ಆಪರೇಷನ್ ಲೋಟಸ್ ಈಗ ಆಪರೇಷನ್ ಬೋಗಸ್ ಆಗಿದೆ; ಬಿಜೆಪಿಗೆ ಸೇರಲು 20, ಕರೆತರಲು 25 ಕೋಟಿ : ಬಿಜೆಪಿ ವಿರುದ್ಧ ಆಪ್ ಆರೋಪ

ದೆಹಲಿ: ದೆಹಲಿಯಲ್ಲಿ ಅಧಿಕಾರದಲ್ಲಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರವನ್ನು ಶತಾಯಗತಾಯ ಉರುಳಿಸಬೇಕೆಂದು ಕೇಂದ್ರ ಸರ್ಕಾರವು ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆಪ್ ನಾಯಕರು ಗಂಭೀರ ಆರೋಪ ಮಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐವರು ಆಪ್ ನಾಯಕರು ಹಣದ ಪ್ರಲೋಭನೆ ಒಡ್ಡಿ ಶಾಸಕರನ್ನು ಕೊಳ್ಳಲು ಮತ್ತು ಬೆದರಿಕೆ ಹಾಕಿ ಹೆದರಿಸಲು ಮುಂದಾಗಿದೆ ಎಂದು ದೂರಿದರು. 

ಆಪ್ ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೆಹಲಿ ಸರ್ಕಾರವನ್ನು ಕೆಡವಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸುತ್ತೇವೆ’ ಎಂದು ಹೇಳಿದ್ದಾರೆ. ‘ದೆಹಲಿ ಶಾಸಕರ ಒಗ್ಗಟ್ಟು ಒಡೆಯುವ ಪ್ರಯತ್ನಗಳು ಆರಂಭವಾಗಿವೆ. ಮಹಾರಾಷ್ಟ್ರ ಏಕನಾಥ್ ಶಿಂದೆ ಅವರಂತೆ ಮನೀಶ್ ಸಿಸೋಡಿಯಾ ಅವರನ್ನು ತಮ್ಮತ್ತ ಸೆಳೆಯಲು ಬಿಜೆಪಿ ನಾಯಕರು ಯತ್ನಿಸಿದರು. ಬಿಜೆಪಿ ಕಡೆಗೆ ಬಂದರೆ ₹ 20 ಕೋಟಿ ಸಿಗುತ್ತದೆ. ಇಲ್ಲದಿದ್ದರೆ ಸಿಸೋಡಿಯಾ ರೀತಿಯಲ್ಲಿ ಸಿಬಿಐ ತನಿಖೆ ಎದುರಿಸಬೇಕಾಗುತ್ತದೆ’ ಎಂದು ಬಿಜೆಪಿ ಬೆದರಿಕೆ ಹಾಕಿದೆ ಎಂದು ಹೇಳಿದರು.

ಆಪ್ ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ್ ಭಾರತಿ ಮತ್ತು ಕುಲದೀಪ್ ಕುಮಾರ್ ಅವರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವ ಕೆಲ ಬಿಜೆಪಿಯ ಮಿತ್ರರು ₹ 20 ಕೋಟಿ ಆಮಿಷ ಒಡ್ಡಿದರು. ತಮ್ಮೊಂದಿಗೆ ಇತರ ಶಾಸಕರನ್ನು ಕರೆತಂದರೆ ₹ 25 ಕೋಟಿ ನೀಡುವುದಾಗಿ ಹೇಳಿದ್ದರು ಎಂದು ಸಿಂಗ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇತರ ನಾಲ್ವರು ಆಪ್ ಶಾಸಕರು ತಮ್ಮನ್ನು ಓಲೈಸಲು ಬಿಜೆಪಿ ನಾಯಕರು ಹೇಗೆ ಪ್ರಯತ್ನಿಸಿದರು ಎಂದು ವಿವರಿಸಿದರು. 

ಸಿಸೋಡಿಯಾ ವಿರುದ್ಧದ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಬಿಜೆಪಿ ನಾಯಕರಿಗೂ ಗೊತ್ತಿದೆ. ಆದರೆ ಆಪ್ ಸರ್ಕಾರ ಕೆಡವವೇಕು ಎನ್ನುವ ಉದ್ದೇಶದಿಂದ ಅವರು ಇಂತ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಆಪ್ ನಾಯಕರನ್ನು ಸೆಳೆಯುವ ಜವಾಬ್ದಾರಿಯನ್ನು ಬಿಜೆಪಿ ನಾಯಕರಿಗೆ ನೀಡಲಾಗಿದೆ’ ಎಂದು ಸೋಮನಾಥ ಭಾರತಿ ಹೇಳಿದರು.

ದೆಹಲಿಯಲ್ಲಿ ಬಿಜೆಪಿ ನಡೆಸಲು ಯತ್ನಿಸುತ್ತಿರುವ ಆಪರೇಷನ್ ಲೋಟಸ್ ಈಗ ಆಪರೇಷನ್ ಬೋಗಸ್ ಆಗಿದೆ. ಆಪ್ ಶಾಸಕರು ಸಿಸೊಡಿಯಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ‘ಮೋದಿ ಅವರೇ, ನೀವು ಹಲವು ರಾಜ್ಯಗಳಲ್ಲಿ ಈಗಾಗಲೇ ಸರ್ಕಾರ ಕೆಡವಿದ್ದರೆ ಬಿಜೆಪಿಯನ್ನು ಪ್ರತಿಷ್ಠಾಪಿಸಿದ್ದೀರಿ. ಆದರೆ ನೆನಪಿಟ್ಟುಕೊಳ್ಳಿ, ಇದು ದೆಹಲಿ. ಇಲ್ಲಿನ ಜನರು ಮೂರು ಬಾರಿ ಆಪ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ’ ಎಂದು ಹೇಳಿದರು.

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";