ಬಿಎಸ್‌ವೈಗೆ ‘ಲೋಕಾ’ ಸಂಕಟ: ಎಫ್‌ಐಆರ್‌ ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್‌ ಆದೇಶ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಉಮೇಶ ಗೌರಿ (ಯರಡಾಲ)

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿತ್ತು.ಇದರ ನಡುವೆಯೇ ಬಿಎಸ್‌ವೈಗೆ ಲೋಕಾ ಸಂಕಟ ಎದುರಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಯೋಜನೆಗಳನ್ನು ಗುತ್ತಿಗೆ ನೀಡಲು ಬಿ.ಎಸ್‌.ಯಡಿಯೂರಪ್ಪ, ಅವರ ಕುಟುಂಬದ ಸದಸ್ಯರು ಹಾಗೂ ಸಚಿವ ಎಸ್‌.ಟಿ.ಸೋಮಶೇಖರ್‌ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ನವೆಂಬರ್‌ 2 ರೊಳಗೆ ಅಂತಿಮ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.

ಕಳೆದ ವಾರ ಈ ಪ್ರಕರಣ ಸಂಬಂಧ ಮರು ವಿಚಾರಣೆಗೆ ಹೈಕೋರ್ಟ್‌ ಆದೇಶ ನೀಡಿತ್ತು. ಅದರಂತೆ ಬುಧವಾರ ವಿಚಾರಣೆ ನಡೆಸಿದ ವಿಶೇಷ ಕೋರ್ಟ್‌ ಈ ಆದೇಶ ಹೊರಡಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿ.ಎಸ್‌.ಯಡಿಯೂರಪ್ಪ, ‘ನನಗೆ ನ್ಯಾಯಾಂಗದ ಮೇಲೆ ವಿಶ್ವಾಸ ಇದೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಇದರಿಂದ ನಾನು ಹೊರಬರುತ್ತೇನೆ. ಇದೆಲ್ಲವೂ ಸಾಮಾನ್ಯ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಲ್ಲ.‌ ಇದರಲ್ಲಿ ಸತ್ಯಾಂಶ ಏನು ಇಲ್ಲ’ ಎಂದರು.ನಿಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ಇದೆಯಾ ಎಂಬ ಪ್ರಶ್ನೆಗೆ, ‘ಖಂಡಿತ ಇದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಕರಣ: ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಂಬಂಧ ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್‌.ಯಡಿಯೂರಪ್ಪ ಅವರ ಪರವಾಗಿ ಐಎಎಸ್‌ ಅಧಿಕಾರಿ ಡಾ.ಜಿ.ಸಿ. ಪ್ರಕಾಶ್‌ 12 ಕೋಟಿ ರೂ. ನೀಡಲು ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಗೆ ಬೇಡಿಕೆಯಿಟ್ಟಿದ್ದರು. ಚಂದ್ರಕಾಂತ್‌ ರಾಮಲಿಂಗ್‌ ಅವರು ಕೆ.ರವಿ ಅವರಿಗೆ 12 ಕೋಟಿ ರೂ. ಹಣ ನೀಡಿದ್ದರು. ಆ ಹಣವನ್ನು ಬಿ.ವೈ.ವಿಜಯೇಂದ್ರ ಮೂಲಕ ಯಡಿಯೂರಪ್ಪ ಅವರಿಗೆ ಪಾವತಿಸಲು ಪ್ರಕಾಶ್‌ ಪಡೆದುಕೊಂಡಿದ್ದರು ಎಂದು ದೂರುದಾರರು ಆರೋಪಿಸಿದ್ದರು.

ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್‌. ಯಡಿಯೂರಪ್ಪ ಮತ್ತು ಪುತ್ರ ಬಿ.ವೈ. ವಿಜಯೇಂದ್ರ ಸೇರಿ ಅವರ ಕುಟುಂಬಸ್ಥರು ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯಿಂದ 12 ಕೋಟಿ ರೂ. ನಗದು ಸ್ವೀಕರಿಸಿದ ಸಂಬಂಧ ದಾಖಲಾಗಿದ್ದ ಖಾಸಗಿ ದೂರಿನ ಮರು ವಿಚಾರಣೆ ನಡೆಸಲು ಹೈಕೋರ್ಟ್‌ ಜನಪ್ರತಿನಿಧಿಗಳ ಕೋರ್ಟ್‌ಗೆ ಕಳೆದವಾರ ಆದೇಶ ನೀಡಿತ್ತು. ಈಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ತನಿಖೆಗೆ ಆದೇಶಿಸಿದೆ.

