ಬೆಂಗಳೂರು: ಟೋಯಿಂಗ್ ಪದ್ಧತಿಯಲ್ಲಿ ಸರಳೀಕೃತ ವ್ಯವಸ್ಥೆ ಜಾರಿ ಮಾಡುವವರೆಗೂ ವಾಹನಗಳ ಟೋಯಿಂಗ್ ಮಾಡುವುದುನ್ನು ಸರ್ಕಾರ ತಾತ್ಕಾಲಿಕವಾಗಿ ರದ್ದು ಮಾಡಿದ್ದು, ಇದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ನೆಟ್ಟಿಗರಿಂದ ಒಂದೊಳ್ಳೆ ನಿರ್ಧಾರ ಎಂಬ ಒಕ್ಕೊರಳಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಟೋಯಿಂಗ್ ವ್ಯವಸ್ಥೆಯಿಂದ ಇಷ್ಟು ದಿನ ಜನ ನರಳಿದ್ದು ಈಗಲಾದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿರುವುದಕ್ಕೆ ಜನ ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಟೋಯಿಂಗ್_ರದ್ದು ಎಂಬ ಹ್ಯಾಶ್ಟ್ಯಾಗ್ ಅಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ಟೋಯಿಂಗ್_ರದ್ದು ನಾನು ಬೆಂಗಳೂರಿನಲ್ಲಿ ೧೫ ವರ್ಷಗಳ ಕಾಲ ಇದ್ದ ಕಾರಣ , ನಾನು ನೋಡಿದ ವಿದ್ಯಾವಂತರ ಅನಾಗರಿಕತೆಯನ್ನ ನೋಡಿದ್ದೇನೆ ಅಂಗಡಿ ಗಳು ಅನತಿ ದೂರದಲ್ಲಿದ್ದರೂ ಕೆಲವು ಶೋಕಿಲಾಲರು ಒಂದು ಸಾಮಾನು ತರಲು ಬೈಕ ತೆಗೆದುಕೊಂಡು ಹೋಗುತ್ತಾರೆ ವಾಹನ ದಟ್ಟಣೆ ಸಮಸ್ಯೆಯ ಜೊತೆಗೆ ಇಂಧನಗಳನ್ನು ವ್ಯಯ ಮಾಡುತ್ತಾರೆ . ಸರ್ಕಾರ ಎಲ್ಲ ಸಮಸ್ಯಗಳಿಗೂ ಪರಿಹಾರ ಹುಡುಕಿಕೊಂಡು ಕೂರುವುದರ ಬದಲು ಜನಗಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಮತ್ತು ರಾಷ್ಟೀಯ ಸಂಪತ್ತಿನ ಬಗ್ಗೆ ಅರಿವು ಮೂಡಿಸಬೇಕು’ ಎಂದು ಉಷಾ ಪ್ರಸಾದ್ ಹೇಳಿದ್ದಾರೆ.