ಹುಬ್ಬಳ್ಳಿ, ಡಿ 31: ರಾಜ್ಯದಲ್ಲಿ ಎಂ.ಇ.ಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ಶಾಸಕರಾದ ಅಭಯ್ ಪಾಟೀಲ್, ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್‍ಕರ್, ಸಚಿವೆ ಶಶಿಕಲಾ ಜೊಲ್ಲೆ ಅವರ ಭಾವಚಿತ್ರವನ್ನು ಹರಾಜುಮಾಡಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಈರಪ್ಪ ಮಾತನಾಡಿ ಎಂ.ಇ.ಎಸ್ ನಿಷೇಧ ಮಾಡಬೇಕು ಹಾಗೂ ಶಿವಸೇನೆ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರಹೊರಾಟ ಮಾಡುವುದಾಗಿ ಎಚ್ಚರಿಸಿದರು.
ಗಡಿ ನಾಡಿನಲ್ಲಿ ಕನ್ನಡ ಧ್ವಜ ಸುಟ್ಟುಹಾಕಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಎಂ.ಇ.ಎಸ್ ಪುಂಡರು ಅಪಮಾನ ಎಸಗಿದ್ದು ಖಂಡನೀಯವಾಗಿದೆ. ಈ ಘಟನೆಗೆ ಸಂಭಂದಿಸಿದಂತೆ ಪುಂಡರ ಮೇಲೆ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅಲ್ಲದೆ ಈ ಘಟನೆ ಹಿಂದೆ ಯಾರ ಕೈವಾಡ ಇದೆ ಎಂಬುವುದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ಮಂಜುನಾಥ ಲೂತಿಮಠ್, ಆನಂದ ದಲಭಂಜನ್, ಕುಬೇರ ಪವಾರ, ಶೇಖರಯ್ಯ ಮಠಪತಿ, ದೇವೇಂದ್ರಪ್ಪ ಇಟ್ಟಗಿ, ಪ್ರಕಾಶ ನಾಯ್ಕ್, ಸುರೇಶ ನಾರಾಯಣಕರ್ ಮತ್ತಿತರರು ಉಪಸ್ಥಿತರಿದ್ದರು.