ಪ್ರಕರಣದಲ್ಲಿ ಬಿ.ಎಸ್‌. ಯಡಿಯೂರಪ್ಪ, ಪುತ್ರ ಬಿ.ವೈ.ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ, ಅಳಿಯ ಸಂಜಯ್‌ ಶ್ರೀ, ಚಂದ್ರಕಾಂತ ರಾಮಲಿಂಗಮ್‌, ಸಚಿವ ಎಸ್‌.ಟಿ.ಸೋಮಶೇಖರ್‌, ಡಾ.ಜಿ.ಸಿ.ಪ್ರಕಾಶ್‌, ಕೆ.ರವಿ, ವಿರೂಪಾಕ್ಷಪ್ಪ ಯಮಕನಮರಡಿ ಆರೋಪ ಎದುರಿಸುತ್ತಿದ್ದಾರೆ.

ಶೆಲ್‌ ಕಂಪನಿಗಳ ಮೂಲಕ ಕೋಟ್ಯಂತರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಸಂಬಂಧ ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಕಾಗ್ನಿಜೆನ್ಸ್‌ ತೆಗೆದುಕೊಳ್ಳುವುದಕ್ಕೆ ವಿಶೇಷ ನ್ಯಾಯಾಲಯ ಅಧಿಕಾರ ಹೊಂದಿಲ್ಲ. ಆದರೆ, ಆ ಕುರಿತು ದೂರುದಾರರು ಸೂಕ್ತ ಪ್ರಕ್ರಿಯೆ ಮೂಲಕ ಮುಂದುವರಿಸಬಹುದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತ್ತು.

ಟಿ.ಜೆ. ಅಬ್ರಹಾಂ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್‌, ಪ್ರಕರಣ ಸಂಬಂಧ ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಖಾಸಗಿ ದೂರು ದಾಖಲಿಸಲು ದೂರುದಾರರಿಗೆ ರಾಜ್ಯಪಾಲರು ಅಗತ್ಯ ಪೂರ್ವಾನುಮತಿ ನೀಡಲು ನಿರಾಕರಿಸಿದ್ದಾರೆ. ಅದನ್ನು ಆಧರಿಸಿ ದೂರು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿ ವಿಶೇಷ ನ್ಯಾಯಾಲಯವು ಖಾಸಗಿ ದೂರನ್ನು ರದ್ದುಪಡಿಸಿತ್ತು. ಆದರೆ, ರಾಜ್ಯಪಾಲರು ಪೂರ್ವಾನುಮತಿ ನಿರಾಕರಿಸಿದ ಮಾತ್ರಕ್ಕೆ ಯಡಿಯೂರಪ್ಪ ವಿರುದ್ಧದ ಖಾಸಗಿ ದೂರಿನ ವಿಚಾರಣೆ ಮುಂದುವರಿಸಲು ಯಾವುದೇ ಅಡ್ಡಿಯಿಲ್ಲಎಂದು ಸ್ಪಷ್ಟಪಡಿಸಿದೆ.

ಪೂರ್ವಾನುಮತಿಗೆ ತನಿಖಾ ಸಂಸ್ಥೆಯ ಅಧಿಕಾರಿ ಮನವಿ ಸಲ್ಲಿಸಬೇಕೇ ಹೊರತು ದೂರುದಾರರಲ್ಲ. ರಾಜ್ಯಪಾಲರು ದೂರುದಾರಿಗೆ ಪೂರ್ವಾನುಮತಿ ನಿರಾಕರಿಸಿರುವುದಕ್ಕೆ ಕಾನೂನಿನ ಪ್ರಾಮುಖ್ಯತೆಯಿಲ್ಲವಾಗಿದ್ದು, ಅದನ್ನು ನಿರ್ಲಕ್ಷಿಸಬೇಕಿದೆ. ಆದ್ದರಿಂದ ರಾಜ್ಯಪಾಲರು ಪೂರ್ವಾನುಮತಿ ನೀಡಿಲ್ಲ ಎಂಬ ಕಾರಣಕ್ಕೆ ವಿಶೇಷ ನ್ಯಾಯಾಲಯ ದೂರು ರದ್ದುಪಡಿಸಿರುವುದು ಸಮಂಜಸವಾಗಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಡುವ ಮೂಲಕ ಪ್ರಕರಣಕ್ಕೆ ಮರು ಜೀವ ನೀಡಿದೆ. ಅಲ್ಲದೆ, ಖಾಸಗಿ ದೂರನ್ನು ವಜಾಗೊಳಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್‌, ಯಾವ ಹಂತದಲ್ಲಿ ಪ್ರಕರಣ ಇತ್ತೋ, ಅದೇ ಹಂತದಿಂದ ವಿಚಾರಣೆ ಮುಂದುವರಿಸಬೇಕು ಎಂದು ನಿರ್ದೇಶಿಸಿತ್ತು.

 

 

 

 

 

 

 

 

 

 

 

(ಕೃಪೆ:ವಿಕ)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";