ಕರ್ನಾಟಕದ ಬಹುಸಂಖ್ಯಾತ ಸಮುದಾಯಗಳಲ್ಲಿ ಪಂಚಮಸಾಲಿ ಸಮಾಜವು ಅಗ್ರಗಣ್ಯವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಬೆಳಗಾವಿ:ಮೀಸಲಾತಿಗಾಗಿ ಕೂಡಲಸಂಗಮ ಜಗದ್ಗುರುಗಳ ಪಾದಯಾತ್ರೆಯ ವರ್ಷಾಚರಣೆ ನಿಮಿತ್ತ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತ ಪಂಚಮಸಾಲಿ ಸಮುದಾಯವು ಕೃಷಿ-ಕಾರ್ಮಿಕ ನಿರತ, ದಾಸೋಹ ರೊಪಿತ,ಧರ್ಮ ಸಹಿತ, ಭೇದರಹಿತ ಹಾಗೂ ರಾಷ್ಟ್ರ ಭಕ್ತಿ ಸಂಕಲ್ಪಿತವಾದ ಸಮಾಜವೇ ಪಂಚಮಸಾಲಿ ಸಮಾಜವಾಗಿದೆ ಎಂದರು.
ಜನಸಂಖ್ಯೆಯಲ್ಲಿ ಈ ಸಮುದಾಯ ದೊಡ್ಡದಾದರೂ ಸಹ ಆರ್ಥಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಅತ್ಯಂತ ಹಿಂದುಳಿಯಲ್ಪಟ್ಟ ಸಮಾಜವಾಗಿದೆ.ಕೃಷಿಯನ್ನೇ ಮೂಲ ಕಾಯಕವಾಗಿಸಿಕೊಂಡ ಈ ಸಮಾಜ ಅತಿವೃಷ್ಟಿ ,ಅನಾವೃಷ್ಠಿ ಹಾಗೂ ಪ್ರಕೃತಿ ವಿಕೋಪದ ವೈಪರೀತ್ಯದಿಂದಾಗಿ ಸರಿಯಾದ ಬೆಳೆ ಮತ್ತು ಸೂಕ್ತ ಬೆಲೆ ಇಲ್ಲದೆ ಸರ್ವದೃಷ್ಠಿಯಿಂದಲೂ ಹಿಂದುಳಿದಿದೆ. ಈಗಾಗಲೇ ಅನೇಕ ನಮ್ಮ ಸಹೋದರ ಸಮಾಜಗಳಿಗೆ 2ಎ ಮೀಸಲಾತಿಯನ್ನು ನೀಡಿದ್ದಾರೆ. ಆದರೆ ಸರ್ಕಾರದ ಯಾವುದೇ ಸೌಲಭ್ಯ ಹಾಗೂ ಸವಲತ್ತುಗಳು ಪಡೆಯದೇ ಪಂಚಮಸಾಲಿ ಸಮಾಜ ಈ ಲಾಭಗಳಿಂದ ವಂಚಿತಗೊಂಡಿದೆ.
