ತುಮಕೂರು: ಮಹಿಳೆಗೆ ಹಣ ಡಬ್ಲಿಂಗ್ ಆಸೆ ತೋರಿಸಿ, 9.60 ಲಕ್ಷ ರೂ ವಂಚಿಸಿದ್ದ ಐದು ಜನ ಖದೀಮರ ತಂಡವನ್ನು ಜಿಲ್ಲೆಯ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.
ತುರುವೇಕೆರೆ ತಾಲೂಕಿನ ಸಂಪಿಗೆ ಹೊಸಹಳ್ಳಿ ನಿವಾಸಿ ಮುತ್ತುರಾಜ್, ಬಾಣಸಂದ್ರ ಮೂಲದ ಪುನೀತ್, ತಿಪಟೂರು ನಿವಾಸಿ ವಸಂತಕುಮಾರ್, ಮಹೇಶ್ ಹಾಗೂ ಗಂಗಾಧರ ಬಂಧಿತ ಆರೋಪಿಗಳು. ಬೆಂಗಳೂರು ನಿವಾಸಿ ವಿಜಯಲಕ್ಷ್ಮಿ ವಂಚನೆಗೆ ಒಳಗಾದ ಮಹಿಳೆ. 100 ರೂ ಮುಖಬೆಲೆಯ ಹಳೆ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ಹುಟ್ಟಿಸಿ ಮಹಿಳೆಗೆ ವಂಚಿಸಿದ್ದರು. ಬಂಧಿತರಿಂದ 5.58 ಲಕ್ಷ ವಶಕ್ಕೆ ಪಡೆದಿದ್ದು, ಮಹಿಳೆಗೆ ವಾಪಸ್ ನೀಡಲಾಗಿದೆ. ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲಿಗೆರೆ ಬಳಿ ಮಹಿಳೆಯಿಂದ ಹಣ ಪಡೆದು ಆರೋಪಿಗಳು ಪರಾರಿಯಾಗಿದ್ದರು.
ಡಬ್ಲಿಂಗ್ ಹಣ ಇದೆ ಎಂದು ಬೀಗ ಹಾಕಿದ್ದ ಕಪ್ಪು ಬಣ್ಣದ ಬ್ಯಾಗ್ ನೀಡಿ, ಇಲ್ಲಿ ಎಣಿಕೆ ಬೇಡ ಮನೆಗೆ ಹೋಗಿ ನೋಡಿಕೊಳ್ಳಿ ಎಂದು ಹೋಗಿದ್ದರು. ಮಹಿಳೆ ಬ್ಯಾಗ್ ಹರಿದು ನೋಡಿದಾಗ ಕಾಗದದ ಕಂತೆ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಗುಬ್ಬಿ ಪೊಲೀಸ್ ಠಾಣೆಗೆ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.