ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ರಕ್ಷಣೆಯ ಸದಾಶಯದೊಂದಿಗೆ ಸ್ಥಾಪಿತಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ. ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಹಾಗೂ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವಂತೆ ಮಾಡುವಲ್ಲಿ ಪರಿಷತ್ತಿನ ಎಲ್ಲ ಪದಾಧಿಕಾರಿಗಳ ಜವಾಬ್ದಾರಿ ಹಿರಿದಾದುದು. ಇಂತಹ ಮಹತ್ತರ ಹೊಣೆಯನ್ನು ಹೊತ್ತು ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಎನ್.ಆರ್.ಠಕ್ಕಾಯಿ ಅವರು ಅಭಿನಂದನಾರ್ಹರು. ಉದಯೋನ್ಮುಖ ಸಾಹಿತಿಗೆ ತಾಲ್ಲೂಕಿನ ಸಾರಥ್ಯ ಒಲಿದು ಬಂದಿದ್ದು ಅವರ ಕ್ರಿಯಾಶೀಲತೆ, ಕಾರ್ಯದಕ್ಷತೆ ಹಾಗೂ ಸೃಜನಶೀಲತೆಗೆ ಹಿಡಿದ ಕೈಗನ್ನಡಿ ಎಂದೇ ಹೇಳಬಹುದು. ಠಕ್ಕಾಯಿಯವರ ಮೇಲೆ ತಾಲ್ಲೂಕಿನ ಕನ್ನಡ ಮನಸ್ಸುಗಳ ನಿರೀಕ್ಷೆಗಳೂ ಕೂಡ ಗರಿಗೆದರಿವೆ.
ಎನ್.ಆರ್.ಠಕ್ಕಾಯಿ ಅವರ ಜನ್ಮಸ್ಥಳ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಇಟಗಿ. ಕೃಷಿಯನ್ನು ನಂಬಿದ ಕುಟುಂಬದಲ್ಲಿ ಕಡುಬಡತನದ ಬೇಗೆಯಲ್ಲಿ ನೊಂದು ಬೆಂದು ಛಲದಿಂದ ಬದುಕು ಕಟ್ಟಿಕೊಂಡವರು. ಪ್ರಾಥಮಿಕ ಶಿಕ್ಷಣ ಮುಗಿಸಿ ಹತ್ತನೇ ತರಗತಿ ಓದುತ್ತಿರುವಾಗಲೇ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡವರು. ಸ್ವಗ್ರಾಮದಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿ ಬೆಳಗಾವಿಯ ಬಾವುರಾವ ಕಾಕತ್ಕರ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ಸಿಇಟಿಯಲ್ಲಿ ಉತ್ತಮ ಅಂಕ ಗಳಿಸಿ ಬೆಂಗಳೂರಿನ ಪ್ರತಿಷ್ಠಿತ ಆರ್.ವಿ ಕಾಲೇಜಿನಲ್ಲಿ ಬಿ.ಇಡಿ ಪದವಿಗೆ ಪ್ರವೇಶ ಪಡೆದರು. ಜೀವನದ ಹಾದಿಯಲ್ಲಿ ಶಿಕ್ಷಣ ಮುಂದುವರಿಸಲು ಹಾಗೂ ಸಂಕಷ್ಟದಲ್ಲಿ ಸಹಾಯ ಮಾಡಿದವರನ್ನು ಠಕ್ಕಾಯಿಯವರು ಇಂದಿಗೂ ನೆನೆಯುತ್ತಾರೆ.
