ವಿಜಯಪುರ: ಮುಸ್ಲಿಮರ 2ಬಿ ಮೀಸಲಾತಿ ತೆಗೆದುಹಾಕಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ. ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಹಾಗೂ 2ಬಿ ಎರಡೆರೆಡು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. 2ಬಿ ಮೀಸಲಾತಿಯಿಂದ ತೆಗೆದುಹಾಕಲು ತಯಾರಿ ನಡೆದಿದೆ ಎಂದು ಯತ್ನಾಳ್ ಒಂದು ಸಮುದಾಯಕ್ಕೆ ಒಂದೇ ಮೀಸಲಾತಿ ಎನ್ನುವುದು ತಮ್ಮ ವಾದ ಎಂದು ಪ್ರತಿಪಾದಿಸಿದ್ದಾರೆ.
ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಾವು ಕೂಡ ಪುನರ್ ಪರಿಶೀಲನೆಗೆ ಸಿಎಂ ಅವರಿಗೆ ಹೇಳಿದ್ದೇವೆ ಎಂದ ಅವರು, ಎರಡು ಕಡೆಗಳಲ್ಲಿ ಲಾಭ ಪಡೆಯುತ್ತಿರೋದನ್ನು ತೆಗೆದು ಉಳಿದ ಹಿಂದೂಳಿದವರಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಎಚ್ಚರಿಸಿದರು. ಸಿಎಂ ಜೊತೆಗೆ ಚರ್ಚೆಯಾಗಿದೆ. ಪರಿವಾರದಿಂದಲೂ ಚರ್ಚೆ ಆಗಿದೆ. ಒಂದು ಸಮುದಾಯ ಎರಡು ಕಡೆಗಳಲ್ಲಿ ಲಾಭ ಪಡೆಯೋದನ್ನು ತಡೆಯಬೇಕು ಎಂದು ಹೇಳಿದರು.
ದೇಶ ವಿರೋಧಿ ಚಟುವಟಿಕೆ ಮಾಡ್ತಾರೆ, ಎರಡು ಕಡೆ ಲಾಭ ಪಡೆಯುತ್ತಾರೆ. ಅಂತವರ ಎಲ್ಲ ಮೀಸಲಾತಿ ಸೌಲಭ್ಯ ರದ್ದು ಪಡಿಸಬೇಕು ಎಂದು ಗುಡುಗಿದರು. ಆದಷ್ಟು ಬೇಗನೆ ಸರ್ಕಾರ ಕ್ರಮ ವಹಿಸಲಿದೆ ಎಂದು ಯತ್ನಾಳ್ ನೇರವಾಗಿ ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಬ್ರಾಹ್ಮಣರು ನಿಜವಾದ ಅಲ್ಪಸಂಖ್ಯಾತರು: ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಮೀಸಲಾತಿ ಬಗ್ಗೆ ಯತ್ನಾಳ್ ಮತ್ತೊಮ್ಮೆ ಧ್ವನಿ ಎತ್ತಿದರು. ಬ್ರಾಹ್ಮಣರು ಅಲ್ಪಸಂಖ್ಯಾತರು, ಬ್ರಾಹ್ಮಣರು ಕೇವಲ ಶೇಕಡಾ 2 ರಿಂದ 3 ರಷ್ಟಿದ್ದಾರೆ. ನಿಜವಾದ ಅಲ್ಪ ಸಂಖ್ಯಾತರು ಬ್ರಾಹ್ಮಣರು ಎಂದರು.
ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನು ಸೇರಿಸಬೇಕು. ಇದು ನನ್ನ ವಾದವಾಗಿದೆ. ಮುಸ್ಲಿಮರು ಅಲ್ಪಸಂಖ್ಯಾತರು ಅಲ್ಲವೇ ಅಲ್ಲ ಎಂದ ಅವರು ಒಂದು ಜನಾಂಗದಷ್ಟಿರುವ ಮುಸ್ಲಿಂರು ಹೇಗೆ ಅಲ್ಪಸಂಖ್ಯಾತರಾಗ್ತಾರೆ? ಎಂದು ಪ್ರಶ್ನಿಸಿದರು.
ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಲಿ: ದೇಶದ್ರೋಹಿ ಕೆಲಸ ಮಾಡೋದು, ಪಾಕಿಸ್ತಾನದ ಪರ ಮಾತನಾಡೋದು ಈಗ ಮೀಸಲಾತಿ ಬೇಕು ಎಂದರೆ ಹೇಗೆ? ಎಂದು ಮುಸ್ಲಿಂ ಸಮುದಾಯದ ವಿರುದ್ಧ ಮತ್ತೊಮ್ಮೆ ಬೆಂಕಿ ಉಗುಳಿದರು. ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಲಿ, ಸೌಲಭ್ಯಕ್ಕಾಗಿ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಯತ್ನಾಳ್ ಗುಡುಗಿದರು.
(Etv)