ಸ್ವಾಮೀಜಿಗಳು ಮದುವೆಯಾಗಿ, ಮಠ ನಡಸುವುದು ಸೂಕ್ತ.: ಪ್ರಣವಾನಂದ ಸ್ವಾಮೀಜಿ

ದಾವಣಗೆರೆ: ಕಾಮ, ಕ್ರೋಧ, ಮದ, ಮಾತ್ಸರ್ಯವನ್ನು ಗೆದ್ದುಬರುವ ಸ್ವಾಮೀಜಿಗಳು ಸನ್ಯಾಸಿಯಾಗಿಯೇ ಮಠ ನಡೆಸಲಿ, ಆದರೆ ಅವುಗಳನ್ನು ಗೆಲ್ಲಲಾಗದವರು ಮದುವೆಯಾಗಿ ಮಠ ನಡೆಸುವುದೇ ಸೂಕ್ತ’ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಈ ದೇಶದಲ್ಲಿ ಸನಾತನ ಹಿಂದೂ ಧರ್ಮದಲ್ಲಿ ಸಪ್ತಋಷಿಗಳು, ವೇದವ್ಯಾಸರು, ಬಸವಣ್ಣನವರೂ ಮದುವೆಯಾಗಿ ಆಶ್ರಮ ನಡೆಸಿದ್ದಾರೆ. ಈ ಆಧುನಿಕ ಕಾಲದಲ್ಲಿಯೂ ಸ್ವಾಮೀಜಿಗಳು ಮದುವೆಯಾಗಿ, ಮಠ ನಡಸುವುದು ಸೂಕ್ತ. ಅದಕ್ಕೆ ಉದಾಹರಣೆ ನಾನೇ. ನಮ್ಮ ಪರಂಪರೆ ಪ್ರಕಾರ ಮದುವೆಯಾಗಿದ್ದೇನೆ. ಒಂದು ಕಡೆ ಸಂಸಾರವೂ ಇಲ್ಲ. ಸನ್ಯಾಸವೂ ಇಲ್ಲದಂತೆ ಅಪಮಾನವಾಗುವುದಕ್ಕಿಂತ ಮದುವೆ ಅವಶ್ಯಕ’ ಎಂದು ಇತ್ತೀಚಿನ ಬೆಳವಣಿಗೆ ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇದು ಕಲಿಯುಗ. ಸ್ವಾಮೀಜಿಗಳ ಭಕ್ತರೂ ಅವರ ಗುರುಗಳ ಮನವೊಲಿಸಿ, ಸಾಂಸಾರಿಕ ಪರಂಪರೆಗೆ ಹೋಗುವ ಹಾಗೆ ಮಾಡಿದ್ದಲ್ಲಿ ಸನಾತನ ಸಂಸ್ಕೃತಿ ಉಳಿಯುತ್ತದೆ’ ಎಂದು ಹೇಳಿದರು.

‘ನಾರಾಯಣಗುರುಗಳಿಗೂ ಮದುವೆ ಮಾಡಲು ತೀರ್ಮಾನಿಸಲಾಗಿತ್ತು. ಅವರಿಗೆ ವಿಷಯ ಗೊತ್ತಾಗಿ ಮನೆ ಬಿಟ್ಟು ಹೋಗಿದ್ದರು. ನಮ್ಮಲ್ಲಿ 8 ಜನ ಸ್ವಾಮೀಜಿಗಳಲ್ಲಿ 3 ಜನರು ಗೃಹಸ್ಥರಾಗಿದ್ದಾರೆ. ಈ ಶರೀರ 9 ದ್ವಾರಗಳಿಂದ ಕೂಡಿದ್ದು, ನಿರಂತರ ಪ್ರಕ್ರಿಯೆ ಆಗಬೇಕು. 2 ಲಕ್ಷದ ಮೊಬೈಲ್ ಹಿಡಿದುಕೊಂಡು ಬ್ರಹ್ಮಚರ್ಯ ಪಾಲಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

ಆಕ್ಷೇಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದದಲ್ಲಿ ನಾರಾಯಣ ಗುರುಗಳ ಜಯಂತಿ ಆಚರಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

‘ಪಕ್ಷದ ಕಾರ್ಯಕ್ರಮದಲ್ಲಿ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿರುವುದು ಖಂಡನೀಯ. ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಕಡೆ ಜಿಲ್ಲಾಧಿಕಾರಿಗಳೇ ಭಾಗವಹಿಸಿಲ್ಲ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಗೈರು ಹಾಜರಾಗಿದ್ದರು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";