತರು ದೂರ ದೃಷ್ಟಿಯನ್ನುಳ್ಳ ಪ್ರತಿಭಾ ಸಂಪನ್ನ ಅರ್ಥಶಾಸ್ತ್ರಿಕ ಚಿಂತಕರಾಗಿದ್ದರು. ಜಾಗತೀಕರಣದ ಪ್ರಸಕ್ತ ಸನ್ನಿವೇಶದಲ್ಲಿ ಭಾರತ ತನ್ನ ವಿಶಿಷ್ಟ ಸಂಪನ್ಮೂಲಗಳನ್ನು ಅರ್ಥವತ್ತಾಗಿ ಬಳಸಿಕೊಳ್ಳುವ ಬಗೆಗೆ ಅವರು ತಮ್ಮದೆ ಆದ ಸಿದ್ಧಾಂತ ಅನ್ವಯಿಕೆ ಕ್ರಮಗಳ ಬಗೆಗೆ ಕಿರುಗ್ರಂಥವನ್ನು ರಚಿಸಿದ್ದಾರೆ. ರಾಜೀವ ಅವರ ಈ ವಿಚಾರಧಾರೆಗಳನ್ನು ಇಂದು ದೇಶದ ಎಲ್ಲೆಡೆಗಳಲ್ಲಿ ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರು, ವಾಣಿಜ್ಯೋದ್ಯಮ ಕ್ಷೇತ್ರದ ಮೇಧಾವಿಗಳು ಹಾಗೂ ಮುತ್ಸದ್ಧಿ ರಾಜಕೀಯ ನಾಯಕರು ಚರ್ಚಿಸುತ್ತಿರುವುದು ಒಂದು ಮಹತ್ವದ ಬೆಳವಣಿಗೆಯಾಗಿದೆ. ಸಬಲ, ಸಮೃದ್ಧ, ಸುಂದರ-ಸುಖಿ ಭಾರತದ ರಾಜೀವ ಅವರ ಕನಸು ನನಸಾಗುವ ಸನ್ನಿವೇಶ ರೂಪುಗೊಳ್ಳುತ್ತಿರುವದು ನಮಗೆಲ್ಲ ಹೆಮ್ಮೆಯ ಸಂಗತಿ.
ಇಂತಹ ಓರ್ವ ಅಪರೂಪದದ ಕ್ರಾಂತಿಯ ಹರಿಕಾರ ತಮ್ಮ 43 ನೇ ವಯಸ್ಸಿನಲ್ಲಿಯೇ ತೀರಿಹೋದದ್ದು (30 ನವೇಂಬರ 2010) ದುರ್ದೈವದ ಸಂಗತಿ ಛತ್ತಿಸಗಡದಲ್ಲಿ ಭಾಷಣಕ್ಕೆಂದು ಹೋದ ಸಂದರ್ಭದಲ್ಲಿ ನಿಗೂಢವಾಗಿ ಸಂಭವಿಸಿದ ಅವರ ಸಾವು ಕೂಡ ಅನೇಕ ಸಂದೇಹಗಳನ್ನುಂಟುಮಾಡಿದೆ.
ರಾಜೀವ ದಿಕ್ಷೀತರ ದಿಟ್ಟ ವ್ಯಕ್ತಿತ್ವ, ಅಮೋಘ ಸಾಧನೆ. ಅವರು ತುಳಿದ ಕ್ರಾಂತಿಪಥ ನಮಗೆಲ್ಲ ಒಂದು ಅನುಪಮ ಮಾದರಿ. ಭವ್ಯಭಾರತ ನಿರ್ಮಾಣದಲ್ಲಿ ಅವರ ಅಚಲ ಸಂಕಲ್ಪ-ನಂಬಿಕೆ ನಮಗೆ ಸ್ಪೂರ್ತಿಯ ಸೆಲೆ .ಈ ಮಹಾನ್ ಚೇತನಕೆ ನಮ್ಮ ಶ್ರದ್ಧಾಪೂರ್ವಕ ನಮನಗಳು