ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ (46) ಶುಕ್ರವಾರ ಇಹಲೋಕ ತೇಜಿಸಿದ್ದಾರೆ.
ಇಂದು ಮುಂಜಾನೆ ಜಿಮ್ ಮಾಡುವಾಗ ಅಸ್ವಸ್ಥರಾಗಿದ್ದ ಪುನೀತ್ ರಾಜ್ ಕುಮಾರ್ ಅವರನ್ನು ರಮಣಶ್ರೀ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಪರಿಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರ ನಿರಂತರ ಪ್ರಯತ್ನದ ಮಧ್ಯೆಯೂ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ.
ಇಂದು ಸಹೋದರ ಶಿವರಾಜ್ ಕುಮಾರ್ ಅವರ “ಭಜರಂಗಿ 2” ಚಿತ್ರ ಬಿಡುಗಡೆಯಾಗಿದ್ದು, ಅವರ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಮುಗಿಬಿದ್ದ ಸುದ್ದಿ ತಿಳಿದು ಅವರು ಹರ್ಷಗೊಂಡಿದ್ದರೆಂದು ಹೇಳಲಾಗಿದೆ. ಜೊತೆಗೆ ಶಿವರಾಜಕುಮಾರ್ ಸೇರಿದಂತೆ ‘ಭಜರಂಗಿ 2’ ಚಿತ್ರತಂಡವನ್ನು ಅಭಿನಂದಿಸಲು ಮುಂದಾಗಿದ್ದರೆನ್ನಲಾಗಿದೆ. ಇದರ ಮಧ್ಯೆ ಶಿವರಾಜಕುಮಾರ್ ಸೇರಿದಂತೆ ಬಹುತೇಕ ಕುಟುಂಬ ಸದಸ್ಯರು “ಭಜರಂಗಿ 2” ಚಿತ್ರವನ್ನು ಪ್ರೇಕ್ಷಕರ ಜೊತೆಯಲ್ಲ ವೀಕ್ಷಿಸಿದ್ದರು. ಈ ವೇಳೆ ಪುನೀತ್ ಅನಾರೋಗ್ಯದ ಸುದ್ದಿ ತಿಳಿದು ಎಲ್ಲರೂ ಆಸ್ಪತ್ರೆಗೆ ದೌಡಾಯಿಸಿ ಬಂದಿದ್ದರು.
ವೈದ್ಯರು ಪುನೀತ್ ರಾಜಕುಮಾರ್ ಅವರನ್ನು ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಿದರಾದರೂ ಯಾವುದೇ ತರಹದ ಪ್ರಯೋಜನವಾಗಲಿಲ್ಲ. ಪುನೀತ್ ರಾಜ್ ಕುಮಾರ್ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ್ದ ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯಾತಿಗಣ್ಯರು ಅಭಿಮಾನಿಗಳು ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಲಾದರೂ ದಯಾಘನನಾದ ಭಗವಂತ ದಯೆ ತೋರಿಸಲಿಲ್ಲ.
ಅಪ್ಪ ಡಾ ರಾಜಕುಮಾರ್ ಅವರ ಹಾದಿಯಲ್ಲೇ ಮಗ ಯುವರತ್ನ ಪುನಿತ್ ರಾಜ್ ಕುಮಾರ್ ಸಹ ನೇತ್ರದಾನ ಮಾಡಿ ಮಾನವಿಯತೆ ಮೆರೆದಿದ್ದಾರೆ
ಬೆಟ್ಟದ ಹೂವು ಖ್ಯಾತಿಯ ಪುನೀತ್ ರಾಜಕುಮಾರ್ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಎಸ್ ಎಮ್ ಕೃಷ್ಣ, ಎಚ್ಡಿ ಕುಮಾರ್ ಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಂದ್ರ ಸಚಿವೆ ನಿರ್ಮಲಾ ಸೀತಾರಾಮನ ಸೇರಿದಂತೆ ಹಲವು ಗಣ್ಯರು ಮತ್ತು ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್, ವಿನಯ್ ಕುಮಾರ್ ಹಾಗೂ ಚಿತ್ರ ನಟರಾದ ಅಲ್ಲು ಅರ್ಜುನ್, ರಮ್ಯಾ, ಶೃತಿ, ದರ್ಶನ, ಯಶ್, ಸೃಜನ್ ಲೋಕೇಶ್, ಶ್ರೀನಾಥ್, ವಿಜಯ್ ರಾಘವೇಂದ್ರ ಸೇರಿದಂತೆ ಇನ್ನೂ ಹಲವರು ಆಸ್ಪತ್ರೆಗೆ ಆಗಮಿಸಿ ಸಂತಾಪ ಸೂಚಿಸಿದರು.
ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಂಜೆ 5 ರಿಂದ ನಾಳೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ಪುನಿತ್ ರಾಜ್ ಕುಮಾರ್ ಅಭಿಮಾನಿಗಳು ಯಾವುದೇ ತರಹದ ಗಲಾಟೆ ನೂಕುನುಗ್ಗಲು ಮಾಡದೆ ಶಾಂತಿ ರೀತಿಯಿಂದ ವರ್ತಿಸಿ ಅಂತಿಮ ದರ್ಶನ ಪಡೆಯಬೇಕು. ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಆರ್ ಅಶೋಕ್ ತಿಳಿಸಿದ್ದಾರೆ.