ಸುದ್ದಿ ಸದ್ದು ನ್ಯೂಸ್
ಬೆಂಗಳೂರು: ಕಳೆದ ನೂರು ವರ್ಷಗಳ ವರೆಗೂ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷ ನೇರವಾಗಿ ಹಸ್ತಕ್ಷೇಪ ಮಾಡಿರಲಿಲ್ಲ.ಈ ಬಾರಿ ಬಿಜೆಪಿ ಸಾಂಸ್ಕೃತಿಕ ಕ್ಷೇತ್ರವಾದ ಕನ್ನಡ ಸಾಹಿತ್ಯ ಪರಿಷತ್ತ ಮೇಲೆ ಆಕ್ರಮಣ ಮಾಡುವ ಮುಖಾಂತರ ಎಲ್ಲವನ್ನೂ ಹಾಳು ಮಾಡಲು ಹೊರಟಿದೆ ಎಂದು ಹಿರಿಯ ಸಾಹಿತಿಗಳು ಮತ್ತು ಖ್ಯಾತ ಲೇಖಕರು ಆಕ್ಷೇಪಿಸಿದ್ದಾರೆ.
ಈ ಸಂಬಂಧ ಇತ್ತೀಚೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ||ವಿಜಯಾ, ಡಾ||ವಸುಂಧರಾ ಭೂಪತಿ, ಡಾ||ಕೆ.ಷರೀಫಾ, ಡಾ||.ದಿವಾಕರ, ಡಾ||ಬಂಜಗೆರೆ ಜಯಪ್ರಕಾಶ್, ವಿಮಲಾ.ಕೆ.ಎಸ್, ನೀಲಾ.ಕೆ., ಟಿ.ಸುರೇಂದ್ರ ರಾವ್ ಸೇರಿದಂತೆ ಇನ್ನೂ ಅನೇಕರು ರಾಜಕೀಯ ಪಕ್ಷಗಳ ನೇರ ಭಾಗವಹಿಸುವಿಕೆಯನ್ನು ವಿರೋಧಿಸೋಣ ಎಂದು ಕನ್ನಡ ಮನಸ್ಸುಗಳಿಗೆ ಮನವಿ ಮಾಡಿದ್ದಾರೆ.
ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಸಮಾನ ಅವಕಾಶದೊಂದಿಗೆ ಸಮಸ್ತ ಜನ ಸಮುದಾಯಗಳನ್ನು ಒಳಗೊಂಡು ಯಾವುದೇ ಭೇದ ಭಾವ ಇಲ್ಲದೇ ಕೆಲಸ ಮಾಡುತ್ತಿರುವ ಕಸಾಪ, ಸಮಾಜಮುಖಿ ಕನ್ನಡ ಸಾಹಿತ್ಯದ ಪರಂಪರೆಯನ್ನು ನೂರಾರು ವರ್ಷಗಳಿಂದ ಪೋಷಿಸುತ್ತ ಬಂದಿದೆ. ಇಂತಹ ಹೊತ್ತಿನಲ್ಲಿ ಕಸಾಪ ಚುನಾವಣೆಯಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ನೇರ ಪ್ರವೇಶ ಸಾಹಿತಿಗಳಲ್ಲಿ, ಲೇಖಕರುಗಳಲ್ಲಿ ಕನ್ನಡಾಭಿಮಾನಿಗಳಲ್ಲಿ ದಿಗ್ಭ್ರಮೆ ಹುಟ್ಟಿಸಿದೆ. ಇದೊಂದು ದುಷ್ಟ ಬೆಳವಣಿಗೆ ಎಂದು ಕಿಡಿ ಕಾರಿದ್ದಾರೆ.
ನಾಡೋಜ ಮಹೇಶ್ ಜೋಶಿ ಒಬ್ಬ ಸಾಂಸ್ಕೃತಿಕ ಮನಸ್ಸಿನ ಅಭ್ಯರ್ಥಿಯಾಗಿ ಕಸಾಪ ಚುನಾವಣೆಯಲ್ಲಿ ಭಾಗವಹಿಸಿದ್ದರೆ ಯಾರೂ ವಿರೋಧಿಸುತ್ತಿರಲಿಲ್ಲ. ಚುನಾವಣೆಯ ಪ್ರಾರಂಭದಲ್ಲಿ ಅವರು ಹಾಗೆಯೇ ನಡೆದುಕೊಂಡಿದ್ದರಿಂದ ಯಾರೂ ಚಕಾರವೆತ್ತಿರಲಿಲ್ಲ. ಆದರೆ, ಈಗ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾದ ಕಸಾಪಕ್ಕೆ ಆಳುವ ಪಕ್ಷದ ಬೆಂಬಲವನ್ನು ನೇರವಾಗಿ ಘೋಷಿಸಿಕೊಂಡು ಚುನಾವಣೆಗೆ ಹೊರಟಿರುವುದು ಖೇದಕರ ಸಂಗತಿ. ಕಸಾಪದ ಮೂಲ ಆಶಯಕ್ಕೆ ವಿರುದ್ದವಾದ ನಡೆ ಇದಾಗಿರುವುದರಿಂದ ಅವರು ಅಧ್ಯಕ್ಷ ಪದವಿಗೆ ಸ್ಪರ್ಧಿಸುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
“ಮಹೇಶ್ ಜೋಷಿ ರಾಜಕೀಯ ಪಕ್ಷ ಮತ್ತು ರಾಜಕೀಯ ಸಂಘಟನೆಗಳ ನೇರ ಬೆಂಬಲ ಪಡೆಯಲು ಮುಂದಾಗಿರುವುದನ್ನು ನಾವು ಖಂಡಿಸುವುದಲ್ಲದೆ, ಅವರಿಗೆ ನವೆಂಬರ್ 21 ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ನೀಡದಿರುವಂತೆ ಎಲ್ಲ ಸಾಹಿತ್ಯಕ ಮನಸುಗಳಲ್ಲಿ ವಿನಂತಿಸಿಕೊಳ್ಳುತ್ತೇವೆ“ಎಂದು ಅವರು ಸಮಸ್ತ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರಿಗೆ ಮನವಿ ಮಾಡಿದ್ದಾರೆ.