ಅದಕ್ಕಾಗಿ “ಶೈಕ್ಷಣಿಕ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿ ಹೋರಾಟ ಒಂದೇ ಮಾರ್ಗ” ಎಂದು 2012 ಡಿಸೆಂಬರ್ 7 ರಂದು ಪಾದಯಾತ್ರೆ ಮೂಲಕ ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಗೂ 2020 ಅಕ್ಟೋಬರ್ 28 ರಂದು ರಾಜ್ಯ ಮಟ್ಟದ ಉಪವಾಸ ಸತ್ಯಾಗ್ರಹ,2020 ಡಿಸೆಂಬರ್ ನಲ್ಲಿ ಕೂಡುತ್ತೇವೆ ರಕ್ತ ಪಡೆಯುತ್ತೇವೆ ಮೀಸಲಾತಿ ಎಂದು ರಾಜ್ಯಾದ್ಯಂತ ರಕ್ತದಾಸೋಹ ಚಳವಳಿ, 2021 ಜನವರಿ 14 ರಂದು ಪಂಚಲಕ್ಷ ಹೆಜ್ಜೆಗಳ ಬೃಹತ್ ಐತಿಹಾಸಿಕ ಪಾದಯಾತ್ರೆ ಕೈಗೊಂಡು ಬೆಂಗಳೂರಿನಲ್ಲಿ ಫೆಬ್ರುವರಿ 21ರಂದು 10 ಲಕ್ಷಕ್ಕಿಂತಲೂ ಅಧಿಕ ಜನರನ್ನು ಸೇರಿಸಿ ವಿಶ್ವದಾದ್ಯಂತ ಪಂಚಮಸಾಲಿ ಸಮಾಜವನ್ನು ಪ್ರಥಮ ಬಾರಿಗೆ ಒಗ್ಗೂಡಿಸಿ ಶಕ್ತಿ ಪ್ರದರ್ಶನ ಮಾಡಿ 23 ದಿನಗಳ ನಿರಂತರ ಧರಣಿ ಸತ್ಯಾಗ್ರಹ ಮಾಡಿದ ಫಲವಾಗಿ ಸರಕಾರವು 6 ತಿಂಗಳೊಳಗಾಗಿ ಮೀಸಲಾತಿ ಕೊಡುತೇವೆ ಎನ್ನುವ ಭರವಸೆ ವ್ಯಕ್ತವಾಯಿತು. ಇದು ಪ್ರಥಮ ಜಯ ಪಡೆಯುವಲ್ಲಿ ಯಶಸ್ವಿಯಾಯಿತು.
ಪಾದಯಾತ್ರೆಗೆ ತನು ಮನ ಧನದಿಂದ ಸಹಾಯ ಸಹಕಾರ ನೀಡಿದ ಸರ್ವರಿಗೂ ಶರಣು ಶರಣಾರ್ಥಿ ಸಂದೇಶ ಜಾಥಾ ಹಾಗೂ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನದ ಮೂಲಕ ಸರಕಾರವನ್ನು ಎಚ್ಚರಗೊಳಿಸುವಲ್ಲಿ ನಿರಂತರ ಯಶಸ್ವಿಯಾಗಿದ್ದೇವೆ.
2022 ಜನವರಿ 14 ರಂದು ಕೂಡಲಸಂಗಮ ಶ್ರೀ ಪೀಠದಲ್ಲಿ ಸಂಕ್ರಾಂತಿಯ ಶುಭದಿನದಂದು ಮೀಸಲಾತಿಗಾಗಿ ಪಾದಯಾತ್ರೆಯ ವರ್ಷಾಚರಣೆ ಹಾಗೂ ಪಂಚಮಸಾಲಿಗಳ ಜಾಗರಣೆ ಮತ್ತು ಮುಖ್ಯಮಂತ್ರಿಗಳಿಂದ 2021-22 ನೇ ಸಾಲಿನ ಶ್ರೀ ಪೀಠದ ಪ್ರತಿಷ್ಠಿತ ರಾಷ್ಟ್ರಮಟ್ಟದ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾಜದ ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ,ಮೀಸಲಾತಿ ಪಡೆಯೋಣ , ಪಂಚಋಣ ತೀರಿಸೋಣ,ಹೊಸ ಇತಿಹಾಸ ನಿರ್ಮಿಸೋಣ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮುದಾಯದ ಸಂಘಟಕರಿಗೆ ಕರೆ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಸಂಗಮೇಶ ವಾಲಿ, ಬಸಬಸೇನೆ ಅಧ್ಯಕ್ಷ ಉಮೇಶ ಗೌರಿ, ಸುಭಾಸ ಗೂಳಶೆಟ್ಟಿ,ರುದ್ರಪ್ಪ ಕುಂಕುರ, ಮಲ್ಲಿಕಾರ್ಜುನ ವಾಲಿ, ಶಂಕರ ಚನ್ನಗೊಣ್ಣವರ, ಮಂಜುನಾಥ ನಾಶಿಪುಡಿ ,ರಾವಸಾಬ ಪಾಟೀಲ, ದ್ಯಾಮನಗೌಡ ಪಾಟೀಲ, ಸುಭಾಸ ಪಾಟೀಲ. ಸಂತೋಷ ಸಂಬಣ್ಣವರ ಸೇರಿದಂತೆ ಅನೇಕರು ಇದ್ದರು