ಠಕ್ಕಾಯಿಯವರು 2005ರಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅಗ್ನಿಶಾಮಕರಾಗಿ ನೇಮಕಗೊಂಡರು. ನಂತರ ಕೆ.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ 2006ರಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಆಯ್ಕೆಯಾಗಿ ದಾವಣಗೆರೆಯ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅದೇ ಇಲಾಖೆಯಲ್ಲಿ 2011 ರಲ್ಲಿ ಶಿರಸ್ತೆದಾರ ಹುದ್ದೆಗೆ ಪದೋನ್ನತಿ ಹೊಂದಿ ಚನ್ನಗಿರಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಕೆಲಸ ಮಾಡಿದ್ದಾರೆ. 2012 ರಲ್ಲಿ ಕೆ.ಇ.ಎಸ್ ಪರೀಕ್ಷೆ ಉತ್ತೀರ್ಣರಾಗಿ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ನೇರ ನೇಮಕಾತಿ ಹೊಂದಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅತ್ತಿಗೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ವೃತ್ತಿ ಆರಂಭಿಸಿ ಸದ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಬೇರೆ ಬೇರೆ ಇಲಾಖೆ, ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಆಡಳಿತದ ಜ್ಞಾನ, ಅನುಭವ ಹೊಂದಿದ್ದು ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದ್ದಾರೆ. ನೌಕರಿ ಮಾಡುತ್ತಲೇ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಇಂಗ್ಲಿಷ ಎಂ.ಎ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪಿ.ಜಿ ಡಿಪ್ಲೋಮಾ ಮಾಡಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ಸಿಬ್ಬಂದಿ-ಸಮುದಾಯವನ್ನು ತೊಡಗಿಸಿಕೊಂಡು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಬದುಕಿನ ಮೌಲ್ಯಗಳನ್ನು ಬೆಳೆಸಿ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿಸುವ ಇವರ ಬದ್ಧತೆ, ಕಾಳಜಿ ಪ್ರಶಂಸನೀಯ. ಆಂಗ್ಲ ಭಾಷಾ ಶಿಕ್ಷಕರಾದರೂ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದು ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ್ದು ಶ್ಲಾಘನೀಯ. ಇವರಿಗೆ 2019ರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ, ರೋಟರಿ ಕ್ಲಬ್ ಅಪ್ರಿಶಿಯೇಶನ್ ಅವಾರ್ಡ ಹಾಗೂ 2021 ರ ರೋಟರಿ ಕ್ಲಬ್ ನೇಶನ್ ಬಿಲ್ಡರ್ ಅವಾರ್ಡಗಳು ದೊರೆತಿವೆ. 2020-21 ನೆಯ ಸಾಲಿನ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ನಿರ್ವಹಣಾ ಸಂಸ್ಥೆ (ಎನ್‌ಐಇಪಿಎ) ಹಾಗೂ ರಾಷ್ಟ್ರೀಯ ಶಾಲಾ ನಾಯಕತ್ವ ಕೇಂದ್ರ (ಎನ್‌ಸಿಎಸ್‌ಎಲ್) ಯೋಜನೆಯಡಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಬೂದಿಹಾಳದ ಸರಕಾರಿ ಪ್ರೌಢಶಾಲೆ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಎನ್.ಆರ್.ಠಕ್ಕಾಯಿಯವರಿಗೆ ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ವಿಶೇಷ ಒಲವು. ಓದುವುದು ಎಂದರೆ ಅಚ್ಚುಮೆಚ್ಚು. ಹೈಸ್ಕೂಲ್ ದಿನಗಳಲ್ಲಿ ಚುಟುಕು, ಹನಿಗವನ, ಕವನಗಳನ್ನು ಬರೆದಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಓದುತ್ತಿರುವಾಗ ಭಾಗವಹಿಸಿದ ಎಲ್ಲ ಪ್ರಬಂಧ ಸ್ಪರ್ಧೆಗಳಲ್ಲಿಯೂ ಒಂದು ಬಹುಮಾನ ಪಡೆದಿರುವುದು ಇವರ ವಿಶೇಷ. ಕೇಂದ್ರ ಬಸವ ಸಮಿತಿ ಏರ್ಪಡಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಕಾಲೇಜು ದಿನಗಳಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು, ಪತ್ರಿಕೆಗಳು ಏರ್ಪಡಿಸಿದ ಸಾಹಿತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನೇಕ ಬಹುಮಾನಗಳನ್ನು, ಪ್ರಶಂಸಾ ಪತ್ರಗಳನ್ನು ಗಿಟ್ಟಿಸಿಕೊಂಡಿರುತ್ತಾರೆ. ಬಡತನ ಸಾಧನೆಗೆ ಅಡ್ಡಿಯಾಗದು ಎಂಬಂತೆ ಛಲದಿಂದ ಸವಾಲುಗಳನ್ನೆಲ್ಲ ಎದುರಿಸಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.
ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಕವನ, ಹೈಕು, ಗಜಲ್ ಹಾಗೂ ಲೇಖನಗಳು ಪ್ರಕಟಗೊಂಡಿವೆ. ಉದಯಕಾಲ ಪತ್ರಿಕೆಯಲ್ಲಿ ಪ್ರಕಟವಾದ ಇವರ ‘ಮಕ್ಕಳ ತರಗತಿ ಎಂಬ ಅದ್ಬುತ ಜಗತ್ತಿನ ಸುತ್ತ’ ಎಂಬ ಶೈಕ್ಷಣಿಕ ಲೇಖನವನ್ನು ಮೆಚ್ಚಿ ಮಾಜಿ ಶಿಕ್ಷಣ ಮಂತ್ರಿಗಳು, ಶಾಸಕರಾದ ಎಸ್.ಸುರೇಶ ಕುಮಾರ ಅವರು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದು ಠಕ್ಕಾಯಿಯವರ ಸಾಹಿತ್ಯಿಕ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ. ಇವರ ಲೇಖನ, ಕವನಗಳನ್ನು ಇಷ್ಟಪಟ್ಟು ನಾಡಿನ ಸಹೃದಯ ಓದುಗರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವಿವಿಧ ಕವಿಗೋಷ್ಟಿ, ಸಮ್ಮೇಳನ, ವ್ಯಕ್ತಿತ್ವ ವಿಕಸನ ಕಾರ್ಯಾಗಾರ, ವಿಚಾರ ಸಂಕೀರ್ಣಗಳಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗೆ ಧಾರವಾಡ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ಖ್ಯಾತ ಸಾಹಿತಿ ಬಸು ಬೇವಿನಗಿಡದ ಅವರು ಪ್ರಸ್ತುತಪಡಿಸಿದ ಇವರ ಸಾಹಿತ್ಯ ಸಂವಾದ ಕಾರ್ಯಕ್ರಮ ಸಾಹಿತ್ಯಾಸಕ್ತರ ಪ್ರಶಂಸೆಗೆ ಪಾತ್ರವಾಗಿದೆ.
ಎನ್.ಆರ್.ಠಕ್ಕಾಯಿಯವರ ನೇತೃತ್ವದಲ್ಲಿ ಬೈಲಹೊಂಗಲ ತಾಲ್ಲೂಕಿನಲ್ಲಿ ಕನ್ನಡದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರಲಿ. ಕನ್ನಡದ ವಿಭಿನ್ನ, ವಿಶಿಷ್ಟ ಹಾಗೂ ವಿನೂತನ ಚಟುವಟಿಕೆಗಳು ಜರುಗಲಿ. ಕನ್ನಡ ಸಾಹಿತ್ಯ ಮನೆಮನೆಗಳಿಗೆ, ಮನಮನಗಳಿಗೆ ಹರಡುವಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಪರಿಷತ್ತಿನಿಂದ ಹಮ್ಮಿಕೊಳ್ಳಲಿ ಎಂದುದು ಎಲ್ಲರ ಆಶಯ. ತಾಲ್ಲೂಕಿನ ಸಾಹಿತ್ಯ ಪ್ರತಿಭೆಗಳಿಗೆ ಸಾಕಷ್ಟು ವೇದಿಕೆಗಳನ್ನು ಕಲ್ಪಿಸಿಕೊಡುವುದರ ಮೂಲಕ ಕನ್ನಡ ಕಲರವ ಮೊಳಗಿಸಲಿ ಎಂಬುದು ಎಲ್ಲರ ಹಾರೈಕೆ.
ಲೇಖಕರು:ಆಕಾಶ ಅರವಿಂದ ಥಬಾಜ. ಬೆಳಗಾವಿ
ರೆಡಿಯಾಲಾಜಿ ಇಮೇಜಿಂಗ್ ಆಪೀಸರ್,
ಸಮುದಾಯ ಆರೊಗ್ಯ ಕೇಂದ್ರ
ಹಿರೇಬಾಗೇವಾಡಿ
M-9448634208/9